ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಕ್ಕೆ ಯೋಗ್ಯವಲ್ಲದ ಅಂಕಣದಲ್ಲಿ ದಸರಾ ಕ್ರೀಡೆ

ಕ್ರೀಡಾ ಪಟುಗಳು, ತರಬೇತುದಾರರು ಹಾಗೂ ಸಾರ್ವಜನಿಕರಿಂದ ತೀವ್ರ ಅಸಮಾಧಾನ
Last Updated 21 ಸೆಪ್ಟೆಂಬರ್ 2022, 6:03 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕನಿಷ್ಠ ಮೂಲ ಸೌಕರ್ಯಗಳಿರದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಿಜಯನಗರ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಸಂಘಟಿಸಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಯಿತು.

ಮಂಗಳವಾರ ಬೆಳಿಗ್ಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ವೇದಿಕೆ ಸಮಾರಂಭದ ನಂತರ ಕೆಲವರು ನೇರವಾಗಿಯೇ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಹರಿಸಿಂಗ್‌ ರಾಥೋಡ್‌ ಅವರೆದುರು ಅಸಮಾಧಾನ ಹೊರ ಹಾಕಿದರು.

ಅಥ್ಲೆಟಿಕ್ಸ್‌ ಟ್ರ್ಯಾಕ್‌ ಇರಲಿಲ್ಲ. ಕಬಡ್ಡಿ, ಕೊಕ್ಕೊ ಆಟವಾಡುವ ಜಾಗದಲ್ಲಿ ಸಾಕಷ್ಟು ಕಲ್ಲುಗಳು ಇದ್ದವು. ಆಟವಾಡುವುದಕ್ಕೆ ಸ್ಥಳ ಪ್ರಶಸ್ತವಾಗಿರದಿದ್ದರೂ ಕ್ರೀಡಾಕೂಟ ಸಂಘಟಿಸಿದ್ದಕ್ಕೆ ತರಬೇತುದಾರರು, ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು. ಅದಕ್ಕೆ ಆಯೋಜಕರು ಅಲ್ಲಲ್ಲಿ ಬಿದ್ದ ಕಲ್ಲುಗಳನ್ನು ತೆಗೆಯಲು ಪ್ರಯತ್ನಿಸಿದರು.

‘ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇನ್ನೂ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಆಟವಾಡುವುದಕ್ಕೆ ಯಾವುದೇ ಸೌಕರ್ಯ ಇಲ್ಲ. ಅಥ್ಲೆಟಿಕ್ಸ್‌ ಟ್ರ್ಯಾಕ್‌ ಇಲ್ಲ. ಮಣ್ಣಿನ ಮೇಲೆ ಬಿಳಿ ರೇಖೆಗಳನ್ನು ಎಳೆದು ಆಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಉಸುಕಿನಂಥ ಮಣ್ಣಿನಲ್ಲಿ ಮಕ್ಕಳು ಬಿದ್ದು ಗಾಯಗೊಂಡರೆ ಯಾರು ಜವಾಬ್ದಾರರು. ಹೆಚ್ಚಿನ ಕ್ರೀಡಾಪಟುಗಳು ಗ್ರಾಮೀಣ ಪ್ರದೇಶದಿಂದ ಬಂದವರೆಂದು ಮನಬಂದಂತೆ ನಡೆಸಿಕೊಂಡಿದ್ದು ಸರಿಯಾದ ಕ್ರಮವಲ್ಲ’ ಎಂದು ಯುವ ಮುಖಂಡ ಭರತ್‌ ಕುಮಾರ್‌ ಟೀಕಿಸಿದರು.

‘ಕಬಡ್ಡಿ, ಕೊಕ್ಕೊ ಆಟವಾಡುವ ಜಾಗದಲ್ಲಿ ಸುಪೂರವಾದ ಮಣ್ಣು ಹಾಕಿ ಆಟವಾಡುವುದಕ್ಕೆ ವ್ಯವಸ್ಥೆ ಮಾಡಬೇಕಿತ್ತು. ಆದರೆ, ಅದ್ಯಾವುದೂ ಮಾಡಿರಲಿಲ್ಲ. ಸಾಕಷ್ಟು ಕಲ್ಲುಗಳು ಇದ್ದವು. ಇಂಥದ್ದರಲ್ಲಿ ಮಕ್ಕಳು ಆಟವಾಡುವಾಗ ಬಿದ್ದು ತಲೆಗೆ ಪೆಟ್ಟು ಬಿದ್ದರೆ ಅವರ ಜೀವ ಹೋಗುವ ಸಂಭವವೂ ಇರುತ್ತದೆ. ಜಿಲ್ಲಾಡಳಿತ ಇಷ್ಟೊಂದು ನಿರ್ಲಕ್ಷ್ಯ ವಹಿಸಿದ್ದು ಸರಿಯಲ್ಲ. ಗ್ರಾಮೀಣ ಭಾಗದ ಮಕ್ಕಳ ಬಗ್ಗೆ ಅಸಡ್ಡೆ ಸರಿಯಲ್ಲ. ವ್ಯವಸ್ಥಿತವಾಗಿ ಕ್ರೀಡಾಕೂಟ ಆಯೋಜಿಸಬೇಕು. ಇಲ್ಲವಾದರೆ ಕೈಬಿಡಬೇಕು. ಕಾಟಾಚಾರಕ್ಕೆ ಆಯೋಜಿಸಬೇಕಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಕ್ರೀಡಾ ತರಬೇತುದಾರರು, ಕ್ರೀಡಾಪಟುಗಳು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಹರಿಸಿಂಗ್‌ ರಾಥೋಡ್‌, ಡಿ.ಡಿ.ಪಿ.ಐ. ಜಿ. ಕೊಟ್ರೇಶ್‌, ಜಿಲ್ಲಾ ಪಂಚಾಯಿತಿ ಉಪನಿರ್ದೇಶಕ ತಿಮ್ಮಪ್ಪ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಂಜುನಾಥ ಪಾಲ್ಗೊಂಡಿದ್ದರು. ಇದೇ ವೇಳೆ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

/ಬಾಕ್ಸ್‌/

800 ಮೀಟರ್‌ ಓಟದಲ್ಲಿ ಹರಪನಹಳ್ಳಿಗೆ ಬಹುಮಾನ:

800 ಮೀಟರ್‌ ಓಟದ ಸ್ಪರ್ಧೆಯೊಂದಿಗೆ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭಗೊಂಡಿತು. ಪುರುಷರ ವಿಭಾಗದಲ್ಲಿ ಹರಪನಹಳ್ಳಿಯ ಜಾವೇದ್‌, ಕೊಟ್ಟೂರಿನ ಎಸ್‌. ಸಂತೋಷ್‌ ಹಾಗೂ ಹೊಸಪೇಟೆಯ ಪ್ರದ್ಯುಮಕುಮಾರ ಯಾದವ್‌ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.

ಇನ್ನು, ಮಹಿಳೆಯರ ವಿಭಾಗದಲ್ಲಿ ಹರಪನಹಳ್ಳಿಯವರಾದ ನಾಗವೇಣಿ, ಪ್ರಿಯಾ ಅವರು ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನ ಗಳಿಸಿದರು. ಕೊಟ್ಟೂರಿನ ಕುಸುಮಾ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟರು.

‘ಹೊಸಪೇಟೆಯಲ್ಲಿ ವಿಶ್ವದರ್ಜೆ ಕ್ರೀಡಾಂಗಣ’:

‘ಹೊಸಪೇಟೆಯಲ್ಲಿ ವಿಶ್ವದರ್ಜೆ ಕ್ರೀಡಾಂಗಣ ನಿರ್ಮಿಸುವ ಯೋಜನೆ ಇದೆ. ಮುಂದಿನ ವರ್ಷದೊಳಗೆ ಕೆಲಸ ಪೂರ್ಣಗೊಳ್ಳಬಹುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೋಯರ್‌ ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ವಿಜಯನಗರ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್‌ ನಂತರ ಮೊದಲ ಬಾರಿಗೆ ಹೊಸ ಜಿಲ್ಲೆಯಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟ ಸಂಘಟಿಸಿರುವುದು ಖುಷಿಯ ವಿಚಾರ ಎಂದರು.

ಮೂರು ಕಡೆ ಕ್ರೀಡಾಕೂಟ:

ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟಕ್ಕೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಆಯೋಜಿಸಲಾಗಿತ್ತು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್‌, ಕಬಡ್ಡಿ, ಖೋ ಖೋ, ಥ್ರೋಬಾಲ್‌, ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ (ಪಿ.ಡಿ.ಐ.ಟಿ.) ಫುಟ್‌ಬಾಲ್‌, ಹ್ಯಾಂಡ್‌ಬಾಲ್‌, ಬ್ಯಾಸ್ಕೆಟ್‌ಬಾಲ್‌ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳಿಗೆ ನೆರಳಿನ ವ್ಯವಸ್ಥೆ ಇರಲಿಲ್ಲ. ಕುಡಿಯುವ ನೀರು ಇಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT