ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಆಗ್ರಹ

ಕಮಲಾಪುರ ತಾಲ್ಲೂಕು ಪಂಚಾಯತ್‌
Last Updated 7 ಜೂನ್ 2020, 10:17 IST
ಅಕ್ಷರ ಗಾತ್ರ

ಕಮಲಾಪುರ: ನೂತನ ಕಮಲಾಪುರ ತಾಲ್ಲೂಕು ಪಂಚಾಯಿತಿಗೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಇಲ್ಲಿನ ಡಯಟ್ ಕಟ್ಟಡದಲ್ಲಿ ಏಪ್ರಿಲ್ 1ರಂದು ತಾಲ್ಲೂಕು ಪಂಚಾಯಿತಿ ಕಚೇರಿ ಕಾರ್ಯಾರಂಭ ಮಾಡಿದೆ. ಮೇ 16 ರಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

‘66 ಗ್ರಾಮ, 51 ತಾಂಡಾ, 18 ಗ್ರಾಮ ಪಂಚಾಯಿತಿಗಳನ್ನು ಒಳಗೊಂಡ ತಾಲ್ಲೂಕು ಪಂಚಾಯಿತಿ ಇದಾಗಿದ್ದು, ಒಬ್ಬ ಆಡಳಿತಾಧಿಕಾರಿಗೆ ಕಾರ್ಯಭಾರ ಸರಿದೂಗುವುದಿಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪಾರ್ವತಿ ಮಹಾದೇವಪ್ಪ, ದೀಪಕ್ ಸಲಗರ, ಸಂಜು ರಾಠೋಡ್ ಹೇಳಿದರು.

‘ಕಮಲಾಪುರ ತಾಲ್ಲೂಕು ಪಂಚಾಯಿತಿಗೆ 13 ಜನ ಸದಸ್ಯರಿದ್ದಾರೆ. ಇವರು ಕಲಬುರ್ಗಿ, ಆಳಂದ, ಚಿಂಚೋಳಿ ತಾಲ್ಲೂಕು ಪಂಚಾಯಿತಿಯಿಂದ ಹೊರ ಬಂದಿದ್ದಾರೆ. ಇವರ ಅಧಿಕಾರಾವಧಿ ಇನ್ನು ಒಂದು ವರ್ಷವಿದೆ. ಕಮಲಾಪುರ ತಾಲ್ಲೂಕು ಪಂಚಾಯಿತಿಗೆ ಆಡಳಿತಾಧಿಕಾರಿ ನೇಮಿಸಿರುವುದರಿಂದ ಹಕ್ಕು ಚಲಾಯಿಸಲಾಗುತ್ತಿಲ್ಲ. ಕ್ಷೇತ್ರದಲ್ಲಿ ಸಮಸ್ಯೆಗಳನ್ನು ಹೊತ್ತು ತಂದರೆ ಆಲಿಸುವವರಿಲ್ಲ, ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿಲ್ಲ, ಸಂಬಂಧಪಟ್ಟ ಸಮಿತಿಗಳಿಲ್ಲ’ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಒಂದು ವರ್ಷದವರೆಗೆ ಆಡಳಿತಾಧಿಕಾರಿ ಮೂಲಕವೇ ಮುಂದುವರಿಸಿದರೆ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಈ ಸಮಸ್ಯೆ ಹೋಗಲಾಡಿಸಲು ಕೂಡಲೇ ಚುನಾವಣೆ ನಡೆಸಬೇಕು. ಈಗಿರುವ 13 ಸದಸ್ಯರಲ್ಲಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಬೇಕು. ಆ ಮೂಲಕ ತಾಲ್ಲೂಕು ಪಂಚಾಯಿತಿಗೆ ನೈಜ ರೂಪ ಕೊಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಸದಸ್ಯರ ಸಭೆ ಶೀಘ್ರ: ಮೀಸಲಾತಿ ಮತ್ತಿತರ ಕಾರಣಗಳಿಂದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ವಿಳಂಬವಾಗುತ್ತಿದೆ. ರಾಜ್ಯದಲ್ಲಿನ ಎಲ್ಲ ಹೊಸ ತಾಲ್ಲೂಕು ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಯವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ. 15ನೇ ಹಣಕಾಸು ಯೋಜನೆ ಅನುದಾನ ಬಂದಿದೆ. ಕೆಲ ದಿನಗಳಲ್ಲಿ ಸದಸ್ಯರ ಸಭೆ ಕರೆದು ಚರ್ಚಿಸಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಗದೇವಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT