ಗುರುವಾರ , ಅಕ್ಟೋಬರ್ 17, 2019
21 °C

‘ಶಾಂತಿಯುತವಾಗಿ ದಸರಾ ಆಚರಿಸಿ’

Published:
Updated:
Prajavani

ಹೊಸಪೇಟೆ: ‘ದಸರಾ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಿಸಬೇಕು. ಶಾಂತಿ ಕದಡಿದರೆ ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು’ ಎಂದು ಡಿ.ವೈ.ಎಸ್ಪಿ. ವಿ. ರಘುಕುಮಾರ ಎಚ್ಚರಿಕೆ ನೀಡಿದರು.

ದಸರಾ ಹಬ್ಬದ ಪ್ರಯುಕ್ತ ಶುಕ್ರವಾರ ಸಂಜೆ ಇಲ್ಲಿನ ಪಟ್ಟಣ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ‘ದಸರಾ ಹಬ್ಬದ ಪ್ರಯುಕ್ತ ನಡೆಯುವ ದೇವರ ಮೆರವಣಿಗೆಗೆ ಮಾರ್ಗ ಬದಲಿಸಲಾಗಿದೆ ಎಂಬುದು ಸುಳ್ಳು. ಈ ಹಿಂದಿನಂತೆ ಮೆರವಣಿಗೆಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಮೆರವಣಿಗೆ ದಿನ ಯಾರೂ ಕೂಡ ವೀಲಿಂಗ್‌ ಮಾಡುವಂತಿಲ್ಲ. ಸೈಲೆನ್ಸರ್‌ ತೆಗೆದು ವಾಹನ ಚಲಾಯಿಸುವಂತಿಲ್ಲ. ಪಲ್ಲಕ್ಕಿಗಳನ್ನು ಹೊತ್ತುಕೊಂಡು ಮನಬಂದಂತೆ ನುಗ್ಗುವಂತಿಲ್ಲ. ನಮ್ಮ ಭಕ್ತಿ, ಸಂಭ್ರಮ ಬೇರೆಯವರಿಗೆ ಕಿರಿಕಿರಿ ಉಂಟು ಮಾಡಬಾರದು. ಹಾಗೊಂದು ವೇಳೆ ಯಾರಾದರೂ ಕಾನೂನು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

‘ದೇವರ ಪಲ್ಲಕ್ಕಿ ಹೊರುವವರಿಗೆ ಪೊಲೀಸ್‌ ಇಲಾಖೆಯಿಂದ ಬ್ಯಾಡ್ಜ್‌ ನೀಡಲಾಗುವುದು. ಬನ್ನಿ ಮರದ ಹತ್ತಿರ ಪ್ರದಕ್ಷಿಣೆ ಹಾಕಲು ಐದು ಜನ ಮುಖಂಡರಿಗೆ ಅವಕಾಶ ಕಲ್ಪಿಸಲಾಗುವುದು. ಮೆರವಣಿಗೆ ಹಾದು ಹೋಗುವ ಮಾರ್ಗಗಳಲ್ಲಿ ಗುಂಡಿ ಮುಚ್ಚಲಾಗುವುದು. ನಿರಂತರವಾಗಿ ವಿದ್ಯುತ್‌ ಪೂರೈಸಲಾಗುವುದು. ಜತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.

ನಗರಸಭೆ ಪೌರಾಯುಕ್ತೆ ಪಿ. ಜಯಲಕ್ಷ್ಮಿ, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ನಾಯಕ ಸಮಾಜದ ಮುಖಂಡ ಗುಜ್ಜಲ್‌ ಶಿವರಾಮಪ್ಪ, ಮುಸ್ಲಿಂ ಸಮಾಜದ ಮುಖಂಡ ಮೊಹಮ್ಮದ್‌ ಇಮಾಮ್‌ ನಿಯಾಜಿ ಇದ್ದರು.

Post Comments (+)