ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಕರಡು ಪಟ್ಟಿ ಪರಿಷ್ಕರಣೆ: ಖೊಟ್ಟಿ ದಾಖಲೆ ಕೊಟ್ಟರೆ ತಕ್ಕ ಶಾಸ್ತಿ

ತಹಶೀಲ್ದಾರ್ ಎಚ್ಚರಿಕೆ
Last Updated 6 ಡಿಸೆಂಬರ್ 2018, 13:40 IST
ಅಕ್ಷರ ಗಾತ್ರ

ಹೊಸಪೇಟೆ: ‘ವಿಜಯನಗರ ಕ್ಷೇತ್ರದ ಕರಡು ಮತದಾರರ ಪಟ್ಟಿ ಡಿ. 10ರಂದು ಅಂತಿಮಗೊಳ್ಳಲಿದ್ದು, ಯಾವುದೇ ರೀತಿಯ ತಕರಾರುಗಳಿದ್ದರೆ ಲಿಖಿತ ರೂಪದಲ್ಲಿ ಡಿ. 15ರಂದು ಆಕ್ಷೇಪಣೆಗೆ ಅರ್ಜಿ ಸಲ್ಲಿಸಬಹುದು’ ಎಂದು ತಹಶೀಲ್ದಾರ್‌ ಎಚ್. ವಿಶ್ವನಾಥ್‌ ಹೇಳಿದರು.

ಗುರುವಾರ ಇಲ್ಲಿನ ನಗರಸಭೆ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಹಾಗೂ ನಗರಸಭೆ ಸದಸ್ಯರೊಂದಿಗೆ ನಡೆಸಿದ ಮತದಾರರ ಕರಡು ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

‘2019ರ ಜ.1ಕ್ಕೆ 18 ವರ್ಷ ತುಂಬುವವರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಡಿ. 20ರ ವರೆಗೆ ಕಾಲಾವಕಾಶ ಕೊಡಲಾಗಿದೆ. ಆಯಾ ವಾರ್ಡ್‌ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳಿಗೆ ನೇರವಾಗಿ ಅರ್ಜಿ ಕೊಡಬಹುದು. ಆಕ್ಷೇಪಣೆ ಸಲ್ಲಿಸಿದ ನಂತರ ಪಟ್ಟಿಯಲ್ಲಿ ಲೋಪ ಕಂಡು ಬಂದರೆ ಸರಿಪಡಿಸಲಾಗುವುದು. ಬಳಿಕ ಡಿ. 26ರಂದು ಅಂತಿಮ ಕರಡು ಪಟ್ಟಿ ಪ್ರಕಟಿಸಲಾಗುವುದು. ಅದಾದ ನಂತರ ಯಾವುದೇ ಕಾರಣಕ್ಕೂ ಪಟ್ಟಿಯಲ್ಲಿ ಬದಲಾವಣೆ ಮಾಡಲು ಆಗುವುದಿಲ್ಲ. ನಂತರ ರಾಜಕೀಯ ಪಕ್ಷಗಳ ಮುಖಂಡರು ದೂರು ಕೊಟ್ಟರೆ ಪ್ರಯೋಜನವಾಗುವುದಿಲ್ಲ. ನಿಗದಿತ ಅವಧಿಯೊಳಗೆ ದೂರು ಕೊಡಬಹುದು’ ಎಂದು ತಿಳಿಸಿದರು.

‘ಯಾರಾದರೂ ಎರಡೆರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದರೆ, ಮೃತಪಟ್ಟವರ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದು ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ಕೊಡಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು, ಬೇರೆ ಕಡೆ ವರ್ಗಾವಣೆ ಮಾಡಿಸಿಕೊಳ್ಳುವುದು ಮತದಾರನ ಹಕ್ಕು. ಮತದಾರನಿಗೆ ಬಿಟ್ಟರೆ ಬೇರೆಯವರಿಗೆ ಈ ಅವಕಾಶ ಇಲ್ಲ. ಮುಕ್ತ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಸುವುದು ಆಯೋಗದ ಜವಾಬ್ದಾರಿ. ಅದಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌ ಮಾತನಾಡಿ, ‘ಕ್ಷೇತ್ರ ಪುನರ್‌ ವಿಂಗಡಣೆ ಪ್ರಕಾರ ಆಯಾ ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿ ತಯಾರಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಇದೇ ಮತದಾರರ ಪಟ್ಟಿ ಅನ್ವಯಿಸಲಿದೆ’ ಎಂದರು.
ನಗರಸಭೆ ಅಧ್ಯಕ್ಷ ಗುಜ್ಜಲ್‌ ನಿಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT