ಭಾನುವಾರ, ಆಗಸ್ಟ್ 1, 2021
26 °C

ಜಿಟಿಜಿಟಿ ಮಳೆಯಲ್ಲೇ ಪೃಥ್ವಿರಾಜ್‌ ಸಿಂಗ್‌ ಅಂತ್ಯಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ(ವಿಜಯನಗರ): ಮಡುಗಟ್ಟಿದ ದುಃಖ, ಅಶ್ರುತರ್ಪಣದ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರ ತಂದೆ ಪೃಥ್ವಿರಾಜ್‌ ಸಿಂಗ್‌ (84) ಅವರ ಅಂತ್ಯಕ್ರಿಯೆ ಭಾನುವಾರ ಸಂಜೆ ನಗರದ ರಾಣಿಪೇಟೆಯಲ್ಲಿ ನಡೆಯಿತು.

ಜಿಟಿಜಿಟಿ ಮಳೆಯ ನಡುವೆಯೇ ರಜಪೂತ ಸಮಾಜದ ವಿಧಿ ವಿಧಾನದ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮಧ್ಯಾಹ್ನ ಪೃಥ್ವಿರಾಜ್‌ ಸಿಂಗ್‌ ಅವರ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆಯೇ ವಿವಿಧ ಸಮಾಜದ ಮುಖಂಡರು, ಗಣ್ಯರು, ಸಾರ್ವಜನಿಕರು ಆನಂದ್‌ ಸಿಂಗ್‌ ಅವರ ಮನೆಗೆ ದೌಡಾಯಿಸಿ, ಅಂತಿಮ ದರ್ಶನ ಪಡೆದರು. ಹೊತ್ತು ಕಳೆದಂತೆ ಜನರ ಸಂಖ್ಯೆ ಹೆಚ್ಚಾಯಿತು.

ಅಂತ್ಯಸಂಸ್ಕಾರದ ಕೊನೆಯವರೆಗೂ ಆನಂದ್‌ ಸಿಂಗ್‌ ಅವರು ತಂದೆಯ ಪಾರ್ಥಿವ ಶರೀರದ ಬಳಿಯೇ ನಿಂತಿದ್ದರು. ಸಿಂಗ್ ಪತ್ನಿ ಲಕ್ಷ್ಮಿ ಸಿಂಗ್‌, ಮಗ ಸಿದ್ದಾರ್ಥ, ಸಂಬಂಧಿಕರಾದ ಧರ್ಮೇಂದ್ರ ಸಿಂಗ್‌, ಸಂದೀಪ್‌ ಸಿಂಗ್‌ ಇದ್ದರು.

ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು, ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಈ. ತುಕಾರಾಂ, ಜೆ.ಎನ್‌. ಗಣೇಶ್‌, ಪಿ.ಟಿ. ಪರಮೇಶ್ವರ ನಾಯ್ಕ, ಬಿಜೆಪಿ ಮುಖಂಡ ಎಚ್‌.ಆರ್‌. ಗವಿಯಪ್ಪ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಕಾಡಾ ಅಧ್ಯಕ್ಷ ಎಚ್‌.ಎಂ. ತಿಪ್ಪೇರುದ್ರಸ್ವಾಮಿ, ವಿಜಯನಗರ ರಾಜವಂಶಸ್ಥ ಕೃಷ್ಣದೇವರಾಯ, ಡಿವೈಎಸ್ಪಿ ವಿ. ರಘುಕುಮಾರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಬಸರೆಡ್ಡಿ, ಜಿಲ್ಲಾ ಆರೋಗ್ಯ ಅಧಿಕಾರಿ ಎಚ್‌.ಎಲ್‌. ಜನಾರ್ದನ ಸೇರಿದಂತೆ ಹಲವರು ಭೇಟಿ ನೀಡಿ ಅಂತಿಮ ದರ್ಶನ ಪಡೆದು, ಆನಂದ್‌ ಸಿಂಗ್‌ ಅವರಿಗೆ ಸಾಂತ್ವನ ಹೇಳಿದರು.

ನಟ ರಾಜ್‌ಕುಮಾರ್‌ ಅವರ ಕಟ್ಟಾ ಅಭಿಮಾನಿಯಾಗಿದ್ದ ಪೃಥ್ವಿರಾಜ್‌ ಸಿಂಗ್‌ ಅವರು ಅವರಂತೆಯೇ ಅವರ ಎರಡು ಕಣ್ಣುಗಳನ್ನು ದಾನ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು