ಭಾನುವಾರ, ಡಿಸೆಂಬರ್ 15, 2019
17 °C
ಕಾಲೇಜು ವಿದ್ಯಾರ್ಥಿನಿಯರ ಜತೆ ನಟಿ ತಾರಾ ಮಳೆಯಲ್ಲೇ ಪ್ರತಿಭಟನೆ

ಪಶುವೈದ್ಯೆ ಅತ್ಯಾಚಾರ, ಕೊಲೆ ವಿರುದ್ಧ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಪಶುವೈದ್ಯೆ ಮೇಲಿನ ಅತ್ಯಾಚಾರ, ಕೊಲೆಗೆ ಮಂಗಳವಾರ ನಗರದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟುಡೆಂಟ್ಸ್‌ ಆರ್ಗನೈಜೇಶನ್‌, ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಶನ್‌ ಹಾಗೂ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ಮಳೆಯಲ್ಲೇ ಬೀದಿಗಿಳಿದು ಹೋರಾಟ ನಡೆಸಿದರು.

‘ಹಸುವಿಗೆ ರಕ್ಷಣೆ ಇದೆ, ಹಸುಳೆಗೆ (ಮಗುವಿಗೆ) ರಕ್ಷಣೆ ಯಾವಾಗ?’, ‘ಸರ್ಕಾರಗಳ ಬೇಜವಾಬ್ದಾರಿತನಕ್ಕೆ ಧಿಕ್ಕಾರ’, ‘ಅಶ್ಲೀಲ ಸಿನಿಮಾ ಸಾಹಿತ್ಯ ನಿಷೇಧಿಸಿ’ ಎಂಬ ಘೋಷಣೆಗಳೊಂದಿಗೆ ಸುರಿಯುವ ಮಳೆಯಲ್ಲೇ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.

ಸಾಂಸ್ಕೃತಿಕ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಎ. ಶಾಂತಾ, ‘ಇಂಥಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಸರ್ಕಾರದ ನಿರ್ಲಕ್ಷ್ಯಕ್ಕೆ ಇದು ಸಾಕ್ಷಿ. ನಿರ್ಭಯಾ ಅತ್ಯಾಚಾರದ ನಂತರ ನ್ಯಾಯಮೂರ್ತಿ ವರ್ಮಾ ಆಯೋಗ ಮಾಡಿದ ಶಿಫಾರಸು ಇದುವರೆಗೆ ಜಾರಿಗೊಳಿಸಿಲ್ಲ. ಇದರಿಂದಾಗಿ ಅಪರಾಧಿಗಳಿಗೆ ಶಿಕ್ಷೆಯಾಗುತ್ತಿಲ್ಲ’ ಎಂದರು.

ಎ.ಐ.ಡಿ.ವೈ.ಒ. ಜಿಲ್ಲಾ ಸಂಚಾಲಕ ಎನ್‌. ಜಗದೀಶ್‌, ‘ಮಹಿಳೆಯರಿಗೆ ದೇಶದಲ್ಲಿ ಭದ್ರತೆ ಇಲ್ಲದಂತಾಗಿದೆ. ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಶಿಕ್ಷೆಯಾಗುತ್ತಿಲ್ಲ. ಇದು ಬದಲಾಗಬೇಕು. ಮಹಿಳೆಯರು ಗೌರವದಿಂದ ಬದುಕುವಂತಾಗಬೇಕು’ ಎಂದು ಹೇಳಿದರು.

ಎ.ಐ.ಡಿ.ಎಸ್‌.ಒ. ಜಿಲ್ಲಾಧ್ಯಕ್ಷ ಜಿ. ಸುರೇಶ್‌, ಎ.ಐ.ಡಿ.ವೈ.ಒ. ಜಿಲ್ಲಾ ಕಾರ್ಯದರ್ಶಿ ಎಚ್‌. ಯರ್ರಿಸ್ವಾಮಿ, ಮುಖಂಡರಾದ ದಿವ್ಯಾ, ಅಭಿಷೇಕ್ ಕಾಳೆ, ಪಂಪಾಪತಿ ಕೋಳೂರ್‌, ರವಿ ದರೋಜಿ, ಹುಲುಗಪ್ಪ, ಏಸುದಾಸ್, ರಾಜು, ಆರ್.ನಾಗರಾಜ್, ಎ.ಮಲ್ಲಿಕಾರ್ಜುನ್, ಎಚ್‌. ಹುಲುಗಪ್ಪ ಇದ್ದರು.

ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದ ನಟಿ ತಾರಾ ಅನುರಾಧಾ ಕೂಡ ಕೆಲಸಮಯ ಬಿಡುವು ಮಾಡಿಕೊಂಡು ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿಯರೊಂದಿಗೆ ಹೆಜ್ಜೆ ಹಾಕಿದರು. ನಂತರ ತಹಶೀಲ್ದಾರ್‌ ಡಿ.ಜೆ. ಹೆಗಡೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ಸಾಮಾಜಿಕ ಜವಾಬ್ದಾರಿ ಹೊಂದಿರುವ ಪ್ರತಿಯೊಬ್ಬರೂ ಈ ಘಟನೆ ವಿರುದ್ಧ ಧ್ವನಿ ಎತ್ತಬೇಕು. ಭಾರತದ ಸಂಸ್ಕೃತಿಗೆ ಕಳಂಕ ತರುವಂಥಹ ಘಟನೆ ಇದು. ಪ್ರಿಯಾಂಕಾ ಅವರಿಗೆ ಒದಗಿದ ಸ್ಥಿತಿ ಬೇರೆ ಯಾವ ಹೆಣ್ಣು ಮಕ್ಕಳಿಗೂ ಬರಬಾರದು. ಈ ಕೃತ್ಯ ಎಸಗಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ತಾರಾ ಒತ್ತಾಯಿಸಿದರು.

ಕಾಲೇಜಿನ ಪ್ರಾಚಾರ್ಯ ಎಸ್‌.ಎಂ. ಶಶಿಧರ್‌, ಪ್ರಾಧ್ಯಾಪಕರಾದ ರವಿಕುಮಾರ್,ಪಾರ್ವತಿ ಕಡ್ಲಿ, ಶಾಹೀದ್‌ ಬಾನು, ಸಿದ್ದಲಿಂಗೇಶ್ವರ, ಉದಯಶಂಕರ್, ಬಿ.ಎಸ್. ಜೀವಿತಾ, ನವೀನ್, ವಿದ್ಯಾರ್ಥಿ ಮುಖಂಡರಾದ ಮಂಜಿರ ರೆಡ್ಡಿ, ವಿಕ್ರಂ, ಮಮ್ತಾಜ್, ನಾಸಿರ್ ಹುಸೇನ್, ತುಳಸಿ ಇದ್ದರು.

ಪ್ರತಿಕ್ರಿಯಿಸಿ (+)