ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮಕ್‌ ಹರಾಮ್‌ ಪಟ್ಟಿಗೆ ಆನಂದ್‌ ಸಿಂಗ್‌

ಕೆ.ಪಿ.ಸಿ.ಸಿ. ಅಧ್ಯಕ್ಷ ದಿನೇಶ ಗುಂಡೂರಾವ್‌ ವಾಗ್ದಾಳಿ
Last Updated 30 ನವೆಂಬರ್ 2019, 15:38 IST
ಅಕ್ಷರ ಗಾತ್ರ

ಹೊಸಪೇಟೆ: ‘ಆಯ್ಕೆ ಮಾಡಿದ ಮತದಾರರಿಗೆ ಮೋಸ ಮಾಡಿರುವ ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಅವರು ನಮಕ್‌ ಹರಾಮ್‌ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ’ ಎಂದು ಕೆ.ಪಿ.ಸಿ.ಸಿ. ಅಧ್ಯಕ್ಷ ದಿನೇಶ ಗುಂಡೂರಾವ್‌ ವಾಗ್ದಾಳಿ ನಡೆಸಿದರು.

ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಅಲ್ಪಸಂಖ್ಯಾತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಕಿತ್ತೂರು ರಾಣಿ ಚನ್ನಮ್ಮಳಿಗೆ ಮಲ್ಲಪ್ಪ ಶೆಟ್ಟಿ, ಟಿಪ್ಪು ಸುಲ್ತಾನ್‌ಗೆ ಮೀರ್‌ ಸಾಧಿಕ್‌ ಮೋಸ ಮಾಡಿ ಯುದ್ಧದಲ್ಲಿ ಸೋಲುವಂತೆ ಮಾಡಿದ್ದರು. ಅದೇ ರೀತಿ ಹಿಂದಿನ ಚುನಾವಣೆಯಲ್ಲಿ ಟಿಕೆಟ್‌ ಕೊಟ್ಟ ಕಾಂಗ್ರೆಸ್‌ ಪಕ್ಷಕ್ಕೆ, ಆಯ್ಕೆ ಮಾಡಿದ ವಿಜಯನಗರ ಕ್ಷೇತ್ರದ ಮತದಾರರಿಗೆ ಆನಂದ್‌ ಸಿಂಗ್‌ ಮೋಸ ಮಾಡಿದ್ದಾರೆ. ಅವರೊಬ್ಬ ‘ದೋಖೆ ಬಾಜ್‌, ನಮಕ್‌ ಹರಾಮ್‌’ ಎಂದು ಟೀಕಿಸಿದರು.

‘ಚುನಾವಣೆಗೆ ಸ್ಪರ್ಧಿಸಲು ‘ಬಿ’ ಫಾರಂ ಕೊಟ್ಟ ಕಾಂಗ್ರೆಸ್‌ ಬೆನ್ನಿಗೆ ಸಿಂಗ್‌ ಚೂರಿ ಹಾಕಿದ್ದಾರೆ. ಅವರಿಗೆ ಪಾಠ ಕಲಿಸಬೇಕು. ಇದು ಕ್ಷೇತ್ರದ ಜನರ ಸ್ವಾಭಿಮಾನದ ಪ್ರಶ್ನೆ. ಇಂತಹವರು ಗೆದ್ದರೆ ಯಾರಿಗೂ ಒಳ್ಳೆಯದಾಗಲ್ಲ. ಒಳ್ಳೆಯವರು ರಾಜಕೀಯಕ್ಕೆ ಬರುವುದು ಕಷ್ಟವಾಗುತ್ತದೆ’ ಎಂದರು.

‘ಈ ಚುನಾವಣೆ ನಿಜಕ್ಕೂ ಬೇಕಿತ್ತಾ ಎಂದು ಮತದಾರರು ಒಮ್ಮೆ ಪ್ರಶ್ನೆ ಮಾಡಿಕೊಳ್ಳಬೇಕು. ಈ ಚುನಾವಣೆಯಿಂದ ರೈತರು, ಯುವಕರಿಗೆ ಏನಾದರೂ ಪ್ರಯೋಜನವಾಗಲಿದೆಯೇ. 15 ಜನ ಅನರ್ಹ ಶಾಸಕರ ರಾಜೀನಾಮೆಯಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಅವರು ಇಡೀ ದೇಶದಲ್ಲೇ ರಾಜ್ಯದ ಮಾನ, ಮರ್ಯಾದೆ ತೆಗೆದಿದ್ದಾರೆ. ಇಂತಹವರು ವಿಧಾನಸಭೆಗೆ ಹೋಗಬೇಕಾ’ ಎಂದು ಪ್ರಶ್ನಿಸಿದರು.

ಶಾಸಕ ಕೆ.ಆರ್‌. ರಮೇಶ ಕುಮಾರ್‌, ‘ಇದು ಕಾಂಗ್ರೆಸ್‌–ಬಿಜೆಪಿ ನಡುವಿನ ಚುನಾವಣೆಯಲ್ಲ. ಅಭಿವೃದ್ಧಿಗಾಗಿ ನಡೆಯುತ್ತಿರುವ ಚುನಾವಣೆಯೂ ಅಲ್ಲ. ಪ್ರಾಮಾಣಿಕ–ಅಪ್ರಾಮಾಣಿಕರ ನಡುವಿನ ಚುನಾವಣೆ’ ಎಂದು ಹೇಳಿದರು.

‘ಉಪಚುನಾವಣೆಗೆ ಸ್ಪರ್ಧಿಸುತ್ತಿರುವ ಹದಿನೈದು ಜನ ನಾಲಾಯಕರು ಸೋತರೆ ಭವಿಷ್ಯದಲ್ಲಿ ದೇಶದಲ್ಲಿ ಇಂತಹ ಕೆಲಸ ಯಾರು ಮಾಡಲಾರರು. ಆ ಜವಾಬ್ದಾರಿಯನ್ನು ಸುಪ್ರೀಂಕೋರ್ಟ್‌ ಅತ್ಯಂತ ವಿವೇಚನೆಯಿಂದ ಜನರಿಗೆ ಕೊಟ್ಟಿದೆ’ ಎಂದರು.

‘ಸಾಮಾನ್ಯವಾಗಿ ಹಾಲಿ ಶಾಸಕರು ಸತ್ತರೆ ಉಪಚುನಾವಣೆ ನಡೆಯುವುದು ಸಾಮಾನ್ಯ. ಆದರೆ, ವ್ಯಕ್ತಿ ಜೀವಂತವಾಗಿದ್ದರೂ ಈ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದೆ. ಆನಂದ್‌ ಸಿಂಗ್‌ ನೂರು ವರ್ಷ ಬದುಕಲಿ. ಆದರೆ, ಗೌರವದಿಂದ ಬದುಕಲಿ’ ಎಂದು ಹೇಳಿದರು.

ರಾಜ್ಯಸಭೆ ಸದಸ್ಯ ನಾಸೀರ್‌ ಹುಸೇನ್‌, ‘ಆನಂದ್‌ ಸಿಂಗ್‌ ತನ್ನ ಸ್ವಾರ್ಥಕ್ಕಾಗಿ ರಾಜೀನಾಮೆ ಕೊಟ್ಟಿದ್ದಾರೆ. ಅವರಿಗೆ ಶಾಶ್ವತವಾಗಿ ಜನ ಅನರ್ಹಗೊಳಿಸಬೇಕು’ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ ಮಾತನಾಡಿ, ‘ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸುವುದಕ್ಕಾಗಿಯೇ ಎನ್‌.ಎಂ. ನಬಿ ಅವರನ್ನು ಚುನಾವಣೆಗೆ ನಿಲ್ಲಿಸಲಾಗಿದೆ. ಇದು ಬಿಜೆಪಿಯವರ ಕುತಂತ್ರ’ ಎಂದು ಆರೋಪಿಸಿದರು.

ಶಾಸಕರಾದ ಭೀಮಾ ನಾಯ್ಕ, ಜೆ.ಎನ್‌. ಗಣೇಶ್‌, ಬೋಸರಾಜು, ಪಿ.ಟಿ. ಪರಮೇಶ್ವರ ನಾಯ್ಕ, ಐವನ್‌ ಡಿಸೋಜಾ, ಕೆ.ಸಿ. ಕೊಂಡಯ್ಯ, ಎ.ಐ.ಸಿ.ಸಿ. ಕಾರ್ಯದರ್ಶಿ ಸಾಕೆ ಶೈಲಜನಾಥ್‌, ಮುಖಂಡರಾದ ಬಸವರಾಜ ರಾಯರಡ್ಡಿ, ವಿ.ಎಸ್‌. ಉಗ್ರಪ್ಪ, ಅಬ್ದುಲ್‌ ವಹಾಬ್‌, ಸಿರಾಜ್‌ ಶೇಖ್‌, ದೀಪಕ್‌ ಸಿಂಗ್‌, ಕಟಗಿ ಸಾಧಿಕ್‌, ನಿಂಬಗಲ್‌ ರಾಮಕೃಷ್ಣ, ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ರಾಜ್ಯ ಅಧ್ಯಕ್ಷ ಸಯೀದ್‌ ಅಹಮ್ಮದ್‌, ಜಿಲ್ಲಾ ಘಟಕದ ಅಧ್ಯಕ್ಷ ಫಹೀಮ್‌ ಬಾಷಾ, ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶಿವಯೋಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT