ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಪರ್ವ; ಅಭಿವೃದ್ಧಿಗೆ ಹಿನ್ನಡೆ

ಜಿದ್ದಾಜಿದ್ದಿನ ಕಣದಲ್ಲಿ ಕಾಂಗ್ರೆಸ್‌ ಮೇಲುಗೈ; ಪಕ್ಷಾಂತರವೂ ಜೋರು
Last Updated 25 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಹೊಸಪೇಟೆ: ಪ್ರಸಕ್ತ ವರ್ಷ ಬಳ್ಳಾರಿ ಜಿಲ್ಲೆಯ ಪಾಲಿಗೆ ಚುನಾವಣಾ ಪರ್ವವಾಗಿ ಪರಿಣಮಿಸಿತು.

ವರ್ಷವಿಡೀ ಸಾಲು ಸಾಲಾಗಿ ನಡೆದ ಚುನಾವಣೆಗಳೇ ಅದಕ್ಕೆ ಸಾಕ್ಷಿ. ಏಪ್ರಿಲ್‌–ಮೇ ತಿಂಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆದರೆ, ಜುಲೈ–ಆಗಸ್ಟ್‌ನಲ್ಲಿ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಚುನಾವಣೆ ಜರುಗಿತು. ವಿಧಾನಸಭೆ ಚುನಾವಣೆಯಲ್ಲಿ ಬಿ. ಶ್ರೀರಾಮುಲು ಅವರು ಮೊಳಕಾಲ್ಮುರಿನಿಂದ ಸ್ಪರ್ಧಿಸಿ ಜಯ ಸಾಧಿಸಿದ್ದರಿಂದ ಬಳ್ಳಾರಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹೀಗಾಗಿ ನವೆಂಬರ್‌ನಲ್ಲಿ ಲೋಕಸಭೆಗೆ ಉಪಚುನಾವಣೆ ನಡೆಯಿತು.

ಕಾಂಗ್ರೆಸ್‌ ಮೇಲುಗೈ:ವರ್ಷವಿಡೀ ಜಿಲ್ಲೆಯಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿ, ಬಳ್ಳಾರಿ ಪಕ್ಷದ ಭದ್ರಕೋಟೆ ಎಂಬುದನ್ನು ಈ ವರ್ಷ ಸಾಬೀತುಪಡಿಸಿತು. ವಿಧಾನಸಭೆ ಚುನಾವಣೆಯಲ್ಲಿ ಒಂಬತ್ತು ಕ್ಷೇತ್ರಗಳ ಪೈಕಿ ಆರರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತು. ನಂತರ ನಡೆದ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲೂ ಜಿಲ್ಲೆಯ ಮತದಾರರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದರು.

ನವೆಂಬರ್‌ನಲ್ಲಿ ನಡೆದ ಲೋಕಸಭೆ ಉಪಚುನಾವಣೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿತ್ತು. ಬಿಜೆಪಿಯು ಶ್ರೀರಾಮುಲು ಅವರ ಸಹೋದರಿ ಜೆ. ಶಾಂತಾ ಅವರನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್‌ ಕೊನೆಯ ಕ್ಷಣದಲ್ಲಿ ವಿ.ಎಸ್‌.ಉಗ್ರಪ್ಪ ಅವರನ್ನು ಅಖಾಡಕ್ಕೆ ಇಳಿಸಿತ್ತು. ಇಡೀ ದೇಶದ ಗಮನ ಸೆಳೆದಿದ್ದ ಈ ಚುನಾವಣೆಯಲ್ಲಿ ಪರಸ್ಪರ ಆರೋಪ, ವೈಯಕ್ತಿಕ ತೇಜೋವಧೆ, ಕೀಳುಮಟ್ಟದ ಟೀಕೆಗಳಿಂದ ಮತ್ತಷ್ಟು ಸುದ್ದಿಯಾಯಿತು.

ಸಿದ್ದರಾಮಯ್ಯನವರ ಪಾಪದಿಂದ ಅವರ ಮಗ ಸತ್ತ’ ಎಂದು ಜನಾರ್ದನ ರೆಡ್ಡಿ ನೀಡಿದ ಹೇಳಿಕೆಗೆ ಸಾಕಷ್ಟು ಟೀಕೆ ವ್ಯಕ್ತವಾಯಿತು. ಸ್ವತಃ ಬಿಜೆಪಿಯೇ ಅದರಿಂದ ಅಂತರ ಕಾಯ್ದುಕೊಂಡಿತ್ತು. ಇದರ ಮಧ್ಯೆ ನಡೆದ ಚುನಾವಣೆಯಲ್ಲಿ ಉಗ್ರಪ್ಪನವರು 2.50 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು. ಇದು ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹೊಸ ಚೈತನ್ಯ ತಂದುಕೊಟ್ಟಿತು. ಇದರಿಂದ ಸ್ವಲ್ಪ ಹಿನ್ನಡೆ ಕಂಡ ಬಿಜೆಪಿ, ತಕ್ಷಣವೇ ಜಿಲ್ಲೆಯ ಹೊಣೆಯನ್ನು ಶ್ರೀರಾಮುಲು ಅವರ ಬದಲಾಗಿ ಜಗದೀಶ ಶೆಟ್ಟರ್‌ ಅವರಿಗೆ ವಹಿಸಿತು.

ಅಭಿವೃದ್ಧಿಗೆ ಹಿನ್ನಡೆ:ವರ್ಷದ ಆರಂಭದಿಂದ ಕೊನೆಯ ವರೆಗೆ ಚುನಾವಣೆಗಳು ನಡೆದ ಕಾರಣ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಸಾಕಷ್ಟು ಹಿನ್ನಡೆಯಾಯಿತು. ಮಾದರಿ ನೀತಿ ಸಂಹಿತೆ ಜಾರಿಯಿಂದ ಯಾವುದೇ ಸರ್ಕಾರಿ ಕೆಲಸಗಳು ನಡೆಯಲಿಲ್ಲ. ಪದೇ ಪದೇ ಅಧಿಕಾರಿಗಳನ್ನು ಅದಲು ಬದಲು ಮಾಡಿದ್ದರಿಂದ ಸಾರ್ವಜನಿಕರ ಸಮಸ್ಯೆಗಳು ನನೆಗುದಿಗೆ ಬಿದ್ದವು.

ಪಡಿತರ ಚೀಟಿ, ಪಹಣಿ, ಆಧಾರ್‌ ನೋಂದಣಿ ಸೇರಿದಂತೆ ಇತರೆ ಕೆಲಸಗಳಿಗಾಗಿ ಜನ ಪರದಾಟ ನಡೆಸಿದರು. ವರ್ಷದ ಕೊನೆಯ ವರೆಗೆ ಆ ಸಮಸ್ಯೆಗಳಿಗೆ ಮುಕ್ತಿ ಸಿಗಲಿಲ್ಲ. ಬರದಿಂದ ಜಿಲ್ಲೆಯಲ್ಲಿ 14 ಜನ ರೈತರು ಆತ್ಮಹತ್ಯೆ ಮಾಡಿಕೊಂಡರು. ಆದರೆ, ದೊಡ್ಡ ಪ್ರಮಾಣದಲ್ಲಿ ಗುಳೇ ತಡೆಯಲು ಜಿಲ್ಲಾ ಆಡಳಿತ ಸಫಲವಾಯಿತು. ಜಿಲ್ಲೆಯ ಎಲ್ಲೆಡೆ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ವಿಶೇಷ ಮುತುವರ್ಜಿ ವಹಿಸಿ, ಉದ್ಯೋಗ ಖಾತ್ರಿ ಅಡಿ ಹೆಚ್ಚಿನ ಜನರಿಗೆ ಉದ್ಯೋಗ ಅವಕಾಶಗಳನ್ನು ಕೊಟ್ಟು ಗುಳೇ ತಡೆಯಲು ಶ್ರಮಿಸಿದರು.

ಇಬ್ಬರಿಗೆ ಸಚಿವ ಸ್ಥಾನ:ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ಸಿಗದೇ ಇರುವುದರಿಂದ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಆದರೆ, ವರ್ಷದ ಕೊನೆಯಲ್ಲಿ ಸಂಡೂರು ಶಾಸಕ ಈ. ತುಕಾರಾಂ ಹಾಗೂ ಹೂವಿನಹಡಗಲಿಯಿಂದ ಆಯ್ಕೆಯಾದ ಪಿ.ಟಿ.ಪರಮೇಶ್ವರ ನಾಯ್ಕ ಅವರಿಗೆ ಸಂಪುಟ ದರ್ಜೆ ಸಚಿವರಾಗಿ ಮಾಡಲಾಯಿತು. ಆರಂಭದ ಆರು ತಿಂಗಳು ಸ್ಥಳೀಯ ಜನಪ್ರತಿನಿಧಿಗಳಿಗೆ ಸಂಪುಟದಲ್ಲಿ ಸ್ಥಾನಮಾನವಿಲ್ಲದೆ ಸೊರಗಿದ ಜಿಲ್ಲೆಗೆ, ಕೊನೆಯಲ್ಲಿ ಎರಡು ಸಚಿವ ಸ್ಥಾನಗಳು ಒಲಿದು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT