ಮಂಗಳವಾರ, ನವೆಂಬರ್ 24, 2020
27 °C
ಸೂಲಗಿತ್ತಿ ಆದೆಮ್ಮ ಅವರಿಗೆ ಸಮಾಜ ಸೇವಾ ಪ್ರಶಸ್ತಿ ಪ್ರದಾನ

ಸಾಹಿತ್ಯದ ಮೂಲ ಬೇರು ಸ್ತ್ರೀಯರಲ್ಲಿ: ಸಾಹಿತಿ ಸುಧಾ ಚಿದಾನಂದಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಕವಯತ್ರಿ, ತೆಗ್ಗಿನಮಠದ ತಿಲೋತ್ತಮ ಗುರುಪಾದಯ್ಯ ಅವರ 72ನೇ ಸ್ಮರಣಾರ್ಥ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅನಾರೋಗ್ಯದಿಂದ ಕಾರ್ಯಕ್ರಮಕ್ಕೆ ಆದೆಮ್ಮ ಗೈರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಅವರ ಮಗಳು ಉಮಾ ಪುರುಷೋತ್ತಮ ಪ್ರಶಸ್ತಿ ಸ್ವೀಕರಿಸಿದರು.

ಬಳಿಕ ಮಾತನಾಡಿದ ಸಾಹಿತಿ ಸುಧಾ ಚಿದಾನಂದಗೌಡ, ‘ಜಗತ್ತಿನಲ್ಲಿ ಸದ್ಯ ಬಳಸುತ್ತಿರುವ ಸಾಹಿತ್ಯಗಳ ಮೂಲ ಬೇರುಗಳು ಸ್ತ್ರೀಯರಲ್ಲಿವೆ. ಅವರ ಕಲ್ಪನೆಗಳ ಸಂಕೇತಗಳೇ ಸಾಹಿತ್ಯದ ಮುನ್ನುಡಿಯಾಗಿವೆ. ಶಿಲಾಯುಗದಲ್ಲಿ ಗುಹೆಗಳಲ್ಲಿದ್ದ ಆದಿಮಾನವರು ಹೆಚ್ಚಿನ ಸಮಯ ಗುಹೆಗಳ ಹೊರಗೆ ಆಹಾರಕ್ಕಾಗಿ ಓಡಾಡುತ್ತಿದ್ದರು. ಗುಹೆಗಳಲ್ಲಿ ಮಹಿಳೆಯರು ಇದ್ದು, ಅವರೇ ಗೋಡೆಗಳ ಮೇಲೆ ಚಿನ್ಹೆ, ಸಂಕೇತ ರಚಿಸಿರಬಹುದು’ ಎಂದರು.

‘ಮನುಷ್ಯನನ್ನು ಹೊರತುಪಡಿಸಿ ಯಾವ ಜೀವಿಯೂ ಕೃತಕ ಅಭಿವ್ಯಕ್ತಿ ಮಾಧ್ಯಮ ಬಳಸಿಲ್ಲ. ಅದರಲ್ಲೂ ಸಾಹಿತ್ಯದ ಬೇರು ಇರುವುದು ಸ್ತ್ರೀಯರಲ್ಲಿ. ವಚನಕಾರ್ತಿಯರೇ ಮೊದಲ ಮಹಿಳಾ ಕವಯತ್ರಿಯರು. ಕೆಲ ಮಹಿಳೆಯರು ಸೂಕ್ಷ್ಮ ವಿಚಾರಗಳನ್ನು ಸಾಹಿತ್ಯಗಳಲ್ಲಿ ಉಲ್ಲೇಖಿಸುತ್ತಾರೆ. ಅಂತಹ ನಿರ್ಧಾರ ಬಹುತೇಕ ಇಂದಿನ ಮಹಿಳೆಯರಲ್ಲಿ ಕಡಿಮೆ. ಇದಕ್ಕೆ ಭೌತಿಕ ಸಮಸ್ಯೆಗಳು ಕಾರಣ’ ಎಂದು ಹೇಳಿದರು.

‘ಸಮಸ್ಯೆಯಿಂದ ಹೊರಬಂದು ಸಾಹಿತ್ಯ ಸೃಷ್ಟಿಸುವ ಸೃಜನಶೀಲತೆ ಬರಬೇಕು. ಕೆಲವು ಕಡೆ ಒಳ ಬಂಡಾಯ ಸಾಹಿತ್ಯ ಬಂದಿವೆ. ಅದನ್ನು ಮಹಿಳೆಯರು ರಚಿಸಿದ್ದಾರೆ. ಅವರಲ್ಲಿ ವೈದೇಹಿ, ತ್ರಿವೇಣಿ, ಎಂ.ಕೆ. ಇಂದಿರಾ ಪ್ರಮುಖರು’ ಎಂದು ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಸಿ. ಮಂಜುನಾಥ್, ಮಕ್ಕಳಲ್ಲಿ ಹಾಗೂ ಓದುಗರಲ್ಲಿ ಜಾತ್ಯತೀತ ಮನೋಭಾವ ರೂಪಿಸುವಲ್ಲಿ ಕವಯತ್ರಿ ತಿಲೋತ್ತಮ ಅವರ ಬರಹಗಳು ಪ್ರಧಾನ ಪಾತ್ರ ವಹಿಸಿವೆ. ಸೂಲಗಿತ್ತಿಯು ಪರಂಪರಾಗತವಾಗಿ ಬಂದ ವಿದ್ಯೆಯಾಗಿದೆ. ಬಳ್ಳಾರಿಯ ಹಂದ್ಯಾಳ ಗ್ರಾಮದ ಆದೆಮ್ಮ ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಐದು ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿದ್ದಾರೆ’ ಎಂದು ವಿವರಿಸಿದರು.

ರಂಗಭಾರತಿ ಕಾರ್ಯಾಧ್ಯಕ್ಷೆ ಎಂ.ಪಿ.ಸುಮಾ ವಿಜಯ್, ಉಪನ್ಯಾಸಕ ಎಚ್.ಎಂ.ನಿರಂಜನ, ಪ್ರಿಯದರ್ಶಿನಿ ಮಹಿಳಾ ಸಂಘದ ಡಾ.ಸುಲೋಚನಾ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಎಂ.ಎಂ. ಶಿವಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಿದ್ದರಾಮ ಕಲ್ಮಠ, ಪಲ್ಲವ ಪ್ರಕಾಶನದ ಪಲ್ಲವ ವೆಂಕಟೇಶ್, ಗೃಹ ರಕ್ಷಕ ದಳದ ಘಟಕ ಅಧಿಕಾರಿ ಎಸ್.ಎಂ.ಗಿರೀಶ್, ಶಿವಲೀಲಾ ಸೋಮೇಶ್ ಉಪ್ಪಾರ, ಟಿ.ಎಂ.ಉಷಾರಾಣಿ, ಟಿ.ಎಂ.ನಾಗಭೂಷಣ ಇದ್ದರು. ಹೂವಿನ ಹಡಗಲಿ ಸಾಂಸ್ಕೃತಿಕ ಸಂಸ್ಥೆ ಹಾಗೂ ಹೊಸಪೇಟೆಯ ಚೇತನ ಸಾಹಿತ್ಯ ಸಂಸ್ಥೆಯ ಸಹಭಾಗಿತ್ವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.