ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಎಂ. ಕಲಬುರ್ಗಿ ಕಾಲದ ಹಂಪಿ ವಿವಿ ಈಗಿಲ್ಲ ಎನ್ನುವರೇ ಹೆಚ್ಚು

ಆಡಳಿತ, ಅಕಾಡೆಮಿಕ್‌ ಚಟುವಟಿಕೆಗಳಿಗೆ ಮಾದರಿಯಾಗಿತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯ
Last Updated 15 ಡಿಸೆಂಬರ್ 2021, 11:26 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಸರ್ಕಾರದಿಂದ ಹಣ ನೀರಿನಂತೆ ತರಬೇಕು. ಆಡಳಿತದಲ್ಲಿ ಅದನ್ನು ತೀರ್ಥದಂತೆ ಖರ್ಚು ಮಾಡಬೇಕು’ ಎಂದು ಎಂ.ಎಂ. ಕಲಬುರ್ಗಿಯವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾಗ ಈ ಮಾತನ್ನು ಪದೇ ಪದೇ ಹೇಳುತ್ತಿದ್ದರಂತೆ. ಅಂದರೆ ಸರ್ಕಾರದ ಅನುದಾನವನ್ನು ಪ್ರಜ್ಞಾಪೂರ್ವಕವಾಗಿ ಬಳಸಬೇಕು. ಪ್ರತಿ ಪೈಸೆಯ ಲೆಕ್ಕ ಇಟ್ಟು ಪಾರದರ್ಶಕವಾಗಿ ಆಡಳಿತ ನಡೆಸುತ್ತಿದ್ದರು ಎಂದು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರು ಈಗಲೂ ನೆನಕೆ ಮಾಡಿಕೊಳ್ಳುತ್ತಾರೆ.

‘ಲಂಚ, ಕಮಿಷನ್‌, ಭ್ರಷ್ಟಾಚಾರದಂತಹ ಸಂಗತಿಗಳ ಮೂಲಕ ಸದ್ಯ ನಾಡಿನಾದ್ಯಂತ ಸದ್ದು ಮಾಡುತ್ತಿರುವ ಕನ್ನಡ ವಿಶ್ವವಿದ್ಯಾಲಯ, ಕಲಬುರ್ಗಿ ಅವರ ಕಾಲದಲ್ಲಿ ‘ಮಾದರಿ’ ವಿಶ್ವವಿದ್ಯಾಲಯವಾಗಿ ಗುರುತಿಸಿಕೊಂಡಿತ್ತು. ಚಂದ್ರಶೇಖರ ಕಂಬಾರ, ವಿವೇಕ ರೈ, ಕಲಬುರ್ಗಿ ಅಂತಹವರೆಲ್ಲ ಸೇರಿ ಕಟ್ಟಿದ ವಿಶ್ವವಿದ್ಯಾಲಯಕ್ಕೆ ಇಂದು ಈ ಪರಿಸ್ಥಿತಿ ಬರಬಾರದಿತ್ತು’ ಎಂದು ಅಲ್ಲಿನ ಪ್ರಾಧ್ಯಾಪಕರು ಮರುಕ ಪಡುತ್ತಾರೆ.

ಕಲಬುರ್ಗಿ ಅವರು ತಮ್ಮ ಸೇವಾ ಅವಧಿಯ ಕೊನೆಯ ದಿನ ಸರ್ಕಾರಿ ಕಾರು ಬಳಸುವುದರ ಬದಲು ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ತೆರಳಿದ್ದರು. ಕ್ಯಾಂಪಸ್‌ನಿಂದ ಹೊರಡುವುದಕ್ಕೂ ಮುನ್ನ ಅವರ ಎರಡು ಶೂಗಳನ್ನು ಕಳಚಿ, ಅವುಗಳನ್ನು ನೆಲಕ್ಕೆ ಕೊಡವಿ, ಇಲ್ಲಿನ ಮಣ್ಣು ಕೂಡ ನನ್ನೊಂದಿಗೆ ಬರಬಾರದು ಎಂದು ಹೇಳಿದ್ದರು. ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಬೇಕಿದ್ದರೆ ರೈಲಿನಲ್ಲಿ ನಾನ್‌–ಎ.ಸಿ. ಸ್ಲೀಪರ್‌ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ಎ.ಸಿ. ಕೋಚ್‌ನಲ್ಲಿ ಹೋದರೆ ಹೆಚ್ಚಿಗೆ ಹಣ ಹೋಗುತ್ತದೆ. ಅದನ್ನು ಉಳಿಸಿದರೆ ವಿ.ವಿ.ಯ ಕೆಲಸಕ್ಕೆ ಬಳಸಿಕೊಳ್ಳಬಹುದು ಎಂದು ಹೇಳುತ್ತಿದ್ದರು ಎಂದು ಅಂದಿನ ಸಂದರ್ಭ ನೆನೆದು ಪ್ರಾಧ್ಯಾಪಕರು ಭಾವುಕರಾಗುತ್ತಾರೆ.

‘ಕಲಬುರ್ಗಿಯವರು ವರ್ಷದಲ್ಲಿ ವೈಯಕ್ತಿಕ ಯೋಜನೆ, ಇಡೀ ವಿಭಾಗಕ್ಕೆ ಒಂದು ಯೋಜನೆ ಒಪ್ಪಿಸಿ, ಗಡುವು ಕೊಡುತ್ತಿದ್ದರು. ಪ್ರಾಧ್ಯಾಪಕರು ಕೊಟ್ಟ ಹಸ್ತಪ್ರತಿಯನ್ನು ಅವರೇ ತಿದ್ದುತ್ತಿದ್ದರು. ಡಿಟಿಪಿ ನಂತರ ರಾತ್ರಿ 2–3 ಗಂಟೆಯವರೆಗೆ ಅವರೇ ಪ್ರೂಫ್‌ ಕೂಡ ನೋಡುತ್ತಿದ್ದರು. ಕೆಲಸದ ಬಗ್ಗೆ ಅಷ್ಟೊಂದು ಬದ್ಧತೆ ಅವರಿಗಿತ್ತು’ ಎಂದು ನೆನಪು ಮಾಡಿಕೊಳ್ಳುತ್ತಾರೆ ನಿವೃತ್ತ ಪ್ರಾಧ್ಯಾಪಕ ಅಮರೇಶ ನುಗಡೋಣಿ.

‘ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲ ವಿಭಾಗಗಳಿಗೆ ಕಲಬುರ್ಗಿಯವರು ಭೇಟಿ ಕೊಟ್ಟು ಯೋಜನೆಯ ಪ್ರಗತಿ ಪರಿಶೀಲಿಸುತ್ತಿದ್ದರು. ಯಾವುದೇ ಕುಂಟು ನೆಪ ಕೇಳುತ್ತಿರಲಿಲ್ಲ. ಯಾರಾದರೂ ತಪ್ಪಾಗಿ ಬರೆದಿದ್ದರೆ ಅದನ್ನು ಸರಿಪಡಿಸುತ್ತಿದ್ದರು. ಬರವಣಿಗೆ ಗೊತ್ತಿರದಿದ್ದವರಿಗೂ ಬೆನ್ನು ಹತ್ತಿ ಬರೆಸುತ್ತಿದ್ದರು’ ಎಂದು ವಿವರಿಸಿದರು.

‘ಕುಲಪತಿಯಾದವರಿಗೆ ಕನಿಷ್ಠ ಕೆಲಸ ತೆಗೆದುಕೊಳ್ಳುವ ಕಲೆ ಗೊತ್ತಿರಬೇಕು. ಅದನ್ನು ಕಲಬುರ್ಗಿಯವರು ಚೆನ್ನಾಗಿ ಅರಿತಿದ್ದರು. ‘ತಿಂಗಳಿಗೆ ₹1 ಲಕ್ಷ ಸಂಬಳ ಬರುತ್ತದೆ. ವರ್ಷಕ್ಕೆ ಒಂದಾದರೂ ಪುಸ್ತಕ ಬರೆಯಬೇಕು’ ಎಂದು ಪ್ರಾಧ್ಯಾಪಕರಿಗೆ ತಾಕೀತು ಮಾಡುತ್ತಿದ್ದರು. ಅಕಾಡೆಮಿಕ್‌ ವಿಷಯಗಳನ್ನು ಬಿಟ್ಟರೆ ಬೇರೆ ವಿಚಾರಗಳ ಕುರಿತು ಮಾತಾಡುತ್ತಿರಲಿಲ್ಲ. ಹೀಗಾಗಿಯೇ ಅವರ ಕಾಲದಲ್ಲಿ ಪ್ರಸಾರಾಂಗದಿಂದ ಪ್ರಕಟವಾದ ಹೆಚ್ಚಿನ ಪುಸ್ತಕಗಳಿಗೆ ಪ್ರಶಸ್ತಿಗಳು ಬಂದಿವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT