ಗುರುವಾರ , ಮಾರ್ಚ್ 23, 2023
28 °C
ಕೊರೊನಾ ಪರಿಣಾಮದಿಂದ ಮನೆಯೇ ಮಸೀದಿ; ಸಾಮೂಹಿಕ ಪ್ರಾರ್ಥನೆ ಸಂಭ್ರಮವಿಲ್ಲ

ಬಳ್ಳಾರಿ | ಮನೆಯಲ್ಲೇ ‘ಬಡೀ ರಾತ್‌ ನಮಾಜ್‌’

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ಪ್ರತಿ ವರ್ಷವೂ ಮಸೀದಿಗಳಲ್ಲಿ ವಿಶೇಷ ಜಾಗರಣೆ ಸಂಭ್ರಮಕ್ಕೆ ಸಾಕ್ಷಿಯಾಗುವ ರಂಜಾನ್‌ ಮಾಸದ 26ನೇ ರಾತ್ರಿಯ ‘ಬಡೀ ರಾತ್‌ ನಮಾಜ್‌’ ಈ ಬಾರಿ ಮುಸ್ಲಿಮರ ಮನೆಯ ಅಂಗಳದಲ್ಲೇ ಬುಧವಾರ ರಾತ್ರಿ ಕಳೆಗಟ್ಟಿತು. ಅವರೆಲ್ಲರೂ ಮನೆಯ ಆಚೆಗಿನ ಮಸೀದಿಗಳನ್ನು ಮನೆಯ ಒಳಕ್ಕೇ ಬರ ಮಾಡಿಕೊಂಡಿದ್ದರು. ಮನೆ ಗಳೇ ಮಸೀದಿಗಳಾಗಿದ್ದವು.

ಇದು ಕೊರೊನಾ ಲಾಕ್‌ಡೌನ್‌ ಪರಿಣಾಮ.

ವ್ರತದ ಮೊದಲ ದಿನದಿಂದ ಆರಂಭವಾಗುವ ಕುರಾನ್‌ ಪಠಣವು 26ನೇ ದಿನಕ್ಕೆ ಮುಗಿಯುತ್ತದೆ. ಈ ಮಕ್ತಾಯಕ್ಕೆ ಮಸೀದಿಗಳು ವಿಶೇಷ ಬಗೆಯಲ್ಲಿ ಸಜ್ಜಾಗುತ್ತವೆ. ಮುಸ್ಲಿಮರು ಮಹಮ್ಮದ್‌ ಪೈಗಂಬರರ ಕೃಪೆ, ಆಶೀರ್ವಾದಕ್ಕಾಗಿ ಸಾಮೂಹಿಕವಾಗಿ ಸಂಭ್ರಮ, ಶ್ರದ್ಧೆಗಳಿಂದ ಕುರಾನ್ ಪಠಣವನ್ನು ಮುಕ್ತಾಯ ಮಾಡುವ ಪವಿತ್ರ ರಾತ್ರಿ ಇದು.

ಆದರೆ ಈ ಬಾರಿ ಇಂಥ ಸಾಮೂಹಿಕ ಸಂಭ್ರಮಕ್ಕೆ ಅವಕಾಶವಿಲ್ಲದ ರೀತಿಯಲ್ಲಿ ಮುಸ್ಲಿಮರು ತಮ್ಮ ಮನೆಮಂದಿಯ ಜೊತೆಗಷ್ಟೇ ಇಡೀ ರಾತ್ರಿ ಕುರಾನ್‌ ಪಠಣ ಮಾಡಿ ಸಮಾಧಾನಪಟ್ಟುಕೊಂಡರು. ಖಾಲಿ ಮಸೀದಿಗಳು ವ್ರತನಿಷ್ಠ ಮುಸ್ಲಿಮರ ಮನೆಗಳತ್ತ ಮುಖ ಮಾಡಿದ್ದವು!

ರಂಜಾನ್‌ ಮಾಸದ ಕೊನೆಯ ಹತ್ತು ದಿನಗಳ ಐದು ರಾತ್ರಿಗಳಲ್ಲಿ (21, 23, 25, 27 ಹಾಗೂ 29ನೇ ರಾತ್ರಿ) ಮುಸ್ಲಿಮರು ದಿನಬಿಟ್ಟು ದಿನದಂತೆ ಜಾಗರಣೆ ಮಾಡುತ್ತಾರೆ. ಆ ರಾತ್ರಿಗಳ ಪೈಕಿ 26ನೇ ರಾತ್ರಿಯೇ ‘ಷಬ್‌–ಎ–ಖದ್ರ್’. ಬುಧವಾರ ರಾತ್ರಿ ಈ ಆಚರಣೆ ಸದ್ದಿಲ್ಲದೇ ಮುಕ್ತಾಯವಾಯಿತು.

‘ಈ ರಾತ್ರಿಯ ಪ್ರಾರ್ಥನೆ ಒಂದು ಸಾವಿರ ಮಾಸಗಳ ಪ್ರಾರ್ಥನೆಗೆ ಸಮವೆಂದು ಕುರಾನ್‌ ಹೇಳುತ್ತದೆ. ಹೀಗಾಗಿ, ನಾವು ಮನೆಯಲ್ಲೇ ಪ್ರಾರ್ಥಿಸಿ ಆಚರಣೆಯಲ್ಲಿ ಪಾಲ್ಗೊಂಡೆವು’ ಎಂದು ಟೀಚರ್ಸ್ ಕಾಲೊನಿ ನಿವಾಸಿ ಟಿಪ್ಪು ಸುಲ್ತಾನ್‌ ಹೇಳಿದರು.

ಇದು ‘ಬಡೀ ರಾತ್’‌: ತಿಂಗಳಿಡೀ ಪ್ರತಿದಿನವೂ ಐದು ಬಾರಿ ನಿಯಮಿತವಾಗಿ ನಮಾಜ್ ಮಾಡುವ ಮುಸ್ಲಿಮರು, 26ರ ರಾತ್ರಿ ಮಾತ್ರ ಬೆಳಗಿನ ಜಾವದರವೆಗೂ ಜಾಗರಣೆ ಮಾಡುತ್ತಾರೆ. ಸಾಮಾನ್ಯವಾಗಿ ದಿನದ ಐದನೇ ಮತ್ತು ಕೊನೇ ನಮಾಜ್ ರಾತ್ರಿ 10 ಅಥವಾ 11 ಗಂಟೆಗೆ ಮುಗಿಯುತ್ತದೆ. ಆದರೆ, ‘ಬಡೀರಾತ್‌ ನಮಾಜ್‌’ ರಾತ್ರಿ 10ರಿಂದ ಮಾರನೇ ಬೆಳಗಿನ ಜಾವ 3–4 ಗಂಟೆಯವರೆಗೂ ನಿರಂತರವಾಗಿ ನಡೆಯುತ್ತದೆ. ಇದು ಸುದೀರ್ಘ ಪ್ರಾರ್ಥನೆಯ ರಾತ್ರಿ. ಸುದೀರ್ಘ ಉಪವಾಸದ ರಾತ್ರಿ.

‘ನಿರಂತರವಾಗಿ 2 ಗಂಟೆ ಕಾಲ ನಡೆಯುವ ತಾಕ್‌ರಾತ್‌ ನಮಾಜ್, ಒಂದೂವರೆ ಗಂಟೆ ಕಾಲದ ‘ತರಾವೀಹ್, ಅರ್ಧ ಗಂಟೆ ಷಬ್–ಎ–ಖದ್ರ್ ನಮಾಜ್‌ನಲ್ಲಿ ನಾವು ನಮ್ಮ ದೇವರೊಂದಿಗೆ ತಲ್ಲೀನರಾಗುತ್ತೇವೆ. ಆದರೆ ಈ ಬಾರಿ ಮಸೀದಿಗಳಲ್ಲಿ ಇರುವಂತೆ ಅಲ್ಲಾಹುವಿನ ಕುರಿತು ಖಾಜಿಗಳ ವಿಶೇಷ ವಿವರಣೆಗಳಿಲ್ಲದಿರುವುದೇ ವಿಷಾದ’ ಎಂದು ಸುಲ್ತಾನ್ ಹೇಳಿದರು.

‘26ನೇ ರಾತ್ರಿ ನಾವು ಮನೆಯವರೆಲ್ಲರೂ ನಿದ್ದೆಯನ್ನು ಮರೆಯುತ್ತೇವೆ. ಅದು ನಮ್ಮ ಪಾಲಿಗೆ ಅತ್ಯಂತ ಪವಿತ್ರ ರಾತ್ರಿ’ ಎಂದು ನಗರದ ಜಯನಗರದ ನಿವಾಸಿ ಸೈಯದ್‌ ಅಬ್ದುಲ್ ಸಮಿ ಧನ್ಯತೆಯಿಂದ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು