ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮೆಗತಿ ಕಾಮಗಾರಿಗೆ ನೆಮ್ಮದಿ ಹಾಳು

ದೂಳಿನಿಂದ ಜನ ಕಂಗಾಲು; ವ್ಯಾಪಾರ ವಹಿವಾಟು ಇಲ್ಲದೆ ಸಮಸ್ಯೆ
Last Updated 7 ಜನವರಿ 2019, 6:30 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ಕೇಂದ್ರ ಬಸ್‌ ನಿಲ್ದಾಣದ ಎದುರಿನ ರಸ್ತೆ ಅಭಿವೃದ್ಧಿ, ಒಳಚರಂಡಿ ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿರುವುದರಿಂದ ಸಾರ್ವಜನಿಕರ ನೆಮ್ಮದಿ ಹಾಳಾಗಿದೆ.

ನಗರಸಭೆಯುನಾಲ್ಕು ತಿಂಗಳ ಹಿಂದೆ ರಸ್ತೆ, ಒಳಚರಂಡಿ ಕಾಮಗಾರಿ ಕೈಗೆತ್ತಿಕೊಂಡಿತ್ತು. ಅದಕ್ಕಾಗಿ ರಸ್ತೆಯ ಎರಡೂ ಬದಿಯಲ್ಲಿ ನೆಲ ಅಗೆಯಲಾಗಿತ್ತು. ರಸ್ತೆಯ ಅಲ್ಲಲ್ಲಿ ಕಾಂಕ್ರೀಟ್‌, ಜಲ್ಲಿ, ಮರಳು ಸುರಿದು ಕಾಮಗಾರಿ ಶುರು ಮಾಡಿತ್ತು. ಆದರೆ, ಇಲ್ಲಿಯ ವರೆಗೆ ಹೆಚ್ಚಿನ ಪ್ರಗತಿಯಾಗಿಲ್ಲ.

ಕೆಲಸ ನಿಧಾನ ಗತಿಯಲ್ಲಿ ನಡೆಯುತ್ತಿರುವುದರಿಂದ ಎಲ್ಲೆಡೆ ದೂಳು ಆವರಿಸಿಕೊಂಡಿದೆ. ಮಳಿಗೆಗಳ ಮುಂದೆ ಚರಂಡಿ ನಿರ್ಮಾಣಕ್ಕೆ ನೆಲ ಅಗೆದು ಬಿಟ್ಟಿರುವುದರಿಂದ ಜನ ಒಳ ಹೋಗಿ ಬರಲು ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲ ಮಳಿಗೆಯವರು ತಾತ್ಕಾಲಿಕವಾಗಿ ತಗಡಿನ ಶೀಟ್‌ಗಳ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಹೀಗಿದ್ದರೂ ಜನ ಆ ಕಡೆ ಇಣುಕಿ ಕೂಡ ನೋಡುತ್ತಿಲ್ಲ. ಸದಾ ದೂಳು ಆವರಿಸಿಕೊಂಡಿರುವುದರಿಂದ ಜನ ಆ ಭಾಗಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಆ ಪ್ರದೇಶದಲ್ಲಿ ವ್ಯಾಪಾರ–ವಹಿವಾಟು ಬಹುತೇಕ ಸ್ಥಗಿತಗೊಂಡಿದೆ. ಕಿರಾಣಿ, ಪಾನ್‌ ಬೀಡಾ, ಹೋಟೆಲ್‌, ಬೇಕರಿ ಸೇರಿದಂತೆ ಯಾವ ಮಳಿಗೆಗಳಲ್ಲೂ ವ್ಯಾಪಾರ ನಡೆಯುತ್ತಿಲ್ಲ. ‘ಮಳಿಗೆಗೆ ಕೊಡುವ ಬಾಡಿಗೆ ಹಣವೂ ವಾಪಸ್‌ ಬರುತ್ತಿಲ್ಲ. ನಗರಸಭೆಯವರ ಬೇಜವಾಬ್ದಾರಿತನದಿಂದ ಸಮಸ್ಯೆ ಎದುರಿಸುವಂತಾಗಿದೆ’ ಎಂದು ಆ ಭಾಗದ ವ್ಯಾಪಾರಸ್ಥರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

‘ಮೂರ್ನಾಲ್ಕು ತಿಂಗಳ ಹಿಂದೆ ಕೆಲಸ ಆರಂಭಿಸಿದ್ದರು. ಆಗ ಹೇಗಿತ್ತೋ ಈಗಲೂ ಹಾಗೆಯೇ ಇದೆ. ನಗರಸಭೆಯ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಅರ್ಧಂಬರ್ಧ ಕೆಲಸ ಆಗಿರುವುದರಿಂದ ವ್ಯಾಪಾರ ನಡೆಯುತ್ತಿಲ್ಲ’ ಎಂದು ಬೇಕರಿ ಮಾಲೀಕ ದೇವರಾಜ ಗೋಳು ತೋಡಿಕೊಂಡರು.

‘ಈ ರೀತಿ ಕೆಲಸ ಮಾಡುವುದರ ಬದಲು ಸುಮ್ಮನೆ ಇರುವುದು ಎಷ್ಟೋ ಉತ್ತಮ. ತಿಂಗಳ ಬಾಡಿಗೆ ಕಟ್ಟುವಷ್ಟೂ ವ್ಯಾಪಾರ ಆಗುತ್ತಿಲ್ಲ. ಎಲ್ಲ ಕಡೆ ದೂಳು ಹರಡಿಕೊಂಡರೆ ಯಾರು ತಾನೆ ಬರುತ್ತಾರೆ. ಸ್ವಲ್ಪವಾದರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಇಲ್ಲದಿದ್ದರೆ ಈ ರೀತಿ ಆಗುತ್ತದೆ’ ಎಂದು ಸಿಟ್ಟು ಹೊರಹಾಕಿದರು.

‘ಕಾಮಗಾರಿಯಿಂದ ಜನರೇ ಈ ಭಾಗಕ್ಕೆ ಬರುತ್ತಿಲ್ಲ. ಹೀಗಾದಾಗ ವ್ಯಾಪಾರ ಹೇಗೆ ತಾನೆ ನಡೆಯುತ್ತದೆ. ಕನಿಷ್ಠ ಒಂದು ಬದಿ ಪೂರ್ಣಗೊಳಿಸಿ, ನಂತರ ಇನ್ನೊಂದು ಬದಿ ಕೆಲಸ ಕೈಗೆತ್ತಿಕೊಳ್ಳಬಹುದಿತ್ತು. ಆದರೆ, ಎರಡೂ ಕಡೆ ಒಟ್ಟಿಗೆ ಅಗೆದು ಬಿಟ್ಟಿದ್ದಾರೆ’ ಎಂದು ಜ್ಯೋತಿಷಿ ತುಕಾರಾಂ ಶಾಸ್ತ್ರಿ ಹೇಳಿದರು.

‘ಸಣ್ಣ ವ್ಯಾಪಾರಿಗಳು ನಿತ್ಯ ದುಡಿದರಷ್ಟೇ ಅವರ ಮನೆ ನಡೆಯುತ್ತದೆ. ಒಂದಲ್ಲ, ಎರಡಲ್ಲ. ಅನೇಕ ಜನ ಈ ಭಾಗದಲ್ಲಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ಅಧಿಕಾರಿಗಳಿಗೆ ಅದು ಗೊತ್ತಾಗುತ್ತಿಲ್ಲ’ ಎಂದರು.

‘ಕೆಲಸದಿಂದ ಆಟೊ ಸ್ಟ್ಯಾಂಡ್‌ ತಾತ್ಕಾಲಿಕವಾಗಿ ತೆಗೆದಿದ್ದಾರೆ. ಬೇರೆ ಆಟೊ ಸ್ಟ್ಯಾಂಡ್‌ನಲ್ಲಿ ನಿಲ್ಲುವಂತಿಲ್ಲ. ಕೆಲಸ ಮುಗಿಯುವವರೆಗೆ ಸುಮ್ಮನೆ ತಿರುಗಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಆಟೊ ಚಾಲಕ ವೆಂಕಟೇಶ್‌ ತಿಳಿಸಿದರು.

ಬಸ್‌ ನಿಲ್ದಾಣ ಇಲ್ಲೇ ಇರುವುದರಿಂದ ತಾತ್ಕಾಲಿಕವಾಗಿ ಬಸ್ಸುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಇದರಿಂದ ರೋಟರಿ ವೃತ್ತದಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ನಿಲ್ದಾಣದ ವಿರುದ್ಧ ದಿಕ್ಕಿನಲ್ಲಿ ಜನ ಹೋಗಿ ಬರುವುದಕ್ಕೆ ವ್ಯವಸ್ಥೆ ಇದ್ದರೂ ಗೊತ್ತಿರದವರು ಕಾಮಗಾರಿ ನಡೆಯುತ್ತಿರುವ ಕಡೆಗೆ ಬಂದು ಹೆಣಗುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.

ಈ ಭಾಗದಲ್ಲಿ ತಿಂಡಿ ತಿನಿಸು, ದೈನಂದಿನ ಬಳಕೆಯ ಪ್ಲಾಸ್ಟಿಕ್‌ ವಸ್ತುಗಳು, ಬಟ್ಟೆ,ಹಣ್ಣು ಸೇರಿದಂತೆ ಇತರೆ ವಸ್ತುಗಳನ್ನು ಮಾರಾಟ ಮಾಡಿ ಅನೇಕ ಜನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಕಾಮಗಾರಿಯಿಂದ ಅವರು ಅನಿವಾರ್ಯವಾಗಿ ಬೇರೆಡೆ ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT