ಶುಕ್ರವಾರ, ಜೂನ್ 25, 2021
21 °C

ಟೇಬಲ್ ಟೆನ್ನಿಸ್‍ನಲ್ಲಿ ‘ಪ್ರಸಿದ್ಧಿ’ 

ಸಿ.ಶಿವಾನಂದ Updated:

ಅಕ್ಷರ ಗಾತ್ರ : | |

Prajavani

ಹಗರಿಬೊಮ್ಮನಹಳ್ಳಿ: ಪಟ್ಟಣದ ‘ಪ್ರಸಿದ್ಧಿ’ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಟೇಬಲ್ ಟೆನ್ನಿಸ್‌ನಲ್ಲಿ ಉತ್ತಮ ಸಾಧನೆ ತೋರಿ ಶಾಲೆಗೆ ಕೀರ್ತಿ ತಂದಿದ್ದಾರೆ. 

ಈ ಶಾಲೆಯ ಮಕ್ಕಳು ಹಂತ ಹಂತವಾಗಿ ಸಾಧನೆಯ ಶಿಖರವೇರುತ್ತಿದ್ದಾರೆ. ನಾಲ್ಕು ವರ್ಷಗಳಿಂದ ವಲಯ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಜಯಗಳಿಸಿ ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆ ತೋರಿದ್ದಾರೆ. 

ಕ್ರೀಡೆಯೊಂದಿಗೆ ಓದಿನಲ್ಲೂ ಇವರು ಮುಂದಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸತತವಾಗಿ ಶೇಕಡ ನೂರಕ್ಕೆ ನೂರು ಅಂಕ ಪಡೆದು ಸಾಧನೆ ಮಾಡಿದ್ದಾರೆ.

ವಿವಿಧ ಕ್ರೀಡೆಗಳಲ್ಲಿ ಪರಿಣತಿ ಪಡೆದ ಶಿಕ್ಷಕರಾದ ವೀರಭದ್ರಯ್ಯ, ರಾಘವೇಂದ್ರರಾವ್, ತೇಜಸ್ವಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಸಿ.ಎನ್.ದೊಡ್ಡಬಸವರಾಜ, ಚನ್ನಪ್ಪ ಅವರು ಟೇಬಲ್ ಟೆನ್ನಿಸ್ ಕ್ರೀಡೆಗೆ ಹೆಚ್ಚು ಆದ್ಯತೆ ನೀಡಿದರ ಫಲವಾಗಿ ವಿದ್ಯಾರ್ಥಿಗಳು ಆಟೋಟದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ.

ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಬಿ.ಜೆ.ಪರಮೇಶ್, ಎಸ್.ಆರ್.ಸಂತೋಷ್, ಎಸ್.ರಿಹಾನ್, ಎಚ್.ನಿಹಾಲ್, ಕೆ.ಎಂ.ಅಭಿಲಾಷ್, ಈಚೆಗೆ ಬೆಂಗಳೂರಿನಲ್ಲಿ ನಡೆದ 2019-20ನೇ ಸಾಲಿನ ಕ್ರೀಡಾಕೂಟದಲ್ಲಿ ಒಳ್ಳೆಯ ಪ್ರದರ್ಶನ ನೀಡಿದ್ದಾರೆ. 2018ರಲ್ಲಿ ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು.

‘ಈ ಶಾಲೆಯ ಬಾಲಕರು ಟೇಬಲ್ ಟೆನ್ನಿಸ್ ಆಟದಲ್ಲಿನ ಪ್ರಮುಖ ತಂತ್ರಗಳಾದ ಸ್ಮ್ಯಾಸ್‌, ಸ್ಪಿನ್ ಮತ್ತು ಚಾಪ್ ಅನ್ನು ಚಾಕಚಾಕ್ಯತೆಯಿಂದ ಬಳಸುತ್ತಾರೆ. ಅದರ ಮೂಲಕ ಎದುರಾಳಿಗಳನ್ನು ಗೊಂದಲದಲ್ಲಿ ಸಿಲುಕಿಸಿ ಸೋಲಿಸುವ ನೈಪುಣ್ಯ ಹೊಂದಿದ್ದಾರೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಶಾಲೆಯ ಶಿಕ್ಷಕರು. 

‘ತರಗತಿಗಳಿಗೆ ತೊಂದರೆ ಆಗದಂತೆ ಬೆಳಿಗ್ಗೆ ಆರರಿಂದ ಎಂಟರವರೆಗೂ ಮತ್ತು ಸಂಜೆ 4.30ರಿಂದ ಆರು ಗಂಟೆಯ ವರೆಗೆ ಕ್ರೀಡಾ ಚಟುವಟಿಕೆಗಳಿಗೆ ಸಮಯ ಮೀಸಲಿಡಲಾಗಿದೆ. ಬಿಡುವಿನ ವೇಳೆಯಲ್ಲಿಯೂ ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ನಿರ್ದಿಷ್ಟ ಕ್ರೀಡೆಗಳಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ ತರಬೇತಿ ನೀಡಲಾಗುತ್ತದೆ‘ ಎಂದು ಶಾಲೆಯ ಆಡಳಿತಾಧಿಕಾರಿ ಜಿ.ಲಿಂಗು ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು