ಮಂಗಳವಾರ, ಆಗಸ್ಟ್ 16, 2022
21 °C

ಖೊಟ್ಟಿ ದಾಖಲೆ ಸೃಷ್ಟಿಸಿ ₹40 ಲಕ್ಷ ವಂಚನೆ ಇಬ್ಬರಿಗೆ ನ್ಯಾಯಾಂಗ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಬೇರೊಬ್ಬರ ಹೆಸರಿನಲ್ಲಿದ್ದ ಆಸ್ತಿ ಮಾರಾಟ ಮಾಡಿದ ಆರೋಪದ ಮೇರೆಗೆ ಇಲ್ಲಿನ ಪ್ರಭಾರ ಉಪನೋಂದಣಾಧಿಕಾರಿ ಎನ್‌. ತಿಪ್ಪೇಸ್ವಾಮಿ ಹಾಗೂ ಸಂಡೂರಿನ ಪತ್ರ ಬರಹಗಾರ ಸಾಯಿನಾಥರಾವ್‌ ಶಿಂಧೆ ಎಂಬುವರನ್ನು ಇಲ್ಲಿನ ಪಟ್ಟಣ ಠಾಣೆ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಸ್ಥಳೀಯ ನಿವಾಸಿ ಪಾಯಲ್‌ ಜೈನ್‌ ಎಂಬುವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪಟ್ಟಣ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ. ನಗರಸಭೆಯ ಅಧಿಕಾರಿ ಹಾಗೂ ಇನ್ನಿಬ್ಬರು ಪ್ರಮುಖ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದಾರೆ.

ನಡೆದದ್ದೇನು?:

‘ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿರುವ 16X65 ಅಳತೆಯ ಕಟ್ಟಡ ಶಂಶಾದ್‌ ಬೇಗಂ ಅವರ ಹೆಸರಿನಲ್ಲಿದೆ. ಆದರೆ, ನಜೀರ್‌ ಅಹಮ್ಮದ್‌ ಎಂಬುವರು ಶಂಶಾದ್‌ ಬೇಗಂ ಅವರ ಮರಣ ಶಾಸನದಲ್ಲಿ ತನಗೆ ಬರೆದುಕೊಟ್ಟಿದ್ದಾರೆ. ಆ ಆಸ್ತಿ ಸದ್ಯ ತನ್ನ ಒಡೆತನದಲ್ಲಿದೆ ಎಂದು ಹೇಳಿಕೊಂಡು ಎಲೆಕ್ಟ್ರಾನಿಕ್ಸ್‌ ವಸ್ತುಗಳ ಉದ್ಯಮಿ ಪಾಯಲ್‌ ಜೈನ್‌ ಅವರಿಗೆ ₹40 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ₹2 ಲಕ್ಷ ಮುಂಗಡ ಪಾವತಿಸಿ, ಮಿಕ್ಕುಳಿದ ಹಣವನ್ನು ಬ್ಯಾಂಕ್‌ ಆಫ್ ಇಂಡಿಯಾದ ಚೆಕ್‌ ಮೂಲಕ ಪಾಯಲ್‌ ಪಾವತಿಸಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.

‘ಯಾವಾಗ ಪಾಯಲ್‌ ಜೈನ್‌ ಅವರು ಕಟ್ಟಡದ ನೋಂದಣಿಗೆ ಮುಂದಾಗಿದ್ದಾರೆ. ಆಗ ಮೋಸ ಹೋಗಿರುವುದು ಗೊತ್ತಾಗಿದೆ. ನಂತರ ಅವರು ಡಿ. 8ರಂದು ಪಟ್ಟಣ ಠಾಣೆಗೆ ದೂರು ಕೊಟ್ಟಿದ್ದಾರೆ. ಅವರು ಕೊಟ್ಟಿರುವ ದೂರಿನ ಮೇರೆಗೆ ಸದ್ಯ ಇಬ್ಬರನ್ನು ಬಂಧಿಸಲಾಗಿದೆ. ಇನ್ನುಳಿದವರನ್ನು ಶೀಘ್ರವೇ ವಶಕ್ಕೆ ಪಡೆಯಲಾಗುವುದು’ ಎಂದು ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು