ಹೊಸಪೇಟೆ ರೈಲು ನಿಲ್ದಾಣಕ್ಕೆ ಸೌರ ಬೆಳಕು

7

ಹೊಸಪೇಟೆ ರೈಲು ನಿಲ್ದಾಣಕ್ಕೆ ಸೌರ ಬೆಳಕು

Published:
Updated:
ಹೊಸಪೇಟೆ ರೈಲು ನಿಲ್ದಾಣದಲ್ಲಿ ನಿರ್ಮಿಸಿರುವ ವಿದ್ಯುತ್‌ ವಿತರಣಾ ಜಾಲ. ಸೋಲಾರ್‌ ಪ್ಯಾನಲ್‌ಗಳಿಂದ ತಯಾರಾದ ವಿದ್ಯುತ್‌ ಇದರ ಮೂಲಕ ಇಡೀ ನಿಲ್ದಾಣಕ್ಕೆ ಪೂರೈಕೆಯಾಗಲಿದೆ

ಹೊಸಪೇಟೆ: ನಗರದ ರೈಲು ನಿಲ್ದಾಣ ಶೀಘ್ರದಲ್ಲೇ ಸಂಪೂರ್ಣವಾಗಿ ಸೌರ ವಿದ್ಯುತ್‌ ಬೆಳಕಿನಿಂದ ಕಂಗೊಳಿಸಲಿದೆ.

ರೈಲು ನಿಲ್ದಾಣದ ಮೇಲೆ ₨60 ಲಕ್ಷ ವೆಚ್ಚದಲ್ಲಿ 100 ಕಿಲೋ ವ್ಯಾಟ್‌ ಸಾಮರ್ಥ್ಯದ ಸೋಲಾರ್‌ ಘಟಕವನ್ನು ನಿರ್ಮಿಸಲಾಗಿದೆ. ಈಗಾಗಲೇ ಪ್ಯಾನಲ್‌ಗಳನ್ನು ಜೋಡಿಸಲಾಗಿದೆ. ಇಡೀ ರೈಲು ನಿಲ್ದಾಣಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಮುಖ್ಯ ವಿಭಾಗಕ್ಕೆ ಕೇಬಲ್‌ ಜೋಡಿಸುವ ಕೆಲಸವಷ್ಟೇ ಬಾಕಿ ಉಳಿದಿದೆ. ಜೆಸ್ಕಾಂನಿಂದ ಅನುಮತಿ ಪಡೆದ ಬಳಿಕ ಸೌರ ಬೆಳಕು ಹರಿಯಲಿದೆ.

ರೈಲು ನಿಲ್ದಾಣಕ್ಕೆ ನಿತ್ಯ 100 ಕಿಲೋ ವ್ಯಾಟ್‌ ವಿದ್ಯುತ್‌ ಬೇಕು. ಆರಂಭದಲ್ಲಿ ಅಗತ್ಯಕ್ಕೆ ಅನುಗುಣವಾಗಿ ವಿದ್ಯುತ್‌ ಉತ್ಪಾದಿಸಲು ಯೋಜಿಸಲಾಗಿದೆ. ನಂತರದ ದಿನಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ವಿದ್ಯುತ್‌ ಉತ್ಪಾದಿಸಿ, ಜೆಸ್ಕಾಂಗೆ ಮಾರಾಟ ಮಾಡುವ ಚಿಂತನೆ ಇಲಾಖೆಯ ಅಧಿಕಾರಿಗಳದ್ದು.

‘ರೈಲ್ವೆ ಇಲಾಖೆಯು ವಿದ್ಯುತ್‌ ವಿಷಯದಲ್ಲಿ ಸ್ವಾವಲಂಬನೆ ಹಾಗೂ ಹಣ ಉಳಿಸಲು ದೇಶದ ಕೆಲವು ರೈಲು ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಸೋಲಾರ್‌ ಅಳವಡಿಸಿಕೊಳ್ಳಲು ಮುಂದಾಗಿದೆ. ಅಂಥಹ ಕೆಲವೇ ಕೆಲವು ರೈಲು ನಿಲ್ದಾಣಗಳಲ್ಲಿ ಹೊಸಪೇಟೆ ಕೂಡ ಒಂದು. ನಿಲ್ದಾಣದಲ್ಲಿ ಈಗಾಗಲೇ ಬಹುತೇಕ ಕೆಲಸ ಪೂರ್ಣಗೊಂಡಿದೆ. ಜೆಸ್ಕಾಂನಿಂದ ಅನುಮತಿ ಪಡೆದ ಬಳಿಕ ಇಡೀ ನಿಲ್ದಾಣ ಸೌರ ವಿದ್ಯುತ್‌ ಮೇಲೆ ನಡೆಯಲಿದೆ’ ಎಂದು ರೈಲು ನಿಲ್ದಾಣದ ವಿದ್ಯುತ್‌ ವಿಭಾಗದ ಎಂಜಿನಿಯರ್‌ ಲಕ್ಷ್ಮಿ ನರಸಿಂಹ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶೀಘ್ರದಲ್ಲೇ ಜೆಸ್ಕಾಂನಿಂದ ಕಲ್ಪಿಸಿರುವ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ, ಸೌರ ವಿದ್ಯುತ್‌ಗೆ ಸಂಪರ್ಕ ಕಲ್ಪಿಸಲಾಗುವುದು. ಯಾವುದೇ ಅಡಚಣೆಯಿಲ್ಲದೆ ಸತತವಾಗಿ ರೈಲು ನಿಲ್ದಾಣಕ್ಕೆ ವಿದ್ಯುತ್‌ ಪೂರೈಕೆಯಾಗಲಿದೆ. ಪ್ಲಾಟ್‌ಫಾರಂ ಸೇರಿದಂತೆ ನಿಲ್ದಾಣದ ಪ್ರತಿಯೊಂದು ಜಾಗದಲ್ಲಿ ವಿದ್ಯುದ್ದೀಪಗಳು ಸತತವಾಗಿ ಬೆಳಗುತ್ತವೆ. ಅದರಲ್ಲೂ ತಡರಾತ್ರಿ, ನಸುಕಿನ ಜಾವ ಕೆಲವು ರೈಲು ಸಂಚರಿಸುತ್ತವೆ. ಈ ವೇಳೆ ಬಂದು ಹೋಗುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಇದು ಉತ್ತಮ ಕ್ರಮ’ ಎಂದರು.

‘ನಗರದಿಂದ ಸ್ವಲ್ಪವೇ ದೂರದಲ್ಲಿ ವಿಶ್ವವಿಖ್ಯಾತ ಹಂಪಿ ಇದೆ. ನಿತ್ಯ ದೇಶ–ವಿದೇಶಗಳಿಂದ ನೂರಾರು ಜನ ಪ್ರವಾಸಿಗರು ರೈಲುಗಳ ಮೂಲಕ ಬರುತ್ತಾರೆ. ಅವರಿಗೆ ಉತ್ತಮ ಸೇವೆ ಕೊಡುವುದು ರೈಲ್ವೆ ಇಲಾಖೆಯ ಕರ್ತವ್ಯ. ಜೆಸ್ಕಾಂನವರು ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್‌ ಪೂರೈಕೆ ಕಡಿತಗೊಳಿಸುತ್ತಾರೆ. ವಿಶ್ರಾಂತಿ ಕೊಠಡಿ ಗಳಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರು ಶಕೆಯಿಂದ ಬಳಲುತ್ತಾರೆ. ಇಡೀ ಪ್ಲಾಟ್‌ಫಾರಂ ಕೆಲವೊಮ್ಮೆ ಅಂಧಕಾರದಲ್ಲಿ ಮುಳುಗಿರುತ್ತದೆ. ಭವಿಷ್ಯದಲ್ಲಿ ಇದೆಲ್ಲ ನೋಡಲು ಸಿಗದು’ ಎಂದು ಹೇಳಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !