ಬುಧವಾರ, ನವೆಂಬರ್ 13, 2019
28 °C
ಮದುವಣಗಿತ್ತಿಯಂತೆ ಸಿಂಗಾರಗೊಂಡಿರುವ ಹೊಸಪೇಟೆ ರೈಲು ನಿಲ್ದಾಣ

ಇಂದಿನಿಂದ ಕೇಳಿಸಲಿದೆ ಚುಕುಬುಕು ಸದ್ದು

Published:
Updated:
Prajavani

ಹೊಸಪೇಟೆ: ಬಹುನಿರೀಕ್ಷಿತ ಹೊಸಪೇಟೆ–ಕೊಟ್ಟೂರು–ಹರಿಹರ ಪ್ರಯಾಣಿಕರ ರೈಲು ಸಂಚಾರಕ್ಕೆ ಕಾಲ ಕೂಡಿ ಬಂದಿದ್ದು, ಗುರುವಾರದಿಂದ (ಅ.17) ಚುಕುಬುಕು ಸದ್ದು ಕೇಳಿ ಬರಲಿದೆ.

ಈ ಭಾಗದ ಜನ, ಸಂಘ ಸಂಸ್ಥೆಗಳ ಹೋರಾಟದಿಂದ ಎರಡೂವರೆ ದಶಕಗಳ ನಂತರ ಫಲ ಸಿಗುತ್ತಿದೆ. 1990ರಲ್ಲಿ ಹೊಸಪೇಟೆ–ಕೊಟ್ಟೂರು–ಸ್ವಾಮಿಹಳ್ಳಿ ನಡುವೆ ಮೀಟರ್‌ ಗೇಜ್‌ ಇತ್ತು. ಆ ವೇಳೆ ಪ್ರಯಾಣಿಕ ಹಾಗೂ ಸರಕು ಸಾಗಣೆ ರೈಲು ಸಂಚರಿಸುತ್ತಿದ್ದವು.

1995ರಲ್ಲಿ ಈ ಮಾರ್ಗವನ್ನು ಬ್ರಾಡ್‌ಗೇಜ್‌ಗೆ ಪರಿವರ್ತಿಸಲಾಗಿತ್ತು. ಸರಕು ಸಾಗಣೆ ರೈಲುಗಳು ಸಂಚರಿಸುತ್ತಿದ್ದವು. ಆದರೆ, ಪ್ಯಾಸೆಂಜರ್‌ ರೈಲು ಸ್ಥಗಿತಗೊಳಿಸಲಾಗಿತ್ತು. ಸ್ಥಳೀಯರ ಸತತ ಹೋರಾಟದ ಫಲವಾಗಿ 24 ವರ್ಷಗಳ ಬಳಿಕ ಪ್ರಯಾಣಿಕರ ರೈಲು ಓಡಾಟಕ್ಕೆ ವೇದಿಕೆ ಸಿದ್ಧವಾಗಿದೆ.

ಈ ರೈಲು ಮಾರ್ಗದಿಂದ ಹರಿಹರ, ದಾವಣಗೆರೆ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಕೊಪ್ಪಳ, ಬಳ್ಳಾರಿ ಭಾಗದ ರೈಲು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಬೆಂಗಳೂರು-ಹೊಸಪೇಟೆ ಮತ್ತು ಹುಬ್ಬಳ್ಳಿ-ಗುಂತಕಲ್ ಮಾರ್ಗಗಳ ಮಧ್ಯೆ ಸಂಪರ್ಕ ಬೆಸೆಯುವ ಕೊಂಡಿಯಾಗಲಿದೆ. ಅಷ್ಟೇ ಅಲ್ಲ, ಮಂಗಳೂರು, ಹಾಸನ, ಮೈಸೂರಿಗೆ ಸಂಪರ್ಕ ಬೆಸೆಯುತ್ತದೆ. ಬೆಂಗಳೂರಿಗೆ ಸಂಚರಿಸುವ ಪ್ರಯಾಣದ ಅವಧಿ ಕೂಡ ತಗ್ಗಲಿದೆ.

ಗುರು ಕೊಟ್ಟೂರೇಶ್ವರನ ದರ್ಶನಕ್ಕೆ ಕೊಟ್ಟೂರಿಗೆ ಬರುವ ಭಕ್ತಾದಿಗಳಿಗೆ ಈ ರೈಲಿನಿಂದ ಪ್ರಯೋಜನವಾಗಲಿದೆ. ಹೊಸಪೇಟೆ ಉಪವಿಭಾಗ ಕೇಂದ್ರ ಆಗಿರುವುದರಿಂದ ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳ ಜನರಿಗೆ ಬಂದು ಹೋಗಲು ಅನುಕೂಲವಾಗಲಿದೆ.

ರೈಲು ಸಂಚಾರಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಗುರುವಾರ ಬೆಳಿಗ್ಗೆ 9.30ಕ್ಕೆ ನಗರ ನಿಲ್ದಾಣದಲ್ಲಿ ಚಾಲನೆ ನೀಡುವರು. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿರುವರು.

ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ರೈಲು ನಿಲ್ದಾಣ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ತಳಿರು ತೋರಣ, ವಿದ್ಯುದ್ದೀಪಗಳಿಂದ ನಿಲ್ದಾಣ ಝಗಮಗಿಸುತ್ತಿದೆ. ಸಭಾ ಕಾರ್ಯಕ್ರಮಕ್ಕೆ ನಿಲ್ದಾಣದ ಮುಂಭಾಗದಲ್ಲಿ ವೇದಿಕೆ ನಿರ್ಮಿಸಲಾಗಿದೆ.

ಪ್ರತಿಕ್ರಿಯಿಸಿ (+)