ಸಾರ್ವತ್ರಿಕ ಮುಷ್ಕರ; ಪೋಸ್ಟರ್‌ ಬಿಡುಗಡೆ

7

ಸಾರ್ವತ್ರಿಕ ಮುಷ್ಕರ; ಪೋಸ್ಟರ್‌ ಬಿಡುಗಡೆ

Published:
Updated:
Prajavani

ಹೊಸಪೇಟೆ: ಜ. 8, 9ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಪೋಸ್ಟರ್‌ ಬಿಡುಗಡೆ ಕಾರ್ಯಕ್ರಮ ಇಲ್ಲಿನ ರೋಟರಿ ವೃತ್ತದಲ್ಲಿ ಗುರುವಾರ ಸಂಜೆ ನಡೆಯಿತು.

ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿ, ಪೋಸ್ಟರ್‌ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಎ.ಐ.ಟಿ.ಯು.ಸಿ. ಜಿಲ್ಲಾ ಅಧ್ಯಕ್ಷ ಭಾಸ್ಕರ್‌ ರೆಡ್ಡಿ, ‘ದೇಶದಲ್ಲಿ ಕಾರ್ಮಿಕರ ಪರವಾದ 44 ಕಾನೂನುಗಳಿವೆ. ಅವುಗಳನ್ನು ಕೇಂದ್ರ ಸರ್ಕಾರ ಬದಲಿಸಿ ನಾಲ್ಕು ಕೋಡ್‌ಗಳಾಗಿ ಮಾಡಲು ಹೊರಟಿದೆ. ಜತೆಗೆ ಕಾರ್ಮಿಕ ಕಾನೂನು ತಿದ್ದುಪಡಿ ಮಸೂದೆ ತರಲು ಮುಂದಾಗಿದೆ. ಒಂದುವೇಳೆ ಮಸೂದೆಗೆ ಒಪ್ಪಿಗೆ ಸಿಕ್ಕರೆ ದೇಶದಲ್ಲಿರುವ ಕಾರ್ಮಿಕರು ಬೀದಿಗೆ ಬೀಳುತ್ತಾರೆ. ಅದನ್ನು ವಿರೋಧಿಸಿ ಜ. 8, 9ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ಕೊಡಲಾಗಿದೆ’ ಎಂದು ತಿಳಿಸಿದರು.

‘ಆಟೊ, ಬಸ್‌, ಲಾರಿ, ಹಮಾಲರು, ಅಂಗನವಾಡಿ, ಬ್ಯಾಂಕು, ಎಲ್‌.ಐ.ಸಿ., ಸರ್ಕಾರಿ ನೌಕರರ ಒಕ್ಕೂಟ ಸೇರಿದಂತೆ ಅನೇಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿ, ಭಾಗವಹಿಸಲಿವೆ. ಎರಡು ದಿನ ಇಡೀ ಭಾರತ ಸಂಪೂರ್ಣ ಸ್ತಬ್ಧಗೊಳ್ಳಲಿದೆ’ ಎಂದು ಹೇಳಿದರು.

‘ಮೋಟಾರ್‌ ವಾಹನ ತಿದ್ದುಪಡಿ ಮಸೂದೆ, ಅಂಗನವಾಡಿಗಳಿಗೆ ಆಹಾರ ಪೂರೈಸುವ ಐ.ಸಿ.ಡಿ.ಎಸ್‌. ಯೋಜನೆಯ ಹಣವನ್ನು ಶೇ 75ರಷ್ಟು ಕಡಿತಗೊಳಿಸಲಾಗಿದೆ. ಹೀಗೆ ಮಾಡಿದರೆ ಅಪೌಷ್ಟಿಕತೆ ನಿವಾರಿಸಲು ಹೇಗೆ ಸಾಧ್ಯವಾಗುತ್ತದೆ. ಕಾರ್ಮಿಕ ಹಾಗೂ ಬಡವರ ವಿರುದ್ಧ ಕಾನೂನು ತರಲು ಹೊರಟಿರುವ ಕೇಂದ್ರದ ಕಣ್ಣು ತೆರೆಸಲು ಈ ಮುಷ್ಕರ ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.

ಕಾರ್ಮಿಕ ಸಂಘಟನೆಗಳ ಒಕ್ಕೂಟದ ಮುಖಂಡರಾದ ಕರುಣಾನಿಧಿ, ಕೆ.ಎಂ. ಸಂತೋಷ್‌ ಕುಮಾರ್‌, ನಾಗರತ್ನಮ್ಮ, ಪ್ರಕಾಶ್‌, ಯಲ್ಲಾಲಿಂಗ, ಚನ್ನಬಸಯ್ಯ, ಪ್ರಕಾಶ್‌, ಶಕುಂತಲಮ್ಮ, ಎಂ. ಗೋಪಾಲ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !