ಸಭೆ ಬಹಿಷ್ಕರಿಸಿ ಬೀದಿಗಿಳಿದ ಸದಸ್ಯರು

7
ಅನಿಯಮಿತ ವಿದ್ಯುತ್‌ ಪೂರೈಕೆಗೆ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಗರಂ; ಕಚೇರಿ ಎದುರು ನಗರಸಭೆ ಸದಸ್ಯರ ಪ್ರತಿಭಟನೆ

ಸಭೆ ಬಹಿಷ್ಕರಿಸಿ ಬೀದಿಗಿಳಿದ ಸದಸ್ಯರು

Published:
Updated:
Deccan Herald

ಹೊಸಪೇಟೆ: ಅನಿಯಮಿತ ವಿದ್ಯುತ್‌ ಪೂರೈಕೆಯಿಂದ ಕುಡಿಯುವ ನೀರು ಸರಬರಾಜಿಗೆ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ನಗರಸಭೆ ಸದಸ್ಯರು ಬುಧವಾರ ಇಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ, ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಪೌರಾಯುಕ್ತ ವಿ. ರಮೇಶ್‌ ಅವರು, ನಗರೋತ್ಥಾನ ಯೋಜನೆಗೆ ಅಮೃತ ಸಿಟಿ ಯೋಜನೆಯಿಂದ ₹13 ಕೋಟಿ ಅನುದಾನ ಮೀಸಲಿರಿಸಬೇಕಿದ್ದು, ಸದಸ್ಯರು ಈ ಕುರಿತು ಚರ್ಚಿಸಿ ಒಪ್ಪಿಗೆ ನೀಡಬೇಕೆಂದು ತಿಳಿಸಿದರು. ಸದಸ್ಯರಾದ ಕೆ. ಬಡಾವಲಿ, ರಾಮಚಂದ್ರಗೌಡ, ಗೌಸ್‌, ಗುಜ್ಜಲ್‌ ನಿಂಗಪ್ಪ ಅವರು ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ವಿಷಯದ ಕುರಿತು ಸೂಕ್ತ ಮಾಹಿತಿ ನೀಡುವವರೆಗೆ ಆ ವಿಷಯ ಚರ್ಚಿಸುವುದು ಬೇಡ ಎಂದು ಪಟ್ಟು ಹಿಡಿದರು. ಇತರೆ ಸದಸ್ಯರು ಅದಕ್ಕೆ ದನಿಗೂಡಿಸಿದರು.

ಮಧ್ಯ ಪ್ರವೇಶಿಸಿ ಮಾತನಾಡಿದ ಪೌರಾಯುಕ್ತರು, ‘ಕಾಲಕಾಲಕ್ಕೆ ವಿದ್ಯುತ್‌ ಶುಲ್ಕ ಭರಿಸಿದರೂ ಜೆಸ್ಕಾಂನಿಂದ ಸರಿಯಾಗಿ ವಿದ್ಯುತ್‌ ಪೂರೈಕೆ ಆಗುತ್ತಿಲ್ಲ. ಇದರಿಂದ ನೀರು ಸರಬರಾಜಿಗೆ ತೊಂದರೆ ಆಗುತ್ತಿದೆ. ಇದರಲ್ಲಿ ನಮ್ಮ ತಪ್ಪಿಲ್ಲ’ ಎಂದು ಸಮಜಾಯಿಷಿ ನೀಡಿದರು. 

ಅದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ರೂಪೇಶ್‌ ಕುಮಾರ್‌, ‘ಹಣ ಭರಿಸಿದರೂ ಜೆಸ್ಕಾಂನವರು ವಿದ್ಯುತ್‌ ಪೂರೈಸುತ್ತಿಲ್ಲ ಎಂದರೆ ಏನರ್ಥ. ವಾರ್ಡ್‌ ಜನ ದಿನಬೆಳಗಾದರೆ ನಮ್ಮ ಮನೆಗೆ ಬರುತ್ತಿದ್ದಾರೆ. ನಮಗೆ ಉತ್ತರ ಕೊಟ್ಟು ಕೊಟ್ಟು ಸಾಕಾಗಿದೆ. ಇಷ್ಟು ದಿನ ಒಂದಿಲ್ಲೊಂದು ಸಬೂಬು ಹೇಳಿ ನುಣುಚಿಕೊಂಡಿದ್ದೀರಿ. ಈಗ ಅದೆಲ್ಲ ಬೇಡ. ಜೆಸ್ಕಾಂನವರ ತಪ್ಪು ಇದ್ದರೆ ಎಲ್ಲರೂ ಸೇರಿ ಅಲ್ಲಿಗೆ ಹೋಗೋಣ. ಆ ಸಮಸ್ಯೆ ಬಗೆಹರಿಯುವವರೆಗೆ ಸಭೆ ನಡೆಸುವುದು ಬೇಡ’ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದರು. ಅದಕ್ಕೆ ಇತರೆ ಸದಸ್ಯರು ಬೆಂಬಲ ಸೂಚಿಸಿದರು. ಬಳಿಕ ಎಲ್ಲ ಸದಸ್ಯರು ನಗರಸಭೆಯಿಂದ ಟಿ.ಬಿ. ಡ್ಯಾಂ ರಸ್ತೆಯ ಜೆಸ್ಕಾಂ ಕಚೇರಿ ವರೆಗೆ ಪ್ರತಿಭಟನಾ ರ್‍ಯಾಲಿ ಮಾಡಿದರು. ಪಕ್ಷಭೇದ ಮರೆತು ಬಿಜೆಪಿ, ಕಾಂಗ್ರೆಸ್‌ ಸದಸ್ಯರು ಪಾಲ್ಗೊಂಡಿದ್ದರು. ನಂತರ ಜೆಸ್ಕಾಂ ಕಚೇರಿಯ ಮುಖ್ಯದ್ವಾರ ಮುಚ್ಚಿ, ಮೆಟ್ಟಿಲುಗಳಲ್ಲಿ ಕುಳಿತು ಧಿಕ್ಕಾರ ಕೂಗಿದರು. 

‘ನಗರಸಭೆಯಿಂದ ಇಡೀ ನಗರಕ್ಕೆ ನೀರು ಸರಬರಾಜು ಮಾಡಬೇಕಾಗಿರುವುದರಿಂದ ಎಕ್ಸ್‌ಪ್ರೆಸ್ ಫೀಡರ್‌ಗೆ ನಿಯಮಿತವಾಗಿ ವಿದ್ಯುತ್‌ ಪೂರೈಸಬೇಕು’ ಎಂದು ಆಗ್ರಹಿಸಿದರು. ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ಹಣಮಂತಪ್ಪ ಮೇಟಿ ಪ್ರತಿಕ್ರಿಯಿಸಿ, ‘ನಾಳೆಯಿಂದ ಆ ರೀತಿ ಆಗುವುದಿಲ್ಲ’ ಎಂದು ಭರವಸೆ ನೀಡಿದರು.

ನಗರಸಭೆ ಹಂಗಾಮಿ ಅಧ್ಯಕ್ಷೆ ಸುಮಂಗಳಮ್ಮ, ಸದಸ್ಯರಾದ ಚಿದಾನಂದಪ್ಪ, ವೇಣುಗೋಪಾಲ್‌, ಮಲ್ಲಪ್ಪ, ಗುಡಿಗುಂಟಿ ಮಲ್ಲಿಕಾರ್ಜುನ, ಗೋವಿಂದರಾಜ, ಚಂದ್ರಕಾಂತ ಕಾಮತ್‌, ಅಬ್ದುಲ್‌ ರೌಫ್‌, ಗಿಂಜಿ ಮಂಜುನಾಥ್‌, ಅಬ್ದುಲ್‌ ಖದೀರ್‌, ಬಸವರಾಜ ಇತರರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !