ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೀಣಿಸಿದ ಹೊಸ ಜಿಲ್ಲೆ ಪರ ಹೋರಾಟದ ದನಿ

ವಿಜಯನಗರ ಜಿಲ್ಲಾ ಕೇಂದ್ರವಾಗಬೇಕೆಂಬ ಮಾತಿಗೆ ಪಶ್ಚಿಮ ತಾಲ್ಲೂಕುಗಳಿಂದಲೇ ಸಿಗದ ಬೆಂಬಲ
Last Updated 21 ನವೆಂಬರ್ 2018, 20:08 IST
ಅಕ್ಷರ ಗಾತ್ರ

ಹೊಸಪೇಟೆ: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆಯೊಂದನ್ನು ಮಾಡಬೇಕೆಂಬ ಹೋರಾಟದ ಕೂಗು ಮತ್ತೆ ಕ್ಷೀಣಿಸಿದೆ.

ಅದರಲ್ಲೂ ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳಲ್ಲಿ ಒಂದಾಗಿರುವ ವಿಜಯನಗರವನ್ನು (ಹೊಸಪೇಟೆ) ಜಿಲ್ಲಾ ಕೇಂದ್ರವಾಗಿ ಮಾಡಬೇಕೆಂಬ ಕೂಗು ಇದೆ. ಆದರೆ, ಅದರ ಬಗ್ಗೆ ಗಟ್ಟಿಯಾದ ದನಿ ಕೇಳಿ ಬರುತ್ತಿಲ್ಲ.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ ನಂತರ ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಹೋರಾಟದ ಕೂಗು ಮತ್ತೆ ಕೇಳಿ ಬಂದಿತ್ತು. ಹೊಸ ಜಿಲ್ಲೆ ಪರ ಇರುವವರು ವಾಟ್ಸ್‌ ಆ್ಯಪ್‌ ಗ್ರುಪ್‌ ರಚಿಸಿಕೊಂಡು ಹೋರಾಟಕ್ಕೆ ವೇದಿಕೆ ಸಿದ್ಧಗೊಳಿಸುತ್ತಿದ್ದರು. ಹತ್ತು ವರ್ಷಗಳ ನಂತರ ಮತ್ತೆ ಹೋರಾಟ ತೀವ್ರಗೊಳ್ಳಬಹುದು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಈಗ ಅದು ಹುಸಿಯಾಗಿದೆ.

ವಾಟ್ಸ್‌ ಆ್ಯಪ್‌ ಗ್ರುಪ್‌ ರಚಿಸಿ ತಿಂಗಳು ಕಳೆದಿಲ್ಲ. ಅಷ್ಟರೊಳಗೆ ಗ್ರುಪ್‌ ಮಾಯವಾಗಿದೆ. ಅದರ ಬಗ್ಗೆ ಯಾರೂ ಚಕಾರ ಕೂಡ ಎತ್ತುತ್ತಿಲ್ಲ. ‘ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತಹ ನಾಯಕರು ಯಾರು ಇಲ್ಲ. ಈ ಕಾರಣಕ್ಕಾಗಿಯೇ ಹೋರಾಟಕ್ಕೆ ಹಿನ್ನಡೆಯಾಗುತ್ತಿದೆ’ ಎನ್ನುತ್ತಾರೆ ಹೊಸ ಜಿಲ್ಲೆ ಪರ ಹೋರಾಟಗಾರರಲ್ಲಿ ಒಬ್ಬರಾಗಿರುವ ವೈ. ಯಮುನೇಶ.

‘ಹೋರಾಟಗಾರರು ಬೇರೆ ಬೇರೆ ಪಕ್ಷಗಳ ಜತೆ ಗುರುತಿಸಿಕೊಂಡಿದ್ದಾರೆ. ರಾಜಕೀಯ ಕಾರಣಗಳಿಗಾಗಿ ಒಂದೇ ವೇದಿಕೆಯಡಿ ಸೇರುತ್ತಿಲ್ಲ. ಜತೆಗೆ ಹೋರಾಟದ ಮುಂದಾಳತ್ವ ಯಾರು ವಹಿಸಿಕೊಳ್ಳಬೇಕೆಂಬ ಪ್ರತಿಷ್ಠೆ ಇದೆ. ಅಷ್ಟೇ ಅಲ್ಲ, ಇಚ್ಛಾಶಕ್ತಿಯ ಕೊರತೆ ಕೂಡ ಎದ್ದು ಕಾಣಿಸುತ್ತಿದೆ’ ಎಂದರು.

‘ಯಾವುದೇ ಹೋರಾಟ ಯಶಸ್ವಿಯಾಗಬೇಕಾದರೆ ಜನಸಾಮಾನ್ಯರ ಭಾಗಿದಾರಿ ಬಹಳ ಮುಖ್ಯ. ದುಡಿದು ತಿನ್ನುವ ಜನರ ಸಂಖ್ಯೆ ಜಿಲ್ಲೆಯಲ್ಲಿ ಅಧಿಕವಿದೆ. ಆ ದಿನ ದುಡಿದರಷ್ಟೇ ಅವರ ಕುಟುಂಬದ ಹೊಟ್ಟೆ ತುಂಬುತ್ತದೆ. ಹೀಗಿರುವಾಗ ಜನರು ಅದರ ಬಗ್ಗೆ ಯೋಚಿಸುತ್ತಿಲ್ಲ. ಪ್ರಜ್ಞಾವಂತರು, ಅದಕ್ಕೂ ನಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ’ ಎಂದು ಹೇಳಿದರು.

‘ವಿಜಯನಗರ ಜಿಲ್ಲೆ ರಚನೆಗೆ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಶಾಸಕ ಆನಂದ್‌ ಸಿಂಗ್‌ ಹೇಳುತ್ತಿದ್ದಾರೆ. ಆದರೆ, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿಲ್ಲ. ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ ಅವರೊಂದಿಗೆ ಮುಸುಕಿನ ಗುದ್ದಾಟ ನಡೆಸಿದ್ದಾರೆ. ಹೀಗಿರುವಾಗ ಅವರು ವಿಜಯನಗರ ಜಿಲ್ಲೆ ರಚನೆಗೆ ಹೇಗೆ ತಾನೇ ಬೆಂಬಲ ಕೊಡುತ್ತಾರೆ. ಇದು ಆನಂದ್‌ ಸಿಂಗ್‌ ಅವರಿಗೆ ಬೇಡದ ವಿಷಯವಾಗಿತ್ತು’ ಎಂದು ಹೋರಾಟದ ಪರ ಇರುವ ಮುಖಂಡರೊಬ್ಬರು ತಿಳಿಸಿದರು.

‘ಈ ಹಿಂದೆ ಜಿಲ್ಲೆಯಲ್ಲಿ ಒಟ್ಟು ಏಳು ತಾಲ್ಲೂಕುಗಳಿದ್ದವು. ಈಗ ಅವುಗಳ ಸಂಖ್ಯೆ ಹತ್ತಕ್ಕೆ ಏರಿದೆ. ಜಿಲ್ಲೆಯ ಪಶ್ಚಿಮ ಭಾಗದ ತಾಲ್ಲೂಕುಗಳನ್ನು ಸೇರಿಸಿ ಹೊಸ ಜಿಲ್ಲೆ ಮಾಡಬೇಕೆಂಬ ಹೋರಾಟಕ್ಕೆ ಈ ಭಾಗದವರ ಸಹಮತವಿದೆ. ಆದರೆ, ಜಿಲ್ಲಾ ಕೇಂದ್ರದ ವಿಚಾರದಲ್ಲಿ ಎಲ್ಲರ ಸಹಮತ ಒಂದೇ ಇದ್ದಂತಿಲ್ಲ. ಹೊಸಪೇಟೆ ಜಿಲ್ಲಾ ಕೇಂದ್ರ ಮಾಡುವುದಕ್ಕೆ ಹೂವಿನಹಡಗಲಿ, ಹರಪನಹಳ್ಳಿ ಭಾಗದ ಜನರಿಗೆ ಇಷ್ಟವಿಲ್ಲ’ ಎಂದು ಜನಸಂಗ್ರಾಮ ಪರಿಷತ್ತಿನ ಮುಖಂಡ ಶಿವಕುಮಾರ ಮಾಳಗಿ ಹೇಳಿದರು.

‘ಪಶ್ಚಿಮ ಭಾಗದ ಎಲ್ಲ ತಾಲ್ಲೂಕುಗಳ ರಾಜಕೀಯ ಮುಖಂಡರು, ಹೋರಾಟಗಾರರು ಸಭೆ ಸೇರಬೇಕು. ಭೌಗೋಳಿಕವಾಗಿ ಯಾವ ತಾಲ್ಲೂಕು ಜಿಲ್ಲಾ ಕೇಂದ್ರವಾದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂಬುದನ್ನು ಚರ್ಚಿಸಿ, ತೀರ್ಮಾನಕ್ಕೆ ಬರಬೇಕು. ನಂತರ ಹೋರಾಟದ ರೂಪುರೇಷೆ ತಯಾರಿಸಿದರೆ ತಾರ್ಕಿಕ ಅಂತ್ಯ ಕಾಣಲು ಸಾಧ್ಯ. ವಿಜಯನಗರ ಕ್ಷೇತ್ರದವರಷ್ಟೇ ದನಿ ಎತ್ತಿದರೆ ಯಾವುದೇ ಪ್ರಗತಿ ಆಗುವುದು ಕಷ್ಟಸಾಧ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT