ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ಪ್ರಕರಣ; ನಿರ್ವಾಹಕಿ ವಜಾ

11ನೇ ದಿನಕ್ಕೆ ಸಾರಿಗೆ ನೌಕರರ ಮುಷ್ಕರ
Last Updated 17 ಏಪ್ರಿಲ್ 2021, 12:46 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ತರಬೇಕೆಂದು ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಶನಿವಾರ ಹನ್ನೊಂದನೇ ದಿನಕ್ಕೆ ಕಾಲಿರಿಸಿತು.

ಒಂದೆಡೆ ನೌಕರರು ಮುಷ್ಕರ ನಡೆಸುತ್ತಿದ್ದರೆ, ಅದನ್ನು ಬೆಂಬಲಿಸಿ ಕೆಲಸಕ್ಕೆ ಗೈರು ಹಾಜರಾದ ಸಿಬ್ಬಂದಿಯ ಹಳೆಯ ತಪ್ಪುಗಳನ್ನು ಹುಡುಕಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಇಲಾಖೆ ಮುಂದುವರೆಸಿದೆ. ಶುಕ್ರವಾರ ಮೂವರನ್ನು ಅಮಾನತುಗೊಳಿಸಿ, ಎಂಟು ಜನರನ್ನು ಅನ್ಯ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿತ್ತು.

ಅದರ ಮುಂದುವರಿದ ಭಾಗವಾಗಿ ಶನಿವಾರ ಸಂಡೂರು ಘಟಕದ ನಿರ್ವಾಹಕಿ ಕೃಷ್ಣಕುಮಾರಿ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಅದೇ ಘಟಕದ ಟ್ರೈನಿ ಚಾಲಕ–ನಿರ್ವಾಹಕ ಜಗದೀಶ ಕಡಿ ಅವರನ್ನು ಕೆಲಸದಿಂದ ತರಬೇತಿ ಅವಧಿಯಲ್ಲೇ ಕೆಲಸದಿಂದ ತೆಗೆದು ಹಾಕಲಾಗಿದೆ.

‘ಕೃಷ್ಣಕುಮಾರಿ ಅವರು 2017ರಲ್ಲಿ ಹಣ ದುರುಪಯೋಗ ಪಡಿಸಿಕೊಂಡಿದ್ದರು. ಇಲಾಖಾ ವಿಚಾರಣೆ ನಡೆಸಿ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಜಗದೀಶ ಅವರು ಪದೇ ಪದೇ ಕೆಲಸಕ್ಕೆ ಗೈರಾಗುತ್ತಿದ್ದರಿಂದ ಅವರನ್ನು ತೆಗೆದು ಹಾಕಲಾಗಿದೆ’ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ತಿಳಿಸಿದ್ದಾರೆ.

‘ಸಾರಿಗೆ ನೌಕರರ ಮುಷ್ಕರ ಬೆಂಬಲಿಸಿ ಅದರಲ್ಲಿ ಪಾಲ್ಗೊಂಡಿರುವವರನ್ನು ಗುರಿಯಾಗಿರಿಸಿ ವರ್ಗಾವಣೆ, ಅಮಾನತು ಹಾಗೂ ವಜಾದಂತಹ ಕಠಿಣ ಕ್ರಮ ಜರುಗಿಸಲಾಗುತ್ತಿದೆ. ಇದು ಮುಷ್ಕರ ದುರ್ಬಲಗೊಳಿಸುವ ಹುನ್ನಾರ ಬಿಟ್ಟರೆ ಬೇರೇನೂ ಇಲ್ಲ. 2017ರಲ್ಲಿ ಹಣ ದುರುಪಯೋಗವಾದರೆ ಅದರ ಬಗ್ಗೆ ವಿಚಾರಣೆ ನಡೆಸಿ, ಆಗಲೇ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ನಾಲ್ಕು ವರ್ಷಗಳ ನಂತರ, ಅದು ಮುಷ್ಕರದ ಸಮಯದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದು ಎಂತಹವರಿಗೂ ಅರ್ಥವಾಗುವ ವಿಚಾರ. ಆದರೆ, ನೌಕರರು ಇದಕ್ಕೆ ಜಗ್ಗುವುದಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮುಷ್ಕರ ನಿರತ ನೌಕರರು ಪ್ರತಿಕ್ರಿಯಿಸಿದ್ದಾರೆ.

ಹನ್ನೊಂದನೇ ದಿನವೂ ಮುಷ್ಕರಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಬಹುತೇಕ ಸಿಬ್ಬಂದಿ ಈಗಲೂ ಮುಷ್ಕರ ಬೆಂಬಲಿಸಿ ಕೆಲಸಕ್ಕೆ ಗೈರಾಗಿದ್ದಾರೆ. ಇದರ ಪರಿಣಾಮ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳ ಬಸ್‌ ನಿಲ್ದಾಣದಿಂದ ಶನಿವಾರ ಬೆರಳೆಣಿಕೆ ಬಸ್‌ಗಳು ಸಂಚರಿಸಿದವು. ಖಾಸಗಿ ವಾಹನಗಳೇ ನಿಲ್ದಾಣದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT