ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾವತಿ ಕ್ಷೇತ್ರದಲ್ಲಿ ಅರಳದ ‘ಕಮಲ’

‘ಕೈ’ ಹಿಡಿದ ಮತದಾರರು: ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಬಿಜೆಪಿ
Last Updated 16 ಮೇ 2018, 8:37 IST
ಅಕ್ಷರ ಗಾತ್ರ

ಭದ್ರಾವತಿ: ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಅರಳಿದ ಕಮಲ, ಭದ್ರಾವತಿ ಕ್ಷೇತ್ರದಲ್ಲಿ ಈ ಬಾರಿಯೂ ಅರಳಲಿಲ್ಲ. ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡುವ ಮೂಲಕ ಮತ್ತೊಮ್ಮೆ ಸಾಂಪ್ರದಾಯಿಕ ಎದುರಾಳಿಗಳ ನಡುವೆಯೇ ಹಣಾಹಣಿಗೆ ಕಾರಣವಾಯಿತು.

ಇತರೆ ಪಕ್ಷದಿಂದ ವಲಸೆ ಬಂದ ಇಲ್ಲ ಹೊರ ಊರಿನ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸುವ ಪ್ರಯತ್ನ ನಡೆಸುತ್ತಾ ಬಂದಿರುವ ಬಿಜೆಪಿ ಈ ಬಾರಿಯೂ ಕಾಂಗ್ರೆಸ್ ಪಕ್ಷದಿಂದ ವಲಸೆ ಬಂದ ಪ್ರವೀಣ್ ಪಟೇಲ್ ಅವರಿಗೆ ಮಣೆ ಹಾಕುವ ಮೂಲಕ ಚುನಾವಣೆ ಎದುರಿಸಿತ್ತು.

ಕಳೆದ ಬಾರಿ 1700 ಮತಗಳಿಗೆ ತೃಪ್ತಿ ಪಟ್ಟಿದ್ದ ಬಿಜೆಪಿ ಈ ಬಾರಿ 8,765 ಮತಗಳನ್ನು ಪಡೆಯುವ ಮೂಲಕ ಒಂದಿಷ್ಟು ಸಾಧನೆ ಮಾಡಿದ್ದು ಬಿಟ್ಟರೆ ಜಿಲ್ಲೆಯ ಇತರೆಡೆ ಗೆಲುವಿಗೆ ಹರಿಸಿದ ಬೆವರನ್ನು ಇಲ್ಲಿ ಹರಿಸಲು ವಿಫಲವಾಯಿತು.

ಇಲ್ಲಿ ಯಾರೇ ಗೆದ್ದರೂ ಅವರ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂಬ ಮಾತಿಗೆ ತಕ್ಕಂತೆ ಈ ಬಾರಿಯ ಫಲಿತಾಂಶ ಸಹ ಜಿಲ್ಲೆಯಲ್ಲಿ ಕಾಂಗ್ರೆಸ್ ಖಾತೆ ತೆರೆಯುವಲ್ಲಿ ಈ ಕ್ಷೇತ್ರ ನೆರವಾಗಿರುವುದು ಪಕ್ಷದ ಅಸ್ತಿತ್ವವನ್ನು ಒಂದಿಷ್ಟು ಮಟ್ಟಿಗೆ ಸಾರಿದೆ.

2018ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಬಿ.ಕೆ. ಸಂಗಮೇಶ್ವರ ಆಗಿನ ಪಕ್ಷದ ಅಭ್ಯರ್ಥಿ ಸಿ.ಎಂ. ಇಬ್ರಾಹಿಂ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು.

ಈ ಹಿನ್ನೆಲೆಯಲ್ಲಿ ಈ ಬಾರಿ ಇಬ್ರಾಹಿಂ ಅವರ ಬೆಂಬಲ ಸಂಗಮೇಶ್ವರ ಅವರಿಗೆ ಇಲ್ಲ ಎಂಬ ಸುದ್ದಿ ಕ್ಷೇತ್ರದಲ್ಲಿ ಹರಿದಾಡಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರ ಸಭೆಗೆ ಇಲ್ಲಿಗೆ ಬಂದಿದ್ದ ವೇಳೆ ಅವರು ಇಬ್ರಾಹಿಂ ಗೈರಾಗಿದ್ದು ಸಹ ಒಂದಿಷ್ಟು ಗಾಳಿ ಸುದ್ದಿಗೆ ಕಾರಣವಾಗಿತ್ತು. ಇವೆಲ್ಲದರ ನಡುವೆಯೂ ಸಂಗಮೇಶ್ವರ 11,567 ಮತಗಳ ಮುನ್ನಡೆ ಪಡೆದು ಜಯಗಳಿಸಿದ್ದು ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ ಪಾಲಿಗೆ ಅತಿ ದೊಡ್ಡ ಜಯವಾಗಿದೆ.

2013ರಲ್ಲಿ ಜಯಗಳಿಸಿದ್ದ ಎಂ.ಜೆ. ಅಪ್ಪಾಜಿ ಗೆಲುವಿನ ನಂತರ ಜರುಗಿದ ಎಲ್ಲಾ ಸ್ಥಳೀಯ ಸಂಸ್ಥೆ, ಎಪಿಎಂಸಿ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ತನ್ನ ಯಶಸ್ಸನ್ನು ಕಾಯ್ದುಕೊಳ್ಳುವ ಮೂಲಕ ಉತ್ತಮ ಸಂಘಟನಾ ಕೌಶಲ ಪ್ರದರ್ಶಿಸಿದ್ದರು. ಈ ಬಾರಿ ಚುನಾವಣೆಗಾಗಿ ಭಾರಿ ಕಸರತ್ತು ನಡೆಸಿದ್ದರು. ಇಷ್ಟಾದರೂ ಅವರ ಪಾಲಿಗೆ ವಿಜಯಲಕ್ಷ್ಮೀ ಒಲಿಯಲಿಲ್ಲ.

ಅಪ್ಪಾಜಿ ಪಾಲಿಗೆ ಇದು 7ನೇ ಚುನಾವಣೆಯಾಗಿದ್ದು  ಮೂರು ಬಾರಿ ಶಾಸಕರಾಗಿ ಕ್ಷೇತ್ರ ಪ್ರತಿನಿಧಿಸಿದ್ದರು. ಅದರಲ್ಲಿ ಎರಡು ಬಾರಿ ಪಕ್ಷೇತರರಾಗಿ ಜಯಗಳಿಸಿ ತಮ್ಮ ಶೇಕಡಾವಾರು ಮತಪ್ರಮಾಣ ಕಾಯ್ದುಕೊಂಡಿದ್ದರು.

ಒಟ್ಟಿನಲ್ಲಿ ಜಿಲ್ಲೆಯ ಎಲ್ಲೆಡೆ ಅರಳಿದ ಕಮಲಕ್ಕೆ ಇಲ್ಲಿ ನೆಲೆ ಸಿಕ್ಕಿಲ್ಲ, ಜಿಲ್ಲೆಯ ಬೇರೆಲ್ಲೂ ವಿಜಯ ಪತಾಕೆ ಹಾರಿಸದ ಕಾಂಗ್ರೆಸ್ ಇಲ್ಲಿ ಹಾರಿಸಿದ್ದು, ಈ ಕ್ಷೇತ್ರದ ವೈಶಿಷ್ಟ್ಯವನ್ನು ಮತ್ತೊಮ್ಮೆ ಸಾರಿದೆ.

–ಕೆ.ಎನ್. ಶ್ರೀಹರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT