ಶುಕ್ರವಾರ, ಡಿಸೆಂಬರ್ 13, 2019
24 °C
ರೈತರ ಬೇಡಿಕೆಗೆ ಸಂಪೂರ್ಣ ಸ್ಪಂದಿಸದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ

ಎರಡನೇ ಬೆಳೆಗೆ ನೀರು; ರೈತರಿಗೆ ಸಿಹಿ–ಕಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಎರಡನೇ ಬೆಳೆಗೆ ನೀರು ಹರಿಸುವ ಸಂಬಂಧ ಗುರುವಾರ ಮುನಿರಾಬಾದ್‌ನಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಧಾರವೂ ರೈತರಿಗೆ ಸ್ವಲ್ಪ ಸಿಹಿ, ಸ್ವಲ್ಪ ಕಹಿ ತಂದುಕೊಟ್ಟಿದೆ.

ಜಲಾಶಯದಲ್ಲಿ ಸದ್ಯ 97 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹ ಇರುವುದರಿಂದ ಎರಡನೇ ಬೆಳೆಗೆ ಯಾವುದೇ ಅಡೆತಡೆಯಿಲ್ಲದೆ ನೀರು ಹರಿಸಬಹುದು ಎಂಬ ಉಮೇದಿನಲ್ಲಿ ರೈತರು ಇದ್ದರು. ಆದರೆ, ಅವರ ನಿರೀಕ್ಷೆ ಹುಸಿಯಾಗಿದೆ.

ಜಲಾಶಯದ ಕೆಳಮಟ್ಟದ ಕಾಲುವೆಗೆ (ಎಲ್‌.ಎಲ್‌.ಸಿ.) ಏಪ್ರಿಲ್‌ ಕೊನೆಯ ವರೆಗೆ ನೀರು ಹರಿಸಬೇಕು ಎಂಬುದು ರೈತರ ಬೇಡಿಕೆಯಾಗಿತ್ತು. ಆದರೆ, ಮಾರ್ಚ್‌ 30ರ ವರೆಗೆ ನೀರು ಬಿಡಲು ಸಭೆ ತೀರ್ಮಾನಿಸಿದೆ. ಮೇಲ್ಮಟ್ಟದ ಕಾಲುವೆಗೆ (ಎಚ್‌.ಎಲ್‌.ಸಿ.) ಡಿ. 20ರಿಂದ 30ರ ವರೆಗೆ ನೀರು ನಿಲ್ಲಿಸಿ, ಜ. 15ರ ವರೆಗೆ ಆನ್‌ ಆಫ್‌ ಪ್ರಕಾರ ನೀರು ಹರಿಸಲಾಗುತ್ತದೆ. ಫೆಬ್ರುವರಿ ವರೆಗೆ ಸತತವಾಗಿ ನೀರು ಹರಿಸಬೇಕೆಂಬ ರೈತರ ಮಾತಿಗೆ ಕಿವಿಗೊಟ್ಟಿಲ್ಲ. ವಿಜಯನಗರ ಉಪಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸುವ ನಿರ್ಧಾರ ರೈತರಿಗೆ ಸಂತಸ ತಂದಿದೆ.

‘ಹೋದ ವರ್ಷ ನವೆಂಬರ್‌ನಲ್ಲಿ 47 ಟಿ.ಎಂ.ಸಿ. ಅಡಿ ನೀರಿತ್ತು. ಹೀಗಿದ್ದರೂ ಎರಡನೇ ಬೆಳೆಗೆ ನೀರು ಹರಿಸಲಾಗಿತ್ತು. ಈಗ ಎರಡು ಪಟ್ಟು ಅಧಿಕ ನೀರಿನ ಸಂಗ್ರಹವಿದ್ದರೂ ನೀರು ಹರಿಸಲು ಹಿಂದೆ, ಮುಂದೆ ಏಕೆ ನೋಡುತ್ತಿದ್ದಾರೆ’ ಎಂಬುದು ರೈತರ ಪ್ರಶ್ನೆಯಾಗಿದೆ.

‘ಈ ವರ್ಷ ಕಾಲುವೆಗಳಿಗೆ ಜುಲೈನಲ್ಲಿ ನೀರು ಹರಿಸುವುದರ ಬದಲು ಆಗಸ್ಟ್‌ನಲ್ಲಿ ಒಂದು ತಿಂಗಳು ತಡವಾಗಿ ಬಿಡಲಾಗಿತ್ತು. ಹಾಗಾಗಿ ಈಗ ಏಪ್ರಿಲ್‌ ವರೆಗೆ ಬಿಟ್ಟರೆ ರೈತರಿಗೆ ಬೆಳೆ ಬೆಳೆಯಲು ಅನುಕೂಲವಾಗುತ್ತದೆ’ ಎನ್ನುವುದು ರೈತರ ವಾದವಾಗಿದೆ.

‘ಬೆಳೆ ಕೈಸೇರುವ ಸಂದರ್ಭದಲ್ಲಿ ಮಳೆಯಾಗಿದ್ದರಿಂದ ಜಿಲ್ಲೆಯ ಹಲವೆಡೆ ಮೆಣಸಿನಕಾಯಿ, ಹತ್ತಿ, ಬಾಳೆ ಹಾಳಾಗಿದೆ. ರೈತರು ಪುನಃ ನಾಟಿ ಮಾಡಿದ್ದಾರೆ. ಅವರ ಬೆಳೆ ಕೈ ಸೇರುವವರೆಗೆ ಮೇಲ್ಮಟ್ಟದ ಕಾಲುವೆಗೂ (ಎಚ್‌.ಎಲ್‌.ಸಿ.) ನೀರು ಹರಿಸಬೇಕು. ಆರಂಭದಲ್ಲಿ ಒಂದು ತಿಂಗಳು ತಡವಾಗಿ ಎಲ್‌.ಎಲ್‌.ಸಿ.ಗೆ ನೀರು ಹರಿಸಿದ್ದರು. ಹೀಗಾಗಿ ಈಗ ಏಪ್ರಿಲ್‌ ವರೆಗೆ ಹರಿಸಿ ಸರಿದೂಗಿಸಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌ ಒತ್ತಾಯಿಸಿದರು.

‘ಅಣೆಕಟ್ಟೆ ಸಂಪೂರ್ಣ ತುಂಬಿದ ಸ್ಥಿತಿಯಲ್ಲಿದೆ. ಕುಡಿಯುವ ನೀರು, ಡೆಡ್‌ ಸ್ಟೋರೇಜ್‌ಗೆ 10 ಟಿ.ಎಂ.ಸಿ. ಅಡಿ ನೀರು ಮೀಸಲಿಟ್ಟರೂ ಇನ್ನೂ 80 ಟಿ.ಎಂ.ಸಿ. ಅಡಿಗಿಂತ ಹೆಚ್ಚು ನೀರು ಇರುತ್ತದೆ. ಹಾಗಾಗಿ ನೀರು ಬಿಡಲು ಜಿಪುಣತನ ತೋರಿರುವುದು ಸರಿಯಲ್ಲ’ ಎನ್ನುತ್ತಾರೆ ರೈತ ಬಸವರಾಜ.

ಪ್ರತಿಕ್ರಿಯಿಸಿ (+)