ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಭಾಗದಲ್ಲಿ ಹೆಚ್ಚು ನಿಗಾ ವಹಿಸಿ: ಸಚಿವ ಆನಂದ್‌ ಸಿಂಗ್‌ ಸೂಚನೆ

Last Updated 25 ಏಪ್ರಿಲ್ 2021, 12:25 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಕೋವಿಡ್‌–19 ತೀವ್ರ ಗತಿಯಲ್ಲಿ ಹರಡುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು’ ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವ ಆನಂದ್‌ ಸಿಂಗ್, ಇಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿವೈಎಸ್ಪಿ ಕಚೇರಿಯಲ್ಲಿ ಭಾನುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ‘ಸೋಮವಾರ (ಏ.26) ವಿಜಯನಗರ ಜಿಲ್ಲೆಯ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು ಹಾಗೂ ಸಂಡೂರು ತಾಲ್ಲೂಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವೆ. ಈ ಕುರಿತು ಅಲ್ಲಿನ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು’ ಎಂದು ಹೇಳಿದರು.

‘ಕೋವಿಡ್‌ ಪರೀಕ್ಷೆಗೆ ಒಳಗಾದವರ ವರದಿ ತಡವಾಗಿ ಬರುತ್ತಿರುವುದರ ಬಗ್ಗೆ ಅನೇಕ ದೂರುಗಳು ಬರುತ್ತಿವೆ. ಏಕೆ ಅಷ್ಟೊಂದು ವಿಳಂಬವಾಗುತ್ತಿದೆ’ ಎಂದು ಪ್ರಶ್ನಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ‘ಪರೀಕ್ಷೆ ಮಾಡಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಬೇಗ ವರದಿ ತರಿಸಿಕೊಳ್ಳಲು ಯೋಜಿಸಲಾಗಿದೆ. ಜಿಲ್ಲೆಯ ಜತೆಗೆ ನೆರೆಯ ಕೊಪ್ಪಳ ಜಿಲ್ಲೆಗೂ ವರದಿ ಕಳುಹಿಸಲಾಗುತ್ತಿದೆ. ಇದರಿಂದಾಗಿ ಸ್ವಲ್ಪ ವಿಳಂಬವಾಗುತ್ತಿದೆ’ ಎಂದು ತಿಳಿಸಿದರು.

‘ಕೆಲ ಕೋವಿಡ್‌ ರೋಗಿಗಳು ಮನೆಯಲ್ಲೇ ಐಸೋಲೇಷನ್‌ನಲ್ಲಿ ಇದ್ದಾರೆ. ಈ ಪೈಕಿ ಕೆಲವರು ಅನಕ್ಷರಸ್ಥರಿದ್ದಾರೆ. ಅವರಿಗೆ ಮೊಬೈಲ್‌ನಲ್ಲಿ ಸಂದೇಶ ಕಳುಹಿಸಿದರೆ ಗೊತ್ತಾಗುವುದಿಲ್ಲ. ಬದಲಾಗಿ ಅವರಿಗೆ ದೂರವಾಣಿ ಕರೆ ಮೂಲಕ ಸಂಪರ್ಕಿಸಿ ವಿಷಯ ತಿಳಿಸಬೇಕು’ ಎಂದು ಸಚಿವರು ಸೂಚಿಸಿದರು.

‘ಸಾರ್ವಜನಿಕರು ಅಂತರದಿಂದ ವ್ಯವಹರಿಸುವುದು, ಕಡ್ಡಾಯವಾಗಿ ಎಲ್ಲರೂ ಮಾಸ್ಕ್‌ ಧರಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಅನಗತ್ಯವಾಗಿ ಯಾರಿಗೂ ಹೊರಗೆ ಓಡಾಡಲು ಬಿಡಬಾರದು. ಹೋಂ ಐಸೋಲೇಷನ್‌ನಲ್ಲಿ ಇರುವವರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು’ ಎಂದು ತಾಕೀತು ಮಾಡಿದರು.

ಕೋವಿಡ್‌ಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿರುವವರ ಸಂಖ್ಯೆ, ಹೋಂ ಕ್ವಾರಂಟೈನ್‌, ಹಾಸಿಗೆ, ಆಮ್ಲಜನಕ ವ್ಯವಸ್ಥೆ, ಗುಣಮುಖರಾದವರ ಅಂಕಿ ಅಂಶ ಪಡೆದರು.

ಹೆಚ್ಚಿನ ಸಿಬ್ಬಂದಿಗೆ ಮನವಿ:

‘ಕೋವಿಡ್‌ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ದಿನದ 24 ಗಂಟೆಯೂ ಕೆಲಸ ಮಾಡಬೇಕಾಗಿದೆ. ಈಗಿರುವ ಸಿಬ್ಬಂದಿ ಜೊತೆಗೆ ಇನ್ನಷ್ಟು ಸಿಬ್ಬಂದಿಯ ಅಗತ್ಯವಿದ್ದು, ಅದಕ್ಕೆ ವ್ಯವಸ್ಥೆ ಮಾಡಿಕೊಡಬೇಕು’ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಲೀಂ ಮನವಿ ಮಾಡಿದರು.

ಡಿವೈಎಸ್ಪಿ ವಿ.ರಘುಕುಮಾರ್, ತಹಶೀಲ್ದಾರ್ ಎಚ್.ವಿಶ್ವನಾಥ್, ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಭಾಸ್ಕರ್, ಟಿ.ಬಿ ಡ್ಯಾಂ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ವಿ.ನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT