ಮಂಗಳವಾರ, ಅಕ್ಟೋಬರ್ 15, 2019
25 °C
ವನ್ಯಜೀವಿ ಸಪ್ತಾಹದ ವಿಶೇಷ

ಹೊಸಪೇಟೆ: ಬರಲಿದೆ ಸಿಂಹ ತಳಿ ಸಂವರ್ಧನೆ ಕೇಂದ್ರ

Published:
Updated:
Prajavani

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಬಿಳಿಕಲ್‌ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುವ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಸಿಂಹ ತಳಿ ಸಂವರ್ಧನೆ ಕೇಂದ್ರ ಆರಂಭಿಸಲು ಯೋಜನೆ ರೂಪಿಸಲಾಗಿದೆ.

ದೇಶದಲ್ಲಿ ಗುಜರಾತ್‌ನ ಗಿರ್‌ ಅರಣ್ಯಧಾಮದಲ್ಲಿ ಅತಿ ಹೆಚ್ಚು ಸಿಂಹಗಳಿವೆ. ಸಿಂಹಗಳ ವಾಸಕ್ಕೆ ಯೋಗ್ಯ ಸ್ಥಳ ಅದಾಗಿರುವುದರಿಂದ ವರ್ಷದಿಂದ ವರ್ಷಕ್ಕೆ ಅಲ್ಲಿ ಗಣನೀಯವಾಗಿ ಅವುಗಳ ಸಂಖ್ಯೆ ಹೆಚ್ಚುತ್ತಿದೆ. ಅದೇ ರೀತಿಯ ವಾತಾವರಣ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಇರುವುದರಿಂದ ಅವುಗಳ ತಳಿ ಸಂವರ್ಧನೆಗೆ ಯೋಜನೆ ಹಾಕಿಕೊಳ್ಳಲಾಗಿದೆ.

ಸಫಾರಿ ಉದ್ದೇಶಕ್ಕಾಗಿ ಈಗಾಗಲೇ ನಾಲ್ಕು ಸಿಂಹಗಳನ್ನು ಉದ್ಯಾನಕ್ಕೆ ತರಲಾಗಿದೆ. ಕೇಸರಿ, ಧನಂಜಯ ಹಾಗೂ ಪ್ರೇಮಾ, ರಾಧಾ ಹೆಸರಿನ ತಲಾ ಎರಡು ಗಂಡು, ಹೆಣ್ಣು ಸಿಂಹಗಳು ಉದ್ಯಾನದಲ್ಲಿದ್ದು, ಅವುಗಳು ಸಂಪೂರ್ಣವಾಗಿ ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡಿವೆ. ಸ್ವಚ್ಛಂದವಾಗಿ ಉದ್ಯಾನದ ಪರಿಸರದಲ್ಲಿ ಓಡಾಡಿಕೊಂಡಿವೆ.

‘ಗುಜರಾತ್‌ನ ಗಿರ್‌ನಲ್ಲಿ 40ರಿಂದ 45 ಡಿಗ್ರಿ ಸೆಲ್ಸಿಯಸ್‌ ವರೆಗೆ ಬಿಸಿಲು ಇರುತ್ತದೆ. ಇಲ್ಲೂ 38ರಿಂದ 42 ಡಿಗ್ರಿ ಸೆಲ್ಸಿಯಸ್‌ ವರೆಗೆ ಬಿಸಿಲು ಇರುತ್ತದೆ. ಕುರುಚಲು ಕಾಡು, ಬೆಟ್ಟ ಗುಡ್ಡ ಸಿಂಹಗಳ ವಾಸಕ್ಕೆ ಹೇಳಿಮಾಡಿಸಿದ ಸ್ಥಳ. ಅವುಗಳ ಸಂತಾನ ವೃದ್ಧಿಗೆ ಇದು ಪೂರಕವಾದ ಸ್ಥಳ. ಹಾಗಾಗಿ ತಳಿ ಸಂವರ್ಧನೆ ಕೇಂದ್ರ ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ’ ಎಂದು ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್‌ ವೃಶಿಣಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ವನ್ಯಜೀವಿ ಚಿಕಿತ್ಸಾ ಕೇಂದ್ರ: ಉದ್ಯಾನದಲ್ಲಿ ವನ್ಯಜೀವಿಗಳ ಚಿಕಿತ್ಸಾ ಕೇಂದ್ರ ನಿರ್ಮಿಸಲಾಗುತ್ತಿದ್ದು, ಕೊನೆಯ ಹಂತದ ಕೆಲಸ ಪ್ರಗತಿಯಲ್ಲಿದೆ. ಉತ್ತರ ಕರ್ನಾಟಕದ ಮೊದಲ ಚಿಕಿತ್ಸಾ ಕೇಂದ್ರ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ.

‘ಉತ್ತರ ಕರ್ನಾಟಕದ ಹಲವು ಕಡೆಗಳಲ್ಲಿ ಪ್ರಾಣಿ ಸಂಗ್ರಹಾಲಯಗಳಿವೆ. ಅಲ್ಲಿ ಪ್ರಾಣಿಗಳಿಗೆ ಯಾವುದೇ ರೀತಿಯ ರೋಗ ರುಜಿನ ಬಂದರೆ, ಪ್ರಾಣಿಗಳು ಪರಸ್ಪರ ಜಗಳವಾಡಿಕೊಂಡು ಗಾಯ ಮಾಡಿಕೊಂಡರೆ ಅವುಗಳಿಗೆ ಇಲ್ಲಿ ಚಿಕಿತ್ಸೆ ನೀಡಬಹುದಾಗಿದೆ’ ಎಂದು ಸೋನಲ್‌ ವಿವರಿಸಿದರು.

‘ಒಂದೆರಡು ತಿಂಗಳಲ್ಲಿ ಕೇಂದ್ರದ ಕೆಲಸ ಪೂರ್ಣಗೊಳ್ಳಲಿದೆ. ಅದಾದ ಬಳಿಕ ವನ್ಯಜೀವಿಗಳಿಗೆ ಸಂಬಂಧಿಸಿದ ತಜ್ಞ ವೈದ್ಯರು, ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಉದ್ಯಾನದಲ್ಲಿ ಹುಲಿ, ಸಿಂಹ, ಕರಡಿ, ಚಿರತೆ, ಮೊಸಳೆ, ಜಿಂಕೆ ಸೇರಿದಂತೆ ಇತರೆ ಪ್ರಾಣಿಗಳು ಇರುವುದರಿಂದ ಅವುಗಳ ಆರೈಕೆಗೂ ಇದು ನೆರವಾಗಲಿದೆ. ಪ್ರಾಣಿಗಳಿಗೆ ಯಾವುದಾದರೂ ರೋಗ, ಗಾಯಗೊಂಡರೆ ತಕ್ಷಣವೇ ಸ್ಥಳೀಯವಾಗಿ ಚಿಕಿತ್ಸೆ ಕೊಡಬಹುದು. ಬಹಳ ದೂರದೃಷ್ಟಿ ಇಟ್ಟುಕೊಂಡು ಸರ್ಕಾರ ಈ ಕೇಂದ್ರ ಆರಂಭಿಸುತ್ತಿದೆ’ ಎಂದು ಹೇಳಿದರು.

ಶೀಘ್ರ ಸೇರಲಿದೆ ಬಿಳಿ ಹುಲಿ: ‘ಉದ್ಯಾನಕ್ಕೆ ಬಿಳಿ ಹುಲಿ ತರಲು ಉದ್ದೇಶಿಸಲಾಗಿದ್ದು, ಈ ಕುರಿತು ಮೃಗಾಲಯ ಪ್ರಾಧಿಕಾರಕ್ಕೆ ಪ್ರಸ್ತಾವ ಕಳುಹಿಸಿಕೊಡಲಾಗಿದೆ. ಹಸಿರು ನಿಶಾನೆ ಸಿಕ್ಕ ನಂತರ ಯಾವುದೇ ಕ್ಷಣದಲ್ಲಿ ಬಿಳಿ ಹುಲಿ ಇಲ್ಲಿಗೆ ಬರಬಹುದು’ ಎಂದು ಸೋನಲ್‌ ವೃಶಿಣಿ ತಿಳಿಸಿದರು.

‘ವಾಯುಪುತ್ರ, ಪೃಥ್ವಿ, ಸಿಂಧೂ, ರಮ್ಯಾ ಹೆಸರಿನ ತಲಾ ಎರಡು ಗಂಡು ಮತ್ತು ಹೆಣ್ಣು ಹುಲಿಗಳು ಉದ್ಯಾನದಲ್ಲಿವೆ. ಚಾಮುಂಡಿ ಹೆಸರಿನ ಹುಲಿಗೆ ಚಿಕಿತ್ಸೆಗಾಗಿ ಬನ್ನೇರುಘಟ್ಟಕ್ಕೆ ಕಳುಹಿಸಲಾಗಿದೆ. ಚಿಕಿತ್ಸೆ ಪೂರ್ಣಗೊಂಡ ಬಳಿಕ ಅದು ಸಹ ಬರಲಿದೆ. ಬರುವ ದಿನಗಳಲ್ಲಿ ಇನ್ನೆರಡು ಹುಲಿ, ಸಿಂಹಗಳಿಗೆ ಪ್ರಸ್ತಾವ ಸಲ್ಲಿಸುವ ಯೋಚನೆಯೂ ಇದೆ’ ಎಂದು ವಿವರಿಸಿದರು.

**
ವಾಜಪೇಯಿ ಉದ್ಯಾನ ಸಫಾರಿ, ಪ್ರಾಣಿಗಳ ವೀಕ್ಷಣೆಗೆ ಸೀಮಿತವಾಗಿಲ್ಲ. ಅವುಗಳ ಸಂರಕ್ಷಣೆ, ಪೋಷಣೆ ಮಾಡಲಾಗುತ್ತಿದೆ. ವನ್ಯಜೀವಿಗಳ ಮಹತ್ವ ಸಾರಲಾಗುತ್ತಿದೆ.
–ಸೋನಲ್‌ ವೃಶಿಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ

Post Comments (+)