ಭಾನುವಾರ, ಆಗಸ್ಟ್ 18, 2019
23 °C

’ಶೇಷಾದ್ರಿ ಹೋರಾಟಗಾರ, ಮೇಧಾವಿ‘

Published:
Updated:
Prajavani

ಹೊಸಪೇಟೆ: ’ಬಿ. ಶೇಷಾದ್ರಿ ಅವರು ಗೋಕಾಕ್‌ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅಭಿವೃದ್ಧಿ, ಶಿಕ್ಷಣ, ಪ್ರಜಾಪ್ರಭುತ್ವ ಕುರಿತಂತೆ ಸಾಕಷ್ಟು ಆಳ ಅಧ್ಯಯನ ನಡೆಸಿ, ಚರ್ಚೆಗಳಲ್ಲಿ ಪಾಲ್ಗೊಂಡಿದ್ದ ಮೇಧಾವಿ‘ ಎಂದು ನಿವೃತ್ತ ಪ್ರಾಧ್ಯಾಪಕ ಈರೇಶಿ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗ ಮತ್ತು ಶೇಷಾದ್ರಿ ಅಭಿನಂದನಾ ಸಮಿತಿ ಸಹಭಾಗಿತ್ವದಲ್ಲಿ ಶುಕ್ರವಾರ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಬಿ. ಶೇಷಾದ್ರಿ ಒಂದು ನೆನಪು‘ ಕಾರ್ಯಕ್ರಮದಲ್ಲಿ ಮಾತನಾಡಿದರು.

’ಶೇಷಾದ್ರಿ ಅವರು ತಮ್ಮ 40 ವರ್ಷದ ಸಂಶೋಧನಾ ಚಿಂತನೆಯಲ್ಲಿ ಆರ್ಥಿಕ ಅಸಮಾನತೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದರು. ಶಿಕ್ಷಣದ ಬಗ್ಗೆ ಅವರ ಚಿಂತನೆಗಳು ತುಂಬಾ ವೈಚಾರಿಕತೆಯಿಂದ ಕೂಡಿವೆ‘ ಎಂದರು.

ನಿವೃತ್ತ ಮುಖ್ಯ ಯೋಜನಾಧಿಕಾರಿ ವೀರ ಶಿವಶಂಕರರೆಡ್ಡಿ, ’ಒಂದು ಸಂಸ್ಥೆ, ಒಂದು ರಾಜ್ಯ ಅಥವಾ ಒಂದು ದೇಶದ ಅಭಿವೃದ್ಧಿ ಅಥವಾ ಯಶಸ್ಸು ಆ ಸಂಸ್ಥೆಯ, ರಾಜ್ಯದ, ದೇಶದ ಸದಸ್ಯರನ್ನು ಅವಲಂಬಿಸಿರುತ್ತದೆ. ಅಭಿವೃದ್ಧಿ ವಿಷಯದಲ್ಲಿ ಯಾವುದೂ ಕೇಂದ್ರಿಕೃತವಾಗಿರಬಾರದು. ಎಲ್ಲವೂ ವಿಕೇಂದ್ರಿಕೃತವಾಗಬೇಕು. ಜನರ ಸಾಮರ್ಥ್ಯ, ನಿರ್ಮಾಣವು ಪ್ರಮುಖವಾಗಿ ಸ್ವಯಂ ಪಾಲ್ಗೊಳ್ಳುವ ಮೂಲಕ ಹಿಡಿತ ಸಾಧಿಸುವುದು. ತರಬೇತಿ, ಕೌಶಲ, ಮನೋವೃತ್ತಿ ಅಂಶಗಳನ್ನು ಅವಲಂಬಿಸಿದೆ’ ಎಂದು ಹೇಳಿದರು.

ಕುಲಪತಿ ಸ.ಚಿ.ರಮೇಶ, ’’ಶೇಷಾದ್ರಿ ಅವರ ಅಭಿವೃದ್ಧಿ, ಶಿಕ್ಷಣ, ಪ್ರಜಾಪ್ರಭುತ್ವ ಕುರಿತ ಅವರ ಚಿಂತನೆಗಳು ಬಹಳ ವೈಜ್ಞಾನಿಕ, ದೂರದರ್ಶಿತ್ವ ಹೊಂದಿದ್ದವು. ಈ ನಿಟ್ಟಿನಲ್ಲಿ ಅವರ ಚಿಂತನೆಗಳು ಎಲ್ಲ ಕಾಲಕ್ಕೂ ಅಮರ’ ಎಂದರು.

ಸಮಿತಿಯ ಕಾರ್ಯದರ್ಶಿ ಟಿ.ಜಿ. ವಿಠ್ಠಲ್, ವಿಭಾಗದ ಮುಖ್ಯಸ್ಥ ಜನಾರ್ದನ, ಪ್ರಾಧ್ಯಾಪಕರಾದ ಗೀತಮ್ಮ, ಎಚ್.ಡಿ. ಪ್ರಶಾಂತ್ ಇದ್ದರು.

Post Comments (+)