ಹಂಪಿಯಿಂದ ಬನಶಂಕರಿಗೆ ಪಾದಯಾತ್ರೆ

7
ಹಂಪಿ ಹೇಮಕೂಟ ಮಹಾಸಂಸ್ಥಾನ ಗಾಯತ್ರಿ ಪೀಠದ ದಯಾನಂದ ಪುರಿ ಸ್ವಾಮೀಜಿ ಹೇಳಿಕೆ

ಹಂಪಿಯಿಂದ ಬನಶಂಕರಿಗೆ ಪಾದಯಾತ್ರೆ

Published:
Updated:
Prajavani

ಹೊಸಪೇಟೆ: ‘ನೂಲು ಹುಣ್ಣಿಮೆಯ ಪ್ರಯುಕ್ತ ಇದೇ 14ರಂದು ಹಂಪಿಯಿಂದ ನೇಕಾರರ ಕುಲದೈವ ಬಾದಾಮಿಯ ಬನಶಂಕರಿ ಅಮ್ಮನ ಸನ್ನಿಧಿ ವರೆಗೆ ಪಾದಯಾತ್ರೆ ಕೈಗೊಳ್ಳಲಾಗಿದೆ’ ಎಂದು ಹಂಪಿ ಹೇಮಕೂಟ ಮಹಾಸಂಸ್ಥಾನ ಗಾಯತ್ರಿ ಪೀಠದ ದಯಾನಂದ ಪುರಿ ಸ್ವಾಮೀಜಿ ತಿಳಿಸಿದರು.

ಭಾನುವಾರ ಹಂಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪ್ರತಿ ವರ್ಷ ನೂಲು ಹುಣ್ಣಿಮೆಯ ದಿನ ಕುಲದೇವತೆಗೆ ಪೀತಾಂಬರ ಸೀರೆ ಸಮರ್ಪಿಸಿ ಪೂಜಿಸಲಾಗುತ್ತದೆ. ಈ ವರ್ಷ ನೂತನ ಪಲ್ಲಕ್ಕಿಯೊಂದಿಗೆ ಪಾದಯಾತ್ರೆ ಕೈಗೊಳ್ಳಲಾಗಿದೆ. ಹುನಗುಂದ ತಾಲ್ಲೂಕಿನ ಸೂಳೇಭಾವಿ ಶಾಖಂಬರಿ ನೇಕಾರ ಸಹಕಾರ ಸಂಘ ಕೊಡುವ ಪೀತಾಂಬರ ಸೀರೆಯೊಂದಿಗೆ ಬನಶಂಕರಿಗೆ ತೆರಳಿ, 21ರಂದು ವಿಶೇಷ ಪೂಜೆ ನೆರವೇರಿಸಿ ಸಮರ್ಪಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘1904ರಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಪ್ರತಿ ವರ್ಷ ನೇಕಾರರು ತಯಾರಿಸಿದ ಮೊದಲ ನೂಲು, ಅಮ್ಮನಿಗೆ ಸಮರ್ಪಿಸುವ ವಾಡಿಕೆ ಇದೆ. ಈ ಸಲ ಮೊದಲ ಬಾರಿಗೆ ಪಾದಯಾತ್ರೆ ಮೂಲಕ ತೆರಳಿ ನೂಲು ಸಮರ್ಪಿಸಲಾಗುವುದು. ನೂರಾರು ಜನ ಈ ಪಾದಯಾತ್ರೆಯಲ್ಲಿ ಭಾಗವಹಿಸುವರು’ ಎಂದರು.

‘ಬನಶಂಕರಿಯಲ್ಲಿ ಮಾರ್ಚ್‌ 3ರಂದು ಶಾಖಾ ಮಠ, ಯಾತ್ರಿ ನಿವಾಸ, ಸಮುದಾಯ ಭವನದ ಉದ್ಘಾಟನೆ ನಡೆಯಲಿದೆ. ಜತೆಗೆ 60 ಜೋಡಿಗಳ ಸಾಮೂಹಿಕ ವಿವಾಹ ಜರುಗಲಿದೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ರಾಜ್ಯ ನೇಕಾರರ ಒಕ್ಕೂಟದ ಸಂಘದ ಅಧ್ಯಕ್ಷ ಎಂ.ಡಿ. ಲಕ್ಷ್ಮಿನಾರಾಯಣ ಪಾಲ್ಗೊಳ್ಳುವರು’ ಎಂದು ತಿಳಿಸಿದರು.

ದೇವಾಂಗ ಸಮಾಜದ ಮುಖಂಡರಾದ ಪರಗಿ ಶ್ರೀಶೈಲಪ್ಪ, ಗೋಸಿ ಸತೀಶ, ಪರಗಿ ನಾಗರಾಜ, ಅಗಳಿ ಪಂಪಾಪತಿ, ಕಾಳಗಿ ಸುದರ್ಶನ, ಗಣಪತಿ, ಬ್ರಹ್ಮಾನಂದ, ಬಣ್ಣದ ಕೇಮಣ್ಣ, ಕೊಳಗದ ಗಣಪತಿ, ರವೀಂದ್ರ ಕಲಬುರ್ಗಿ, ಪಿ.ಆರ್‌. ಗಿರಿಯಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !