ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗರಿಬೊಮ್ಮನಹಳ್ಳಿಯ ಗೋಂದಳಿ ರಾಮಣ್ಣಗೆ ಜಾನಪದ ಅಕಾಡೆಮಿ ಪ್ರಶಸ್ತಿ

50 ವರ್ಷಗಳಿಂದ ಗೋಂದಲಿ ಕಲೆಗೆ ವಿಶೇಷ ಕೊಡುಗೆ ನೀಡಿದ ಕಲಾವಿದ
Last Updated 4 ಜನವರಿ 2021, 17:08 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: 50 ವರ್ಷಗಳಿಂದ ಗೋಂದಲಿ ಪದಗಳ ಮೂಲಕ ಜಾನಪದ ಕಲೆಗೆ ವಿಶೇಷ ಕೊಡುಗೆ ನೀಡಿದ ತಾಲ್ಲೂಕಿನ ಹಂಪಾಪಟ್ಟಣದ ಗೋಂದಳಿ ರಾಮಣ್ಣ ಅವರಿಗೆ 2020ನೇ ಸಾಲಿನ ರಾಜ್ಯ ಸರ್ಕಾರದ ಕರ್ನಾಟಕ ಜಾನಪದ ಅಕಾಡೆಮಿಯ ಪ್ರತಿಷ್ಠಿತ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಫೆಬ್ರುವರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಜಾನಪದ ಕಲೆಗೆ ವಿಶೇಷ ಕೊಡುಗೆ ನೀಡಿದವರಲ್ಲಿ ಗೋಂದಳಿ ರಾಮಣ್ಣ ಒಬ್ಬರು. ತಮ್ಮ 69 ವರ್ಷ ವಯಸ್ಸಿನಲ್ಲೂ ಯುವಕರನ್ನು ನಾಚಿಸುವಂತೆ ಗೋಂದಲಿ ಪದ ಹಾಡುವುದು, ಹಾಡಿನ ಜತೆಗೆ ಸಂಬಾಳ ಮತ್ತು ತಾಳ ಹಾಕುವುದು, ಪದಕ್ಕೆ ತಕ್ಕ ಹಾಗೆ ಸ್ವರಗಳನ್ನು ಏರಿಳಿತಗೊಳಿಸುವುದು ಇವರ ವಿಶೇಷತೆ.

ಅವರ ತಂದೆ ದೇವೇಂದ್ರಪ್ಪ ಅವರೂ ಕಲಾವಿದರಾಗಿದ್ದು, ಅವರಿಂದ ಕಲೆಯ ಬಳುವಳಿಯನ್ನು ಮೈಗೂಡಿಸಿಕೊಂಡು, ಎಲ್ಲೆಡೆ ಪಸರಿಸುತ್ತಿದ್ದಾರೆ. ರಾಜ್ಯದಾದ್ಯಂತ ಗೋಂದಲಿಗ ಕಲೆಯ ಸವಿ ಉಣಬಡಿಸುತ್ತಿದ್ದಾರೆ.

ಆದಿಶಕ್ತಿ ಮಹಾತ್ಮೆಯನ್ನು ಎದೆತುಂಬಿ ಹಾಡುವ ಅವರು, ನಿಂತಲ್ಲೆ ತಾಳಕ್ಕೆ ತಕ್ಕ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಾರೆ. ದೇವರ ಕಥೆಗಳನ್ನು ಹಾಡಿನ ರೂಪದಲ್ಲಿ ಅತ್ಯಂತ ಸ್ವಾರಸ್ಯಕರವಾಗಿ ಹೇಳುವುದರಲ್ಲಿ ನಿಷ್ಣಾತರು.

ಪ್ರಧಾನ ಕಥೆಗಳ ಮಧ್ಯೆ ಹಾಸ್ಯದ ಗೊಂಚಲನ್ನು ಬಿಚ್ಚಿಡುವ ಇವರ ಆಟ ಈಗ ಮನೆ ಮಾತು. ಹಂಪಿ ಉತ್ಸವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ರಾಜ್ಯ ಮಟ್ಟದ ಅಲೆಮಾರಿ ಉತ್ಸವ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ, ವಿವಿಧ ಸಂಘ ಸಂಸ್ಥೆಗಳು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಗೋಂದಲಿಗರ ಕಲೆ ಪ್ರದರ್ಶಿಸಿದ್ದಾರೆ.

ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಮಳೆ ಬರದಿದ್ದರೆ, ಗೊಂದಲಿಗರ ಆಟ ಆಡಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆಯೂ ಇದೆ. ಮರಾಠಿಗರ ಮದುವೆಯಲ್ಲಿ ಇವರ ಗೋಂದಲ ಹಾಕುವುದು ಕಡ್ಡಾಯ. ಇಡೀ ರಾತ್ರಿ ದೇವಿ ಕಥೆ ಹೇಳಿದ ನಂತರವೇ ವಿವಾಹಗಳ ಕಾರ್ಯಕ್ರಮಗಳು ಆರಂಭವಾಗುವುದು.

ಖ್ಯಾತ ಚಲನಚಿತ್ರ ನಟ ದಿ. ಶಂಕರನಾಗ್ ಕೂಡ ತಮ್ಮ ನಿರ್ದೇಶನದ ಜೋಕುಮಾರ ಸ್ವಾಮಿ ಚಲನಚಿತ್ರದ ಶೂಟಿಂಗ್ ವೇಳೆ ಹಂಪಾಪಟ್ಟಣ ಗ್ರಾಮಕ್ಕೆ ಬಂದು, ದೇವೇಂದ್ರಪ್ಪ ಅವರನ್ನು ಭೇಟಿ ಮಾಡಿ ಹಲವು ಮಾಹಿತಿ ಪಡೆದಿದ್ದು ಇತಿಹಾಸ.

ಪ್ರಶಸ್ತಿ ₹25 ಸಾವಿರ ನಗದು ಹೊಂದಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT