ಗುರುವಾರ , ನವೆಂಬರ್ 14, 2019
19 °C

ಲಂಚ: ಬಳ್ಳಾರಿ ವಿಶೇಷ ಭೂಸ್ವಾಧೀನಾಧಿಕಾರಿ ಎಸಿಬಿ‌ ಬಲೆಗೆ

Published:
Updated:

ಬಳ್ಳಾರಿ: ನಗರ ಹೊರವಲಯದ ಎಲ್ಎಲ್‌ಸಿ ಕಾಲೊನಿಯಲ್ಲಿನ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ‌ ವಿಶೇಷ ಭೂ ಸ್ವಾಧೀನಾಧಿಕಾರಿ ಮನೆ ಮೇಲೆ‌ ಮಂಗಳವಾರ ದಾಳಿ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳ ತಂಡವು, ಲಂಚ ಪಡೆಯುತ್ತಿದ್ದ ವಿಶೇಷ ಭೂಸ್ವಾಧೀನಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ಹಾಗೂ ಕಚೇರಿಯ ಸಿಬ್ಬಂದಿ ಕೆ.ಸಿದ್ದಪ್ಪ ಅವರನ್ನು ವಶಕ್ಕೆ ಪಡೆಯಿತು.

ಬಳ್ಳಾರಿಯಿಂದ ಹಿರಿಯೂರಿನವರೆಗೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ಸಲುವಾಗಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ದೇವಸಮುದ್ರ ಹೋಬಳಿ ವ್ಯಾಪ್ತಿಯ ಮುರಡಿ ಗ್ರಾಮದಲ್ಲಿ ಸ್ವಾಧೀನಪಡಿಸಿಕೊಂಡ ಎ.ವೆಂಕಟರಮಣ ಅವರ ಭೂಮಿಯ ಪರಿಹಾರ ಮೊತ್ತದ ₹ 1,04,828 ಮೌಲ್ಯದ ಚೆಕ್ ನೀಡಲು ₹ 8 ಸಾವಿರ ಲಂಚ ಪಡೆಯುವಾಗ ಅಧಿಕಾರಿ ಸಿಕ್ಕಿಬಿದ್ದರು.

ಚೆಕ್ ನೀಡಲು ಅಧಿಕಾರಿ ಲಂಚದ ಬೇಡಿಕೆ ಇಟ್ಟಿದ್ದಾರೆಂಬ ದೂರನ್ನು ವೆಂಕಟರಮಣ ಎಸಿಬಿ ಪೊಲೀಸರಿಗೆ ನೀಡಿದ್ದರು. ಆ ದೂರಿನ ಅನ್ವಯ ಈ ದಿನ ದಾಳಿ ಮಾಡಲಾಗಿದ್ದು, ಎಂಟು ಸಾವಿರ ರೂ.ಗಳ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆಂದು ಎಸಿಬಿ ಡಿವೈಎಸ್ಪಿ ಚಂದ್ರಕಾಂತಪೂಜಾರಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)