ಶುಕ್ರವಾರ, ನವೆಂಬರ್ 22, 2019
19 °C

ಕರಡಿಧಾಮಕ್ಕೆ 25 ವರ್ಷ; ವರ್ಷವಿಡೀ ಕಾರ್ಯಕ್ರಮ

Published:
Updated:
Prajavani

ಹೊಸಪೇಟೆ: ತಾಲ್ಲೂಕಿನ ಬಿಳಿಕಲ್ಲು ಪೂರ್ವ ಕಾದಿಟ್ಟ ಅರಣ್ಯ ಪ್ರದೇಶದ ದರೋಜಿ ಕರಡಿಧಾಮಕ್ಕೆ 25 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ವನ್ಯಜೀವಿ ಮತ್ತು ನಿಸರ್ಗಪರ ಸಂಸ್ಥೆ, ವನ್ಯಜೀವಿ ಪ್ರೇಮಿಗಳು ವರ್ಷವಿಡೀ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದಾರೆ.

ಗುರುವಾರ ರಾತ್ರಿ ನಗರದಲ್ಲಿ ನಡೆದ ಸಂಸ್ಥೆಯ ಸದಸ್ಯರು, ವನ್ಯಜೀವಿ ಪ್ರೇಮಿಗಳ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಸಭೆ ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಗೌರವ ಅಧ್ಯಕ್ಷ ಸಮದ್‌ ಕೊಟ್ಟೂರು, ‘ವನ್ಯಜೀವಿ ಪ್ರೇಮಿಗಳು, ಅರಣ್ಯ ಇಲಾಖೆಯ ಸಿಬ್ಬಂದಿ ಕೈಜೋಡಿಸಿ ಕೆಲಸ ಮಾಡಿದ್ದರಿಂದ ಕರಡಿಧಾಮ ಉಳಿಯಲು ಸಾಧ್ಯವಾಗಿದೆ. ಈ ಧಾಮ ಅಸ್ತಿತ್ವಕ್ಕೆ ಬರದಿದ್ದರೆ ಕರಡಿ ಮಾನವ ಸಂಘರ್ಷ ನಿಲ್ಲುತ್ತಿರಲಿಲ್ಲ. ಪರಿಸರ ಸೂಕ್ಷ್ಮ ವಲಯವನ್ನಾಗಿ ಘೋಷಿಸಿದ ನಂತರವಂತೂ ಕರಡಿಧಾಮಕ್ಕೆ ಇನ್ನಷ್ಟು ಸುರಕ್ಷತೆ ದೊರೆದಂತಾಗಿದೆ’ ಎಂದು ಹೇಳಿದರು.

‘ಬರುವ ದಿನಗಳಲ್ಲಿ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಕರಡಿಧಾಮದ ಸುತ್ತಲಿನ ಗ್ರಾಮಗಳಲ್ಲಿ ಜನಜಾಗೃತಿ, ಪಕ್ಷಿ ವೀಕ್ಷಣೆ ಶಿಬಿರ, ಕರಡಿಧಾಮದ ಸಾಕ್ಷ್ಯಚಿತ್ರ ತಯಾರಿಕೆ, ಸ್ಮರಣ ಸಂಚಿಕೆ ಪ್ರಕಟ, ಅರಣ್ಯ ಇಲಾಖೆಯ ಸಿಬ್ಬಂದಿಗೆ ಸನ್ಮಾನ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಸಂಘಟಿಸಲಾಗುವುದು’ ಎಂದು ತಿಳಿಸಿದರು. 

ವನ್ಯಜೀವಿ ಛಾಯಾಗ್ರಾಹಕ ಪಂಪಯ್ಯ ಮಳೇಮಠ, ಹವ್ಯಾಸಿ ಛಾಯಾಗ್ರಾಹಕರಾದ ಶಿವಶಂಕರ ಬಣಗಾರ, ಡಾ. ರಾಜೀವ್‌, ಬಸವರಾಜ ಬೆಣ್ಣಿ, ಆನಂದ ಬಾಬು, ಅಶ್ವಿನ್‌ ಕೋತಂಬ್ರಿ, ಮಂಜುನಾಥ, ವಿಜಯ್‌ ಇಟಗಿ, ಮಾರುತಿ ಪೂಜಾರಿ, ವಿಕ್ರಾಂತ್‌ ಇದ್ದರು.

ಪ್ರತಿಕ್ರಿಯಿಸಿ (+)