ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರು ಅಡಿ ಎತ್ತರದಲ್ಲಿ ಹಾರಾಡಲಿವೆ ಮೂರು ಧ್ವಜ

Last Updated 14 ಆಗಸ್ಟ್ 2021, 15:44 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನೂತನ ಜಿಲ್ಲೆ ವಿಜಯನಗರದಲ್ಲಿ ಮೊದಲ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಈ ಸಲ ನಗರವೊಂದರಲ್ಲೇ ನೂರು ಅಡಿ ಎತ್ತರದ ಮೂರು ಧ್ವಜಗಳು ಹಾರಾಡಲಿರುವುದು ವಿಶೇಷ.

ನಗರದ ರೋಟರಿ ವೃತ್ತ, ರೈಲು ನಿಲ್ದಾಣ ಹಾಗೂ ಇತ್ತೀಚೆಗೆ ಸ್ಥಾಪಿಸಿರುವ ನಗರ ಹೊರವಲಯದ ಜೋಳದರಾಶಿ ಗುಡ್ಡದ ಮೇಲೆ ನೂರು ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಾಡಲಿದೆ.

ಹೋದ ವರ್ಷ ನಗರದ ರೋಟರಿ ವೃತ್ತದಲ್ಲಿ ಸಚಿವ ಆನಂದ್‌ ಸಿಂಗ್‌ ಅವರು ವೈಯಕ್ತಿಕವಾಗಿ ₹50 ಲಕ್ಷ ವೆಚ್ಚದಲ್ಲಿ ಧ್ವಜ ಸ್ತಂಭ ಸ್ಥಾಪಿಸಿದ್ದರು. ಈಗ ಪುನಃ ಅವರೇ ಸ್ವಂತ ಹಣದಲ್ಲಿ ಜೋಳದರಾಶಿ ಗುಡ್ಡದ ಮೇಲೆಯೂ ಧ್ವಜ ಸ್ತಂಭಕ್ಕೆ ವ್ಯವಸ್ಥೆ ಮಾಡಿದ್ದಾರೆ. ಇನ್ನು, ನಗರದ ರೈಲು ನಿಲ್ದಾಣದಲ್ಲಿ ಇತ್ತೀಚೆಗೆ ಧ್ವಜ ಸ್ತಂಭ ನಿರ್ಮಿಸಲಾಗಿದೆ. ಹೀಗಾಗಿ ನಗರದಿಂದ ಸ್ವಲ್ಪವೇ ದೂರದಲ್ಲಿರುವ ಅತಿ ಎತ್ತರದ ಜೋಳದರಾಶಿ ಗುಡ್ಡ, ನಗರದ ಮಧ್ಯ ಭಾಗದಲ್ಲಿ ಎರಡು ಕಡೆ ಬೃಹತ್‌ ಧ್ವಜಗಳು ಹಾರಾಡುವ ಮೂಲಕ ಎಲ್ಲರ ಗಮನ ಸೆಳೆಯಲಿವೆ.

ಇನ್ನು, ನಗರದ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಜಿಲ್ಲಾಮಟ್ಟದ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದೆ. ಈಗಾಗಲೇ ವಿವಿಧ ತುಕಡಿಗಳು ಪಥ ಸಂಚಲನ ಅಭ್ಯಾಸ ನಡೆಸಿವೆ. ಭಾನುವಾರ (ಆ.15) ನಡೆಯಲಿರುವ ಕಾರ್ಯಕ್ರಮದಲ್ಲಿ ವೇದಿಕೆ ಸಿದ್ಧಪಡಿಸಿ, ಅಗತ್ಯ ಭದ್ರತೆ ಕಲ್ಪಿಸಲಾಗಿದೆ. ಬೆಳಿಗ್ಗೆ 9ಕ್ಕೆ ಸಚಿವ ಆನಂದ್‌ ಸಿಂಗ್‌ ಧ್ವಜಾರೋಹಣ ಮಾಡುವರು. ಅದಾದ ಬಳಿಕ ಪರೇಡ್‌, ಭಾಷಣ ನಡೆಯಲಿದೆ.

ಇನ್ನು, ಶನಿವಾರ ಸಂಜೆ ನಗರದ ರೋಟರಿ ವೃತ್ತ, ಕಾಲೇಜು ರಸ್ತೆ, ಸಾಯಿಬಾಬಾ ವೃತ್ತದಲ್ಲಿ ತ್ರಿವರ್ಣ ಧ್ವಜಗಳ ಮಾರಾಟ ಜೋರಾಗಿ ನಡೆಯಿತು. ಬಟ್ಟೆ, ಪ್ಲಾಸ್ಟಿಕ್‌ ಧ್ವಜಗಳನ್ನು ಜನ ಖರೀದಿಸಿ ಕೊಂಡೊಯ್ದರು. ನಗರದ ಉಪವಿಭಾಗಾಧಿಕಾರಿ ಕಚೇರಿ, ತಹಶೀಲ್ದಾರ್‌ ಕಚೇರಿ, ರೈಲು ನಿಲ್ದಾಣ ಸೇರಿದಂತೆ ಪ್ರಮುಖ ಕಟ್ಟಡಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಇದರಿಂದಾಗಿ ನಗರ ಕಳೆಗಟ್ಟಿದೆ.

ಮತ್ತೆ ಸಿ.ಎಂ. ಭೇಟಿ:ಮುಖ್ಯಮಂತ್ರಿ ಹಂಚಿಕೆ ಮಾಡಿರುವ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆಯನ್ನು ಇದುವರೆಗೆ ಆನಂದ್‌ ಸಿಂಗ್‌ ವಹಿಸಿಕೊಂಡಿಲ್ಲ. ಭಾನುವಾರ ಧ್ವಜಾರೋಹಣ ನೆರವೇರಿಸಿ, ಬೆಂಗಳೂರಿಗೆ ತೆರಳಲಿದ್ದಾರೆ.
ಖಾತೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರೊಂದಿಗೆ ಮತ್ತೊಮ್ಮೆ ಚರ್ಚಿಸಿ, ಮುಂದಿನ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT