ತಡೆಗೋಡೆಯಿಲ್ಲದ ಸೇತುವೆಗೆ ಬೇಕಿದೆ ಕಾಯಕಲ್ಪ

7

ತಡೆಗೋಡೆಯಿಲ್ಲದ ಸೇತುವೆಗೆ ಬೇಕಿದೆ ಕಾಯಕಲ್ಪ

Published:
Updated:
Deccan Herald

ಕಂಪ್ಲಿ: ತಾಲ್ಲೂಕಿನ ಇಟಗಿ ಗ್ರಾಮದ ರಾಜ್ಯ ಹೆದ್ದಾರಿ 49ಕ್ಕೆ ಅಡ್ಡಲಾಗಿ ನಿರ್ಮಿಸಿರುವ ನಾರಿಹಳ್ಳ ಸೇತುವೆ ಕಾಯಕಲ್ಪದ ನಿರೀಕ್ಷೆಯಲ್ಲಿದೆ.

ಸೇತುವೆ ಎರಡೂ ಭಾಗದ ರಕ್ಷಣಾ ತಡೆಗೋಡೆ ಕುಸಿದು ಬಿದ್ದು ಅನೇಕ ವರ್ಷಗಳಾಗಿವೆ. ಯಾವುದೇ ರಕ್ಷಣೆಯಿಲ್ಲದೆ ವಾಹನಗಳು ಭೀತಿಯಲ್ಲಿ ಸಂಚರಿಸುವಂತಾಗಿದೆ. ಗ್ರಾಮದಿಂದ ಗದ್ದೆಗಳಿಗೆ ಹೋಗಿ ಬರುವ ರೈತರು ಕೂಡ ಆತಂಕದಲ್ಲಿಯೇ ಓಡಾಡುತ್ತಿದ್ದಾರೆ. ಅದರಲ್ಲೂ ರಾತ್ರಿ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣ ಕುತ್ತು ಬರುವುದು ಖಚಿತ.

ಈ ಹಿಂದೆ ಸೇತುವೆಯಿಂದ ಕೆಳಗೆ ಬಿದ್ದು ಅನೇಕ ಜನ ಗಾಯಗೊಂಡಿದ್ದಾರೆ. ಕೈಕಾಲು ಮುರಿದುಕೊಂಡಿರುವ ಕೆಲವರು ಈಗಲೂ ನೋವಿನಿಂದ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಿದ್ದರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ರಕ್ಷಣಾ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಂಡಿಲ್ಲ. ರಾಜ್ಯ ಹೆದ್ದಾರಿ ಆಗಿರುವುದರಿಂದ ಸದಾ ವಾಹನ ದಟ್ಟಣೆ ಇರುತ್ತದೆ. ಅದಕ್ಕೆ ಕಾಯಕಲ್ಪ ನೀಡಿ, ಸೂಕ್ತ ರಕ್ಷಣೆ ಒದಗಿಸಬೇಕು ಎನ್ನುತ್ತಾರೆ ಗ್ರಾಮಸ್ಥರು.

‘50 ವರ್ಷಗಳ ಹಿಂದೆ ನಿರ್ಮಿಸಿರುವ ಸೇತುವೆ ಶಿಥಿಲಗೊಂಡಿದೆ. ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಸಿದರೆ ಇಡೀ ಸೇತುವೆ ನೀರಿನಲ್ಲಿ ಮುಳುಗಡೆಯಾಗುತ್ತದೆ. ಇದರಿಂದಾಗಿ ತಡೆಗೋಡೆ ನಿರ್ಮಿಸುವುದರ ಬದಲು ಹೊಸ ಸೇತುವೆ ನಿರ್ಮಿಸಲು ಮುಂದಾಗಬೇಕು’ ಎನ್ನುತ್ತಾರೆ ಗ್ರಾಮದ ಮುಖಂಡ ಶರಣೇಗೌಡ.

‘ಹೊಸ ಸೇತುವೆ ನಿರ್ಮಿಸುವುದು ಅಷ್ಟು ಸುಲಭದ ಮಾತಲ್ಲ. ಅಲ್ಲಿಯವರೆಗೆ ಈಗಿರುವ ಸೇತುವೆಗೆ ರಕ್ಷಣಾ ತಡೆಗೋಡೆ ನಿರ್ಮಿಸಬೇಕು. ನಂತರ ಹೊಸ ಶಾಸಕರು ಈ ಕುರಿತು ವಿಧಾನಸಭೆಯಲ್ಲಿ ಧ್ವನಿ ಎತ್ತಬೇಕು. ನಿತ್ಯ ನೂರಾರು ವಾಹನಗಳು ಸೇತುವೆಯ ಮೇಲಿಂದ ಸಂಚರಿಸುತ್ತವೆ. ದೊಡ್ಡ ಅನಾಹುತ ಸಂಭವಿಸುವುದಕ್ಕೂ ಮುನ್ನ ಎಚ್ಚೆತ್ತುಕೊಂಡು, ಸೂಕ್ತ ಕ್ರಮ ಕೈಗೊಂಡರೆ ಒಳಿತು’ ಎಂದು ಹೇಳಿದರು.

 

 

 

 

 

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !