ಗ್ರಾಮಕ್ಕೆ ನೀತಿ ರೂಪಿಸುವ ಸ್ವಾಯತ್ತತೆ ಸಿಗಲಿ: ಎಂ. ಚಂದ್ರ ಪೂಜಾರಿ

7

ಗ್ರಾಮಕ್ಕೆ ನೀತಿ ರೂಪಿಸುವ ಸ್ವಾಯತ್ತತೆ ಸಿಗಲಿ: ಎಂ. ಚಂದ್ರ ಪೂಜಾರಿ

Published:
Updated:
Deccan Herald

ಹೊಸಪೇಟೆ: ‘ಹಣಕಾಸು, ಆಡಳಿತ ಹಾಗೂ ನೀತಿ–ನಿರ್ಧಾರಗಳ ಸ್ವಾಯತ್ತತೆ ನೀಡುವುದರಿಂದ ಮಹಾತ್ಮ ಗಾಂಧೀಜಿಯವರ ಗ್ರಾಮೀಣ ಅಭಿವೃದ್ಧಿಯ ಪರಿಕಲ್ಪನೆ, ನವ ಸಮಾಜ ನಿರ್ಮಾಣದ ಕನಸು ನನಸಾಗಲು ಸಾಧ್ಯ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಎಂ. ಚಂದ್ರ ಪೂಜಾರಿ ಹೇಳಿದರು.

ಗಾಂಧಿ ಜಯಂತಿ ನಿಮಿತ್ತ ಇಲ್ಲಿನ ಹಂಪಿ ಕನ್ನಡ ವಿ.ವಿ.ಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ವರ್ತಮಾನ ಮತ್ತು ಗಾಂಧಿ’ ಕುರಿತು ಉಪನ್ಯಾಸ ನೀಡಿದರು.

‘ರಾಜಕೀಯ ಕೋಮು–ಗಲಭೆಗಳಿಂದ ಅಮಾಯಕ ಜನ ಬಲಿಯಾಗುತ್ತಿದ್ದಾರೆ. ಗಾಂಧೀಜಿಯವರ ದೃಷ್ಟಿಯಲ್ಲಿ ಇಂತಹ ಘಟನೆಗಳಿಗೆ ಕಾರಣರಾಗುವವರಿಗೆ ಶಿಕ್ಷೆ ನೀಡಬೇಕು. ಆದರೆ, ಆ ಕೆಲಸ ಆಗುತ್ತಿಲ್ಲ’ ಎಂದರು.

‘ದೇಶದಲ್ಲಿ ಅಸಮಾನತೆ ದಿನೇ ದಿನೇ ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶದ ಜನ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಇನ್ನಷ್ಟೇ ಸಾಕಾರಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಸೂಕ್ತ ಯೋಜನೆಗಳನ್ನು ರೂಪಿಸಿದರೆ ಅದು ಸಾಧ್ಯವಾಗಬಹುದು’ ಎಂದು ಅಭಿಪ್ರಾಯಪಟ್ಟರು.

ಕುಲಸಚಿವ ಮಂಜುನಾಥ ಬೇವಿನಕಟ್ಟಿ ಮಾತನಾಡಿ, ‘ದೇಶದಲ್ಲಿ ಗಾಂಧಿ ತತ್ವ ಸಿದ್ಧಾಂತಗಳನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ಬೇಸರದ ಸಂಗತಿ’ ಎಂದು ಹೇಳಿದರು.

‘ದಲಿತರ ಜತೆಯಲ್ಲಿ ಮೇಲ್ನೋಟಕ್ಕೆ ಮೇಲ್ವರ್ಗದವರು ಚೆನ್ನಾಗಿರುತ್ತಾರೆ. ಆದರೆ, ಆರ್ಥಿಕ, ಸಾಮಾಜಿಕ, ಆಡಳಿತಾತ್ಮಕ ಮತ್ತು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳುವ ಸಂದರ್ಭದಲ್ಲಿ ದಲಿತರನ್ನು ಮಾನಸಿಕವಾಗಿ ಒಪ್ಪಿಕೊಳ್ಳುವ ಮನಸ್ಸುಗಳು ಸಮಕಾಲೀನ ಸಮಾಜದಲ್ಲಿ ಕಾಣುತ್ತಿಲ್ಲ’ ಎಂದರು.

ಪ್ರಸಾರಾಂಗದ ನಿರ್ದೇಶಕ ಹೆಬ್ಬಾಲೆ ಕೆ. ನಾಗೇಶ್‌, ಲಲಿತ ಕಲಾ ನಿಕಾಯದ ಡೀನ್‌ ಅಶೋಕಕುಮಾರ ರಂಜೇರೆ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ವೆಂಕಟಗಿರಿ ದಳವಾಯಿ, ಪ್ರಾಧ್ಯಾಪಕರಾದ ಕೆ.ಸಿ. ಶಿವಾರೆಡ್ಡಿ, ಡಿ. ಪಾಂಡುರಂಗಬಾಬು ಇದ್ದರು.

ಸರ್ವೋದಯ ಗಾಂಧಿ ಕನಸು:

‘ಸರ್ವರ ಏಳಿಗೆಯಿಂದ ದೇಶದ ಸರ್ವತೋಮುಖ ಬೆಳವಣಿಗೆ ಸಾಧ್ಯ. ಸರ್ವೋದಯದ ಆಶಯವೇ ಅದು ಎಂದು ಗಾಂಧೀಜಿ ಹೇಳಿದ್ದರು. ಅದು ಈಡೇರಿದರೆ ಗಾಂಧಿ ಅವರ ಕನಸು ಈಡೇರಿದಂತಾಗುತ್ತದೆ’ ಎಂದು ಲೋಕನಾಯಕ ಜಯಪ್ರಕಾಶ ನಾರಾಯಣ ಸರ್ವೋದಯ ಟ್ರಸ್ಟ್‌ ಅಧ್ಯಕ್ಷ ನಾರಾಯಣ ಭಟ್ಟ ತಿಳಿಸಿದರು.

ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಗ್ರಾಮೀಣ ಜನರ ಬದುಕು ಹಸನಾಗಿಸಲು ಸರ್ಕಾರ ಆದ್ಯತೆ ಕೊಡಬೇಕು. ಗುಡಿ ಕೈಗಾರಿಕೆಗಳನ್ನು ಸಂರಕ್ಷಿಸಬೇಕು. ಆಗ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರಲು ಸಾಧ್ಯ’ ಎಂದು ಹೇಳಿದರು.

ಮುಖ್ಯಶಿಕ್ಷಕ ಪುರಂದರಚಾರ್‌, ಪ್ರಾಚಾರ್ಯ ಗೋಪಾಲರಾವ್‌, ಮುಖ್ಯಶಿಕ್ಷಕಿ ಎಂ. ನೇತ್ರಾವತಿ, ವಿಶ್ವನಾಥ ಕವಿತಾಳ, ಶಿಕ್ಷಕ ಕಲ್ಲೇಶ, ಯಲ್ಲಪ್ಪ ಭಂಡಾರದಾರ, ಎಚ್‌.ಎಂ. ಜಂಬುನಾಥ, ಪಾಂಡುರಂಗ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !