ಗುರುವಾರ , ಫೆಬ್ರವರಿ 25, 2021
27 °C
ಶಿಕ್ಷಣ ಇಲಾಖೆಯು ಬರೆದ ಪತ್ರಕ್ಕೆ ಒಂದು ವರ್ಷ

ಶಿಥಿಲ ಗುರು ಭವನ ಶಿಕ್ಷಕರ ದಿನವೇ ನೆಲಸಮ!

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Deccan Herald

ಬಳ್ಳಾರಿ: ಹಣದ ಅಭಾವದಿಂದ ಪೂರ್ಣ ನಿರ್ಮಾಣಗೊಳ್ಳದೆ ಒಂಭತ್ತು ವರ್ಷದಿಂದ ಪಾಳುಬಿದ್ದು ಶಿಥಿಲಗೊಂಡಿದ್ದ ನಗರದ ಜಿಲ್ಲಾ ಗುರುಭವನವನ್ನು ಕೆಡವಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಪತ್ರ ಬರೆದ ಒಂದು ವರ್ಷದ ಬಳಿಕ ಪಾಲಿಕೆಯು ಅದನ್ನು ಶಿಕ್ಷಕರ ದಿನಾಚರಣೆಯ ದಿನವೇ ನೆಲಸಮಗೊಳಿಸಿದೆ!

ಸರಿಯಾಗಿ ಹತ್ತು ವರ್ಷದ ಹಿಂದೆ 1998ರಲ್ಲಿ ಅಂದಿನ ಭೂ ಸೇನಾ ನಿಗಮವು ಕಟ್ಟಡ ನಿರ್ಮಾಣ ಕಾರ್ಯವನ್ನು ಆರಂಭಿಸಿತ್ತು. ಆದರೆ ಛಾವಣಿ ಹಂತಕ್ಕೆ ಬರುವ ವೇಳೆಗೆ ಹಣದ ಕೊರತೆ ಎದುರಾಗಿ, ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು.

ಅದೇ ಸ್ಥಳದಲ್ಲಿ ಹೊಸ ಗುರು ಭವನ ನಿರ್ಮಾಣಕ್ಕೆ ಗುದ್ದಲಿಪೂಜೆ ಮಾಡಿಯೇ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಳ್ಳಬೇಕು ಎಂದು ಇಲಾಖೆಯು ನಿರ್ಧರಿಸಿದ ಪರಿಣಾಮ, ಬುಧವಾರ ಜಿಲ್ಲಾ ಮಟ್ಟದ ಕಾರ್ಯಕ್ರಮ ನಡೆಯಲಿಲ್ಲ. ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿ ಮಾತ್ರ ದಿನಾಚರಣೆ ನಡೆಯಿತು.

ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಮತ್ತೆ ಶಿಥಿಲ ಗುರುಭವನದ ಪ್ರಸ್ತಾಪ ಎದ್ದರೆ ಅದಕ್ಕೆ ಉತ್ತರಿಸಲು ಆಗುವುದಿಲ್ಲ ಎಂಬ ಕಾರಣಕ್ಕೆ ಹಳೇ ಭವನವನ್ನು ಕೆಡಹುವ ನಿರ್ಧಾರ ಕೈಗೊಳ್ಳಲಾಯಿತು ಎಂಬು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕಚೇರಿ ಮೂಲಗಳ ನುಡಿ. ಆದರೆ ಉಪನಿರ್ದೇಶಕರು ಅದನ್ನು ತಳ್ಳಿಹಾಕಿದ್ದಾರೆ.

‘ಹಳೇ ಗುರುಭವನ ಚಿಕ್ಕದಾಗಿತ್ತು. ಈಗ ದೊಡ್ಡದಾಗಿ ಭವನ ನಿರ್ಮಿಸಲು ನಿರ್ಧರಿಸಲಾಗಿದ್ದು, ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ‘ಪ್ರಜಾವಾಣಿ’ಗೆ ಬುಧವಾರ ತಿಳಿಸಿದರು.

ತಡವೇಕೆ? ಉತ್ತರವಿಲ್ಲ: ‘ಗುರುಭವನ ಕೆಡವಬೇಕು ಎಂದು ಹಿಂದಿನ ವರ್ಷ ಆಗಸ್ಟ್‌ 30ರಂದೇ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಿರಿ. ಆದರೆ ಒಂದು ವರ್ಷ ತಡವಾಗಿ ಭವನವನ್ನು ಕೆಡವಲಾಗಿದೆ. ಏಕೆ ತಡವಾಯಿತು?’ ಎಂಬ ಪ್ರಶ್ನೆಗೂ ಉಪನಿರ್ದೇಶಕರ ಬಳಿ ಉತ್ತರವಿಲ್ಲ.

ಹಿಂದಿನ ವರ್ಷ, ಹೊಸ ಕಟ್ಟಡ ನಿರ್ಮಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ನಿಂಗಪ್ಪ ಅಂದಿನ ಉಸ್ತುವಾರಿ ಸಚಿವ ಸಂತೋಷ್‌ಲಾಡ್‌ ಅವರಿಗೆ ಮನವಿ ಸಲ್ಲಿಸಿದ್ದರು. ಅದನ್ನು ಆಧರಿಸಿ ಅಂದಿನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌ಸೇಟ್‌ ಅವರ ಗಮನ ಸೆಳೆದಿದ್ದರು.

‘ಕಟ್ಟಡದಲ್ಲಿ ಹೆಚ್ಚು ಬಿರುಕುಗಳು ಕಂಡುಬಂದಿವೆ. ಲಿಂಟಲ್‌ ಕಾಂಕ್ರಿಟ್‌ನಲ್ಲಿ ಉಕ್ಕಿನ ಕಂಬಿಗಳು ಹೊರಗೆ ಕಾಣುತ್ತಿದ್ದು, ತುಕ್ಕು ಹಿಡಿದಿವೆ. ಈ ಹಂತದಲ್ಲಿ ಅಲ್ಲಿ ಕಟ್ಟಡ ನಿರ್ಮಾಣ ಮುಂದುವರಿಸುವುದು ಸರಿಯಲ್ಲ’  ಎಂದು ಲೋಕೋಪಯೋಗಿ ಇಲಾಖೆಯು ತಾಂತ್ರಿಕ ವರದಿಯನ್ನು ಸಲ್ಲಿಸಿತ್ತು.

ಅನುದಾನ:
‘₨ 5.75 ಕೋಟಿ ವೆಚ್ಚದಲ್ಲಿ ಭವನ ನಿರ್ಮಿಸಲು ನಿರ್ಧರಿಸಲಾಗಿದ್ದು, ಜಿಲ್ಲಾಧಿಕಾರಿಗೆ ಕೆಲವು ದಿನಗಳ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಎಲ್ಲಿಂದ ದೊರಕುತ್ತದೆ ಎಂಬುದು ಇನ್ನೂ ಗೊತ್ತಾಗಿಲ್ಲ’ ಎಂದು ಉಪನಿರ್ದೇಶಕರು ಹೇಳಿದರು.

 

 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು