ಓಟ: ಪುರುಷೋತ್ತಮ, ಶಶಿರೇಖಾ ಸಾಧನೆ

7
ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಓಟ: ಪುರುಷೋತ್ತಮ, ಶಶಿರೇಖಾ ಸಾಧನೆ

Published:
Updated:
Deccan Herald

ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರದಿಂದ ಆರಂಭವಾದ ಪದವಿಪೂರ್ವ ಕಾಲೇಜುಗಳ 20ನೇ ಜಿಲ್ಲಾಮಟ್ಟದ ಕ್ರೀಡಾಕೂಟದ 1500 ಮೀಟರ್ಸ್‌ ಓಟದ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಸಿರುಗುಪ್ಪದ ಪುರುಷೋತ್ತಮ ಮತ್ತು ಬಾಲಕಿಯರ ವಿಭಾಗದಲ್ಲಿ ಶಶಿರೇಖಾ ಮೊದಲು ಗುರಿ ಮುಟ್ಟಿ ಸಾಧನೆ ಮೆರೆದರು.

ಶಶಿರೇಖಾ ಬರಿಗಾಲಿನಲ್ಲೇ ಓಡಿ ಮೊದಲಿಗರಾಗಿದ್ದು ವಿಶೇಷ. ಕ್ರೀಡಾಕೂಟ ಉದ್ಘಾಟನೆಗೂ ಮುನ್ನ ನಡೆದ ಓಟದ ಸ್ಪರ್ಧೆಗಳಲ್ಲಿ ಬಹುತೇಕ ಬಾಲಕಿಯರು ಬರಿಗಾಲಿನಲ್ಲೇ ಓಡಿದರು.

ಅದೇ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಸಂಡೂರನ ಅಮನ್‌ ಸಿಂಗ್‌ ಮತ್ತು ಹಗರಿಬೊಮ್ಮನಹಳ್ಳಿಯ ಬಿ.ಪ್ರಹ್ಲಾದ್‌, ಬಾಲಕಿಯರ ವಿಭಾಗದಲ್ಲಿ ಬಳ್ಳಾರಿಯ ತ್ರಿವೇಣಿ ಮತ್ತು ಕೂಡ್ಲಿಗಿಯ ದೊಡ್ಡಮ್ಮ, ಎರಡು ಮತ್ತು ಮೂರನೇ ಸ್ಥಾನವನ್ನು ಗಳಿಸಿದರು.

ಕ್ರೀಡಾಪಟುಗಳ ಕೊರತೆ: ಜಿಲ್ಲಾ ಮಟ್ಟದ ಕ್ರೀಡಾಕೂಟವಾದರೂ ಕಡಿಮೆ ಸಂಖ್ಯೆಯ ಕ್ರೀಡಾಪಟುಗಳು ಪಾಲ್ಗೊಂಡಿದ್ದು ಗಣ್ಯರ ಅಸಮಾಧಾನಕ್ಕೂ ಕಾರಣವಾಯಿತು.
ಈ ಬಗ್ಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ್, ‘ಕನಿಷ್ಠ ೫೦೦ ಮಂದಿಯಾದರೂ ಭಾಗವಹಿಸಬೇಕಿತ್ತು. ಆದರೆ ಇಲ್ಲಿರುವವರ ಸಂಖ್ಯೆ ನಿರಾಶಾದಾಯಕವಾಗಿದೆ’ ಎಂದರು.

‘ಕ್ರೀಡೆಗಳ ಬಗ್ಗೆ ಯಾರಿಗೂ ಆಸಕ್ತಿ ಇಲ್ಲದಂತಾಗಿದೆ. ತರಬೇತುದಾರರಿಲ್ಲದೆ ಮಕ್ಕಳಿಂದ ಸಾಧನೆಯನ್ನು ನಿರೀಕ್ಷಿಸುವುದು ದಡ್ಡತನವಾಗುತ್ತದೆ. ಬಹಳಷ್ಟು ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರಿಲ್ಲ, ಪ್ರಾಥಮಿಕ ಶಾಲೆಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರನ್ನು ಸರ್ಕಾರ ಕೂಡಲೇ ನೇಮಿಸಬೇಕು’ ಎಂದರು.

ಅನುದಾನದ ಕೊರತೆ: ವಿಷಾದ
 ‘ಕ್ರೀಡಾಕೂಟಗಳಿಗ ಅಗತ್ಯವಿರುವಷ್ಟು ಅನುದಾನ ದೊರಕುತ್ತಿಲ್ಲ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಕ್ರೀಡಾಧಿಕಾರಿ ರೆಹಮತ್‌ ಉಲ್ಲಾ ವಿಷಾದಿಸಿದರು. ‘ಪ್ರತಿಭಾ ಕಾರಂಜಿಗೆ ಲಕ್ಷಗಟ್ಟಲೆ ಅನುದಾನ ನೀಡುವ ಸರ್ಕಾರ ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ₨ ೧೨ ಸಾವಿರ ಹಾಗೂ ಜಿಲ್ಲಾ ಮಟ್ಟಕ್ಕೆ ₨ ೨೨ ಸಾವಿರ ಬಿಡುಗಡೆ ಮಾಡಿದೆ. ಆದರೆ ಅಷ್ಟು ಸಾಕಾಗುವುದಿಲ್ಲ. ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನೂ ಕೊಡಲಾಗುತ್ತಿಲ್ಲ’ ಎಂದರು.
‘ಪಿ.ಯು ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ಪ್ರಾಥಮಿಕ ಶಾಲೆಗಳಲ್ಲಿ ಪ್ರತಿ ತಾಲ್ಲೂಕಿಗೆ ಕೇವಲ ೮ ದೈಹಿಕ ಶಿಕ್ಷಣ ಶಿಕ್ಷಕರಿದ್ದಾರೆ. ಹೀಗಾಗಿ ಶಿಕ್ಷಕರ ಕೊರತೆ ನೀಗಿಸಬೇಕು’ ಎಂದು ಕೋರಿದರು.

ಉದ್ಘಾಟನೆ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸಿ.ಭಾರತಿ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಶಾಸಕ ಜಿ.ಸೋಮಶೇಖರ ರೆಡ್ಡಿ ಕ್ರೀಡಾ ಧ್ವಜಾರೋಹಣ ಮಾಡಿದರು. ಪ್ರಾಚಾರ್ಯರ ಸಂಘದ ಅಧ್ಯಕ್ಷ ಎಸ್‌ಯುಜೆಎಸ್ ಕಾಲೇಜಿನ ಪ್ರಾಚಾರ್ಯ ಜೆ.ಪ್ರಸಾದ ರೆಡ್ಡಿ ಮಾತನಾಡಿದರು.

ಮುಖಂಡ ಶಶೀಲ್.ಜಿ.ನಮೋಶಿ, ಮೋಹನ ಸಿದ್ದಾಂತಿ, ರಾಮಾಂಜಿನಿ, ಸಿದ್ದೇಶ್ವರ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಸ್‌.ಎಂ.ಶಿವನಾಗ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಕೆ.ತಿಮ್ಮಪ್ಪ, ಪದವಿಪೂರ್ವ ಕಾಲೇಜು ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಜೆ.ಮಹೇಶ್‌ ಇದ್ದರು. ಕ್ರೀಡಾಕೂಟ ಶುಕ್ರವಾರವೂ ನಡೆಯಲಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !