ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಸಿ,ಎಸ್‌ಟಿ ಕಾಯ್ದೆ ‘ಸುಪ್ರೀಂ’ ಆದೇಶ ಖಂಡಿಸಿ ಬಂದ್‌: 9 ಸಾವು, ಹಲವರಿಗೆ ಗಾಯ

Last Updated 2 ಏಪ್ರಿಲ್ 2018, 20:01 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ಎಸ್‌ಟಿ, ಎಸ್‌ಟಿ) ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳು ಕರೆ ನೀಡಿದ್ದ ‘ಭಾರತ ಬಂದ್‌’ ಹಿಂಸಾಚಾರಕ್ಕೆ ತಿರುಗಿದೆ.

ಹಿಂಸೆಗೆ ಒಟ್ಟು 9 ಮಂದಿ ಬಲಿಯಾಗಿದ್ದಾರೆ. ಮಧ್ಯಪ್ರದೇಶದಲ್ಲಿ ಆರು, ರಾಜಸ್ಥಾನದಲ್ಲಿ ಒಬ್ಬರು ಮತ್ತು ಉತ್ತರ ಪ್ರದೇಶದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಹಲವು ಮಂದಿಗಾಯಗೊಂಡಿದ್ದಾರೆ.

ಎಸ್‌ಸಿ, ಎಸ್‌ಟಿ ಸಮುದಾಯದ ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ದೂರು ಸಲ್ಲಿಕೆಯಾದ ಕೂಡಲೇ ಎಫ್‌ಐಆರ್‌ ದಾಖಲಿಸ
ಬಾರದು ಮತ್ತು ಆರೋಪಿಗಳನ್ನು ಬಂಧಿಸಬಾರದು ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿತ್ತು. ಇದನ್ನು ಖಂಡಿಸಿ ಬಂದ್‌ ಕರೆ ನೀಡಲಾಗಿತ್ತು.

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಜನ ಜೀವನ ಏರುಪೇರಾಗಿದೆ. ಕೆಲವು ರಾಜ್ಯಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ.

ಸಂವಹನ ಮತ್ತು ಸಂಚಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಗುಜರಾತ್‌, ಒಡಿಶಾ ಮತ್ತು ಪಂಜಾಬ್‌ ರಾಜ್ಯಗಳಲ್ಲಿ ಹಿಂಸಾಚಾರ ವರದಿಯಾಗಿದೆ.

ಮಧ್ಯಪ್ರದೇಶದ ಮುರೇನಾ, ಗ್ವಾಲಿಯರ್‌ ಮತ್ತು ಭಿಂಡ್‌ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಭಿಂಡ್‌ ಜಿಲ್ಲೆಯಲ್ಲಿ ಪ್ರತಿಭಟನಕಾರರು ಹಾರಿ
ಸಿದ ಗುಂಡಿಗೆ ಆರು ಮಂದಿ ಗಾಯಗೊಂಡಿದ್ದಾರೆ. ಹಿಂಸಾಚಾರ ನಿಯಂತ್ರಿಸುವುದಕ್ಕಾಗಿ ಇಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ. ಪಂಜಾಬ್‌ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ಉತ್ತರ ಪ್ರದೇಶದ ಅಜಂಗಡ, ಆಗ್ರಾ, ಹಾಪುರ ಮತ್ತು ಮೀರಠ್‌ನಲ್ಲಿಯೂ ಪ್ರತಿಭಟನಕಾರರು ಹಿಂಸೆಗೆ ಇಳಿದರು. ಅಜಂಗಡದಲ್ಲಿ ಸರ್ಕಾರಿ ಸಾರಿಗೆ ಸಂಸ್ಥೆಯ ಎರಡು ಬಸ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಬಸ್‌ನಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. 

ವಿವಿಧ ರಾಜ್ಯಗಳಲ್ಲಿ ನೂರಕ್ಕೂ ಹೆಚ್ಚು ರೈಲು ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ. ಹಾಪುರ ರೈಲು ನಿಲ್ದಾಣದಲ್ಲಿ ಜಮಾವಣೆಗೊಂಡಿದ್ದ ಎರಡು ಸಾವಿರಕ್ಕೂ ಹೆಚ್ಚು ಪ್ರತಿಭಟನಕಾರರು ರೈಲು ಸಂಚಾರವನ್ನು ಅಸ್ತವ್ಯಸ್ತಗೊಳಿಸಿದ್ದಾರೆ. ಸರಕು ಸಾಗಾಟದ ರೈಲುಗಳನ್ನು ತಡೆದಿದ್ದಾರೆ. ದೆಹಲಿ
ಯಲ್ಲಿಯೂ ರೈಲು ಸಂಚಾರಕ್ಕೆ ಅಡ್ಡಿ ಮಾಡಲಾಗಿದೆ.

ಡೆಹ್ರಾಡೂನ್‌ ಎಕ್ಸ್‌ಪ್ರೆಸ್‌ ಮತ್ತು ರಾಂಚಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ  ಅಡ್ಡಿಪಡಿಸಲಾಗಿದೆ.

ರಾಜ್ಯದಲ್ಲಿಯೂ ಪ್ರತಿಭಟನೆ
ಹುಬ್ಬಳ್ಳಿ: ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ–1989 ಸಂಬಂಧಿಸಿದಂತೆ ನೀಡಿದ್ದ ತೀರ್ಪಿನ ಮರುಪರಿಶೀಲನೆಗೆ ಸಲ್ಲಿಸಲಾದ ಮನವಿಯ ಶೀಘ್ರ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಅಸಮ್ಮತಿ ಸೂಚಿಸಿರುವುದನ್ನು ಖಂಡಿಸಿ, ಹುಬ್ಬಳ್ಳಿ, ಬೆಳಗಾವಿ, ಖಾನಾಪುರ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ಗದಗ ಜಿಲ್ಲೆಯ ರೋಣ, ವಿಜಯಪುರದ ಸಿಂದಗಿ ಹಾಗೂ ಬಾಗಲಕೋಟೆಯ ಜಮಖಂಡಿಯಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಮರುಪರಿಶೀಲನೆಗೆ ಕೇಂದ್ರದ ಅರ್ಜಿ
ಎಸ್‌ಸಿ, ಎಸ್‌ಟಿ ಕಾಯ್ದೆಗೆ ಸಂಬಂಧಿಸಿ ಇತ್ತೀಚೆಗೆ ನೀಡಿದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸೋಮವಾರ ಅರ್ಜಿ ಸಲ್ಲಿಸಿದೆ. ಮಾರ್ಚ್‌ 20ರಂದು ನೀಡಿದ ತೀರ್ಪು ಸಂವಿಧಾನದ 21ನೇ ಕಲಂನ ಉಲ್ಲಂಘನೆಯಾಗಿದೆ. ಹಾಗಾಗಿ ಕಾಯ್ದೆಯಲ್ಲಿ ಇರುವ ಎಲ್ಲ ಅಂಶಗಳನ್ನು ಮರುಸ್ಥಾಪಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಪ್ರತಿಭಟನೆಗೆ ಕಾರಣ ಏನು? 

ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ದುರುಪಯೋಗ ಮಾಡಲಾಗುತ್ತಿದೆ. ಸರ್ಕಾರದ ಪ್ರಾಮಾಣಿಕ ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್‌ ಮಾಡಲು ಈ ಕಾಯ್ದೆಯನ್ನು ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿ, ಈ ಕಾಯ್ದೆ ಅಡಿ ದೂರು ಸಲ್ಲಿಕೆಯಾದ ಕೂಡಲೇ ಎಫ್‌ಐಆರ್ ದಾಖಲಿಸಬಾರದು ಮತ್ತು ಆರೋಪಿಗಳನ್ನು ಬಂಧಿಸಬಾರದು. ತನಿಖೆಯ ನಂತರವೇ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಮಾರ್ಚ್‌ 20ರಂದು ಆದೇಶ ನೀಡಿತ್ತು.

ಈ ಆದೇಶಕ್ಕೆ ದಲಿತರು ಮತ್ತು ವಿರೋಧ ಪಕ್ಷಗಳಿಂದ ಟೀಕೆ ವ್ಯಕ್ತವಾಗಿತ್ತು. ಕಾಯ್ದೆಯನ್ನು ದುರ್ಬಲಗೊಳಿಸಿದ್ದರಿಂದ ತಾರತಮ್ಯ ಮತ್ತು ದಲಿತರ ವಿರುದ್ಧದ ದೌರ್ಜನ್ಯ ಏರಿಕೆಯಾಗಲಿದೆ ಎಂದು ಟೀಕಾಕಾರರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT