ಕತ್ತಲಲ್ಲಿ ಸರ್ಕಾರಿ ಆಸ್ಪತ್ರೆ!

7
ಕೇಬಲ್ ಸುಟ್ಟು ಹೋಗಿ ನಾಲ್ಕು ದಿನಗಳಾದರೂ ದುರಸ್ತಿ ಇಲ್ಲ; ರೋಗಿಗಳ ಪರದಾಟ

ಕತ್ತಲಲ್ಲಿ ಸರ್ಕಾರಿ ಆಸ್ಪತ್ರೆ!

Published:
Updated:
ಹೊಸಪೇಟೆಯ ಉಪವಿಭಾಗಮಟ್ಟದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆ–ಪ್ರಜಾವಾಣಿ ಚಿತ್ರ

ಹೊಸಪೇಟೆ: ಇಲ್ಲಿನ ಉಪವಿಭಾಗ ಮಟ್ಟದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಗೆ ವಿದ್ಯುತ್‌ ಪೂರೈಸುವ ಕೇಬಲ್‌ಗಳು ಸುಟ್ಟು ಹೋಗಿ ನಾಲ್ಕು ದಿನಗಳಾದರೂ ಅದನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗಿಲ್ಲ.

ಆಸ್ಪತ್ರೆ ಎದುರಿನ ಕಂಬಗಳಿಂದ ನೆಲದಡಿಯಿಂದ ಆಸ್ಪತ್ರೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಭಾನುವಾರ ಏಕಾಏಕಿ ಕೇಬಲ್‌ಗಳು ಸುಟ್ಟು ಹೋಗಿವೆ. ಮೂರು ದಿನಗಳಿಂದ ಜನರೇಟರ್‌ ಮೂಲಕ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ. ಆದರೆ, ಬುಧವಾರ ಜನರೇಟರ್‌ ಕೂಡ ಸುಟ್ಟು ಹೋಗಿದೆ. ಸುಟ್ಟು ಹೋಗಿರುವ ಕೇಬಲ್‌ಗಳನ್ನು ಬದಲಿಸಿ ಹೊಸದನ್ನು ಅಳವಡಿಸಿಲ್ಲ. ಜನರೇಟರ್‌ ಸುಟ್ಟು ಹೋದಾಗ ಬೇರೆ ವ್ಯವಸ್ಥೆ ಇರಲಿಲ್ಲ. ಇದರಿಂದಾಗಿ ಬುಧವಾರ ದಿನವಿಡಿ ಆಸ್ಪತ್ರೆ ಕತ್ತಲಲ್ಲಿ ಮುಳುಗಿತ್ತು. ಮಕ್ಕಳ ವಿಭಾಗ, ಬಾಣಂತಿಯರ ವಿಭಾಗ, ಸಾಮಾನ್ಯ ವಿಭಾಗದಲ್ಲಿನ ರೋಗಿಗಳು ಪರದಾಟ ನಡೆಸಿದರು. ಶಕೆಯಿಂದ ರೋಗಿಗಳು ಬಳಲಿ ಬೆಂಡಾದರು.

ಸಕಾಲಕ್ಕೆ ತುರ್ತು ಸೇವೆ ಕೂಡ ಸಿಗಲಿಲ್ಲ. ಇದರಿಂದಾಗಿ ಜನ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿದರು. ನಗರದ ಉಪವಿಭಾಗದ ಮಟ್ಟದ ಸರ್ಕಾರಿ ಆಸ್ಪತ್ರೆ ವ್ಯಾಪ್ತಿಗೆ ಸಂಡೂರು, ಕೂಡ್ಲಿಗಿ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಹಾಗೂ ಹೊಸಪೇಟೆ ತಾಲ್ಲೂಕಿನ ಗ್ರಾಮಗಳು ಬರುತ್ತವೆ. ಈ ಭಾಗದಲ್ಲಿ ಯಾವುದೇ ರೀತಿಯ ಅಪಘಾತಗಳು ಸಂಭವಿಸಿದರೆ ಜನ ಇಲ್ಲಿಗೆ ದೌಡಾಯಿಸುತ್ತಾರೆ.

ನಗರದಿಂದ ರಾಷ್ಟ್ರೀಯ ಹೆದ್ದಾರಿ 50, 63 ಹಾದು ಹೋಗಿವೆ. ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಹಗಲು–ರಾತ್ರಿ ಅದಿರು ತುಂಬಿದ ಲಾರಿಗಳು ಸಂಚರಿಸುವುದರಿಂದ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಅತಿ ಹೆಚ್ಚು ಹೆರಿಗೆಗಳು ಇಲ್ಲಿಯೇ ನಡೆಯುತ್ತವೆ. ಹೀಗಿದ್ದರೂ ತುರ್ತಾಗಿ ವಿದ್ಯುತ್‌ ಪೂರೈಸಲು ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಸಾರ್ವಜನಿಕರು.

‘ಕಳೆದ ನಾಲ್ಕು ದಿನಗಳಿಂದ ಆಸ್ಪತ್ರೆಯ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಶಕೆಯಿಂದ ರೋಗಿಗಳು ಪರದಾಡುತ್ತಿದ್ದಾರೆ. ಆಪರೇಷನ್‌ ಥಿಯೇಟರ್‌ಗೆ ಕರೆಂಟ್‌ ಇಲ್ಲ. ಬುಧವಾರ ಜನರೇಟರ್‌ ಕೆಟ್ಟು ಹೋಗಿದ್ದರಿಂದ ರೋಗಿಗಳು ಮೊಬೈಲ್‌ ಟಾರ್ಚ್‌ ಹಿಡಿದುಕೊಂಡು ಕುಳಿತಿದ್ದರು’ ಎಂದು ಆಸ್ಪತ್ರೆಗೆ ದಾಖಲಾಗಿರುವ ರೋಗಿಯ ಸಂಬಂಧಿ ವೆಂಕೋಬ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನು ಸ್ಥಳೀಯ ನಿವಾಸಿ. ಮೊದಲಿನಿಂದಲೂ ಈ ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುವುದನ್ನು ನೋಡುತ್ತ ಬಂದಿದ್ದೇನೆ. ಸಕಾಲಕ್ಕೆ ರೋಗಿಗಳಿಗೆ ಚಿಕಿತ್ಸೆ ಸಿಗುವುದಿಲ್ಲ. ಶಸ್ತ್ರ ಚಿಕಿತ್ಸೆ ವಿಭಾಗದಲ್ಲಿ ರೋಗಿಯನ್ನು ಹೊರತುಪಡಿಸಿ ಬೇರೆ ಯಾರಿಗೂ ಬಿಡಬಾರದು. ಹಾಗೆ ಮಾಡದ ಕಾರಣ ಪದೇ ಪದೇ ಸೋಂಕು ಹರಡುತ್ತದೆ. ಇದರಿಂದಾಗಿ ತಿಂಗಳಲ್ಲಿ ಎಂಟರಿಂದ ಹತ್ತು ದಿನ ಶಸ್ತ್ರ ಚಿಕಿತ್ಸೆ ವಿಭಾಗ ಮುಚ್ಚಲಾಗುತ್ತದೆ. ರಜೆಗಾಗಿ ಈ ರೀತಿ ಮಾಡುತ್ತಾರೆ ಅನಿಸುತ್ತದೆ’ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !