‘ನೀರು ತಂದವರು’ ವಿವೇಕದ ಪ್ರತೀಕ

7
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂವಾದದಲ್ಲಿ ಸಾಹಿತಿ ರಹಮತ್‌ ತರೀಕೆರೆ ಅಭಿಮತ

‘ನೀರು ತಂದವರು’ ವಿವೇಕದ ಪ್ರತೀಕ

Published:
Updated:
Deccan Herald

ಹೊಸಪೇಟೆ: ‘ನೀರು ನಮ್ಮ ಊರು–ಕೇರಿಯ ಸಮಸ್ಯೆಯಾಗಿ ಉಳಿದಿಲ್ಲ. ಅದೊಂದು ಅಂತರರಾಷ್ಟ್ರೀಯ ಸಮಸ್ಯೆಯಾಗಿದೆ. ಅತ್ಯಂತ ಜಟಿಲವಾಗಿರುವ ಈ ವಿಷಯದ ಮೂಲಕ ಚಿತ್ರದ ನಿರ್ದೇಶಕರು ಅವಿವೇಕದಿಂದ ವಿವೇಕ ಮೂಡಿಸುವ ಕೆಲಸ ಮಾಡಿದ್ದಾರೆ’ ಎಂದು ಸಾಹಿತಿ ರಹಮತ್‌ ತರೀಕೆರೆ ಹೇಳಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು ಸೋಮವಾರ ವಿ.ವಿ.ಯಲ್ಲಿ ಹಮ್ಮಿಕೊಂಡಿದ್ದ ಕಥೆಗಾರ ಅಮರೇಶ ನುಗಡೋಣಿ ಅವರ ಕಥೆ ಆಧಾರಿತ ‘ನೀರು ತಂದವರು’ ಚಲನಚಿತ್ರ ಪ್ರದರ್ಶನದ ಬಳಿಕ ನಡೆದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.

‘ನೀರಿನ ವಿಷಯ ಇಂದು ಬಹಳ ಗಂಭೀರವಾಗಿದೆ. ಆದರೆ, ನಿರ್ಮಾಪಕರು ಅದನ್ನು ಹಾಸ್ಯದ ಮೂಲಕ ತೋರಿಸಿದ್ದಾರೆ. ಮಹಿಳೆಯರ ವಿವೇಕವನ್ನು ಎತ್ತಿ ತೋರಿಸಿದ್ದಾರೆ. ಮಹಿಳೆಯರಲ್ಲಿರುವ ತಾಯ್ತನದ ಗುಣದಿಂದ ಆ ವಿವೇಕ ಅವರಲ್ಲಿ ಯಾವಾಗಲೂ ಜಾಗೃತವಾಗಿರುತ್ತದೆ. ಹೊಸಪೇಟೆ, ಗಂಗಾವತಿ ಸುತ್ತಮುತ್ತಲಿನ ಬೆಟ್ಟಗುಡ್ಡಗಳನ್ನು ಚಿತ್ರದಲ್ಲಿ ಉತ್ತಮ ರೀತಿಯಲ್ಲಿ ತೋರಿಸಿದ್ದಾರೆ. ಹಿಂದೆ ಯಾರು ಈ ತರಹದ ಕೆಲಸ ಮಾಡಿರಲಿಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಇಂದು ದೃಶ್ಯ ಹೆಚ್ಚು ಪರಿಣಾಮಕಾರಿಯಾಗಿದೆ. ಈ ನಿಟ್ಟಿನಲ್ಲಿ ‘ನೀರು ತಂದವರು’ ಹೆಚ್ಚು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ತಲುಪುತ್ತದೆ. ಸಾಹಿತ್ಯ ಕೃತಿಗಳಿಗೆ ಪ್ರತಿಕ್ರಿಯಿಸುವ ವಿಧಾನ ಇದೆ. ಸಿನಿಮಾದಲ್ಲಿ ಅದು ಇಲ್ಲ. ತಾಂತ್ರಿಕವಾಗಿ ಸಿನಿಮಾದ ಬಗ್ಗೆ ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಸಿನಿಮಾ, ನಾಟಕ ವಿಮರ್ಶೆ ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದಿಲ್ಲ’ ಎಂದರು.

ಅಮರೇಶ ನುಗಡೋಣಿ ಮಾತನಾಡಿ, ‘ಈ ರೀತಿಯ ಸದಭಿರುಚಿಯ ಸಿನಿಮಾಗಳನ್ನು ಅನೇಕ ಜನ ಮಾಡುತ್ತಿದ್ದಾರೆ. ಆದರೆ, ಅದರಿಂದ ಅವರಿಗೆ ಲಾಭ ಸಿಗುತ್ತಿಲ್ಲ. ಹೆಸರು, ಪ್ರಶಸ್ತಿಗಷ್ಟೇ ಸೀಮಿತವಾಗುತ್ತಿವೆ’ ಎಂದು ಹೇಳಿದರು.

‘ದೃಶ್ಯ ಹಾಗೂ ಭಾಷಿಕ ಮಾಧ್ಯಮದಲ್ಲಿ ಬಹಳಷ್ಟು ವ್ಯತ್ಯಾಸಗಳಿರುತ್ತವೆ. ಅದೇ ರೀತಿ ನನ್ನ ಮೂಲ ಕಥೆಗೂ ಸಿನಿಮಾದಲ್ಲಿನ ಅಂಶಗಳಿಗೂ ವ್ಯತ್ಯಾಸಗಳಿವೆ. ಆದರೆ, ನನ್ನ ಕಥೆಯ ಮೂಲ ಆಶಯವನ್ನು ಇಟ್ಟುಕೊಂಡೇ ನಿರ್ಮಾಪಕರು ಸಿನಿಮಾ ಮಾಡಿದ್ದಾರೆ’ ಎಂದರು.

ಚಿತ್ರದ ನಿರ್ಮಾಪಕ ನಿಡಸಾಲೆ ಪುಟ್ಟಸ್ವಾಮಯ್ಯ ಮಾತನಾಡಿ, ‘26 ವರ್ಷಗಳ ಹಿಂದೆ ನುಗಡೋಣಿ ಅವರು ಬರೆದ ಕಥೆಯನ್ನು ₨40 ಲಕ್ಷ ಬಂಡವಾಳದಿಂದ ಚಿತ್ರ ಮಾಡಲಾಗಿದೆ. ಅಮೆರಿಕ ಸೇರಿದಂತೆ ಹಲವೆಡೆ ಚಿತ್ರ ಪ್ರದರ್ಶನ ಕಂಡಿದೆ. ಅಷ್ಟೇ ಅಲ್ಲ, ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಇಂತಹ ಸದಭಿರುಚಿಯ ಚಿತ್ರ ಮಾಡುವವರನ್ನು ಜನ ಪ್ರೋತ್ಸಾಹಿಸಬೇಕು’ ಎಂದು ಮನವಿ ಮಾಡಿದರು.

ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ, ‘ಮೂಲಕೃತಿಯ ಆಶಯಕ್ಕೆ ಧಕ್ಕೆ ಬರದ ಹಾಗೆ ಚಲನಚಿತ್ರ ಮಾಡಲಾಗಿದೆ. ಪ್ರೇಕ್ಷಕನ ಬಯಕೆಗೆ ತಕ್ಕಂತೆ ಸಾಹಿತ್ಯ ಕೃತಿಯನ್ನು ಒಗ್ಗಿಸುವುದು ನಿರ್ದೇಶಕನಾದವನಿಗೆ ಸವಾಲಿನ ಕೆಲಸ’ ಎಂದರು.

ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ವೆಂಕಟಗಿರಿ ದಳವಾಯಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !