ಬುಧವಾರ, ಮೇ 12, 2021
19 °C
ಹತ್ತನೇ ದಿನಕ್ಕೆ ಮುಷ್ಕರ; ಖಾಸಗಿಯವರದೇ ದರ್ಬಾರ್‌

ಬಸ್ಸಿಗೆ ಕಲ್ಲೆಸೆತ; ಮೂವರ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಬಸ್ಸಿನ ಮೇಲೆ ಕಲ್ಲು ತೂರಿದ ಆರೋಪದ ಮೇರೆಗೆ ಹೊಸಪೇಟೆ ಘಟಕದ ಇಬ್ಬರು ಹಾಗೂ ಕೂಡ್ಲಿಗಿ ಘಟಕದ ಒಬ್ಬರನ್ನು ಶುಕ್ರವಾರ ಕೆಲಸದಿಂದ ಅಮಾನತುಗೊಳಿಸಲಾಗಿದೆ.

ಹೊಸಪೇಟೆ ಘಟಕದ ಸಹಾಯಕ ಕುಶಲಕರ್ಮಿ ವಿಷ್ಣು ನಾಯ್ಕ, ಚಾಲಕ ಪ್ರಕಾಶ ಬಾಗೇವಾಡಿ ಹಾಗೂ ಕೂಡ್ಲಿಗಿ ಘಟಕದ ನಿರ್ವಾಹಕ ಬಸವರಾಜ ಅಮಾನತುಗೊಂಡವರು. ‘ಏ. 11ರಂದು ಹೊಸಪೇಟೆ ಘಟಕದ ಬಸ್ಸಿನ ಮೇಲೆ ಈ ಮೂವರು ಕಲ್ಲು ತೂರಾಟ ನಡೆಸಿದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ. ಕಲಬುರ್ಗಿಗೆ ನಾಲ್ವರು, ಬೀದರ್‌ಗೆ ಮೂವರು ಹಾಗೂ ಯಾದಗಿರಿ ಜಿಲ್ಲೆಗೆ ಒಬ್ಬ ಸಿಬ್ಬಂದಿಯನ್ನು ವರ್ಗಾವಣೆಗೊಳಿಸಲಾಗಿದೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ತಿಳಿಸಿದ್ದಾರೆ.

‘ಒಟ್ಟು 1,936 ಸಿಬ್ಬಂದಿ ಪೈಕಿ 1,406 ಜನ ಕೆಲಸಕ್ಕೆ ಮರಳಿದ್ದಾರೆ. ಪುನಃ ಸೇವೆಗೆ ಬಂದವರ ಮಾರ್ಚ್‌ ತಿಂಗಳ ವೇತನ ಬಿಡುಗಡೆಗೊಳಿಸಲಾಗಿದೆ. ವಿಭಾಗ ವ್ಯಾಪ್ತಿಯಲ್ಲಿ 138 ಬಸ್ಸುಗಳು ಸಂಚರಿಸಿವೆ. ಎಲ್ಲ ಘಟಕಗಳ ವ್ಯಾಪ್ತಿಯ ಸಿಬ್ಬಂದಿಯ ಮನೆಗೆ ವೈಯಕ್ತಿಕವಾಗಿ ಭೇಟಿ ನೀಡಿ, ಕೆಲಸಕ್ಕೆ ಮರಳುವಂತೆ ಮನವೊಲಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

ಹತ್ತನೇ ದಿನಕ್ಕೆ ಮುಷ್ಕರ:

ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ತರಬೇಕೆಂದು ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರ ಶುಕ್ರವಾರ ಹತ್ತನೇ ದಿನಕ್ಕೆ ಕಾಲಿರಿಸಿದೆ.

‘ಹೆಚ್ಚಿನ ಸಿಬ್ಬಂದಿ ಕೆಲಸಕ್ಕೆ ಮರಳಿದ್ದಾರೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ಹೇಳಿದ್ದಾರೆ. ಆದರೆ, ವಿಭಾಗ ವ್ಯಾಪ್ತಿಯ ಎಲ್ಲ ಬಸ್‌ ನಿಲ್ದಾಣಗಳಿಂದ ಹತ್ತನೇ ದಿನವೂ ಬೆರಳೆಣಿಕೆಯಷ್ಟು ಬಸ್‌ಗಳಷ್ಟೇ ಸಂಚರಿಸಿದವು.

ಬಸ್‌ ನಿಲ್ದಾಣಗಳಲ್ಲಿ ಖಾಸಗಿ ಬಸ್‌, ಮ್ಯಾಕ್ಸಿಕ್ಯಾಬ್‌, ಕ್ರೂಸರ್‌, ಟಂ ಟಂಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದವು. ಸಾರಿಗೆ ಸಂಸ್ಥೆ ಸೇರಿದ ಕೆಲವು ಬಸ್‌ಗಳು ಇದ್ದರೂ ಜನ ಅವುಗಳತ್ತ ಮುಖ ಮಾಡಲಿಲ್ಲ.

‘ಈಗಲೂ ಶೇ 95ರಷ್ಟು ಸಿಬ್ಬಂದಿ ಮುಷ್ಕರ ಬೆಂಬಲಿಸಿ ಕೆಲಸದಿಂದ ದೂರ ಉಳಿದಿದ್ದಾರೆ. ಆದರೆ, ವಿಭಾಗೀಯ ನಿಯಂತ್ರಣಾಧಿಕಾರಿ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ. ಈ ರೀತಿ ಮಾಡಿ ಮುಷ್ಕರ ದುರ್ಬಲಗೊಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಸಿಬ್ಬಂದಿಯ ಮನೆಗೆ ಹೋಗಿ, ಅವರಿಗೆ ಬೆದರಿಸಿ, ಒತ್ತಾಯಪೂರ್ವಕವಾಗಿ ಕೆಲಸಕ್ಕೆ ಕರೆಸಿಕೊಳ್ಳುತ್ತಿದ್ದಾರೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಸಾರಿಗೆ ಸಂಸ್ಥೆ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.