ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1.25 ಕೋಟಿ ಮೌಲ್ಯದ ಮೊಬೈಲ್‍ಗಳ ವಶ

ಕಳ್ಳರ ಜಾಲ ಭೇದಿಸಿದ ಪೊಲೀಸರು * ಒಂಬತ್ತು ಮಂದಿ ಸೆರೆ * ನೆರೆ ರಾಜ್ಯಗಳಲ್ಲಿ ಮಾರಾಟ
Last Updated 3 ಅಕ್ಟೋಬರ್ 2019, 20:26 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕದ್ದ ಮೊಬೈಲ್‍ಗಳನ್ನು ಹೈದರಾಬಾದಿಗೆ ಸಾಗಿಸಿ ಅರ್ಧ ಬೆಲೆಗೆ ಮಾರುತ್ತಿದ್ದ ಅಂತರರಾಜ್ಯ ಮೊಬೈಲ್ ಕಳ್ಳರ ಜಾಲ ಭೇದಿಸಿರುವ ಕೇಂದ್ರ ವಿಭಾಗದ ಪೊಲೀಸರು, ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ.

ಜೆ.ಜೆ. ನಗರದ ಕಿಜರ್ ಪಾಷಾ (21), ಆರಿಫ್‌ ಖಾನ್ ಅಲಿಯಾಸ್ ಆರಿಫ್‌ (39), ಆಸಿಫ್‌ ಖಾನ್ (36), ಚಿಕ್ಕಬಸ್ತಿ ನಿವಾಸಿ ನವಾಜ್ ಷರೀಫ್‌ (36), ಅಸ್ಲಾಂ (47), ಖಲೀಂ (20), ಸಲ್ಮಾನ್ (22), ಸೈಯದ್ ಅಕ್ಬರ್ (42), ಹೈದರಾಬಾದಿನ ಅಮೀರ್ ಜಮೀರ್ ಖಾನ್ (28) ಬಂಧಿತರು. ಆರೋಪಿಗಳಿಂದ ವಿವಿಧ ಕಂಪನಿಗಳ ₹ 1.25 ಕೋಟಿ ಮೌಲ್ಯದ 563 ಮೊಬೈಲ್‍ಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಎರಡು ಆಟೊ ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ.

ತಲೆಮರೆಸಿಕೊಂಡಿರುವ 4–5 ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಅವರಲ್ಲಿ, ಬಂಧಿತ ಅಸ್ಲಾಂನ ಪುತ್ರ ಅಫ್ರೋಜ್ ಕೂಡಾ ಇದ್ದಾನೆ. ಆತ ಈ ಜಾಲವನ್ನು ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಆರೇಳು ವರ್ಷಗಳಿಂದ ಆರೋಪಿಗಳು ಈ ದಂಧೆ ‌ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದರು. ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಗಾಂಜಾ, ಜೂಜಾಟ, ಸುಲಿಗೆ, ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಿಜರ್ ಪಾಷಾ ಮತ್ತು ಅಸ್ಲಾಂನ ಚಲನವಲನಗಳ ಮೇಲೆ ಒಂದೂವರೆ ತಿಂಗಳಿಂದ ಪೊಲೀಸರ ತಂಡ ನಿಗಾ ಇಟ್ಟಿತ್ತು. ಆಗ, ಈ ಇಬ್ಬರು ಇತರ ಆರೋಪಿಗಳ ಜೊತೆ ಸೇರಿ ಕದ್ದ ಮೊಬೈಲ್‍ಗಳನ್ನು ನೆರೆ ರಾಜ್ಯಗಳಿಗೆ ಸಾಗಿಸಿ ಮಾರಾಟ ಮಾಡುತ್ತಿರುವ ವಿಷಯ ಗೊತ್ತಾಗಿತ್ತು.

ಬಟ್ಟೆ ವ್ಯಾಪಾರಿಯಾಗಿದ್ದ ಕಿಜರ್ ಪಾಷಾ, ಸಲ್ಮಾನ್, ಆಟೊ ಚಾಲಕ ನವಾಜ್ ಷರೀಫ್‌, ಅಫ್ಜಲ್ ಶರೀಫ್, ಟೈರ್ ವ್ಯಾಪಾರ ಮಾಡುತ್ತಿದ್ದ ಖಲೀಂ ಮೊಬೈಲ್‍ ಕಳವು ಮಾಡುತ್ತಿದ್ದರು. ‌ಅದಕ್ಕೆ ಕಳವು ಮಾಡಿದ ಬೈಕ್, ಆಟೊ ರಿಕ್ಷಾಗಳನ್ನು ಬಳಸುತ್ತಿದ್ದರು, ಬಳಿಕ, ಆ ಮೊಬೈಲ್‍ಗಳನ್ನು ಆರೀಫ್‌ ಖಾನ್, ಆಸಿಫ್‌ ಖಾನ್, ಅಸ್ಲಾಂ ಹಾಗೂ ಸೈಯದ್ ಅಕ್ಬರ್‌ಗೆ ಕಡಿಮೆಗೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಕದ್ದ ಮೊಬೈಲ್‍ಗಳ ದತ್ತಾಂಶಗಳನ್ನು ನಾಶ ಮಾಡಿ, ಅವುಗಳನ್ನು ಖಾಸಗಿ ಬಸ್‌ ಅಥವಾ ಹಾಗೂ ಕೊರಿಯರ್ ಮೂಲಕ ಹೈದರಾಬಾದ್‌, ಕೇರಳ, ತಮಿಳುನಾಡು, ಮುಂಬೈಗೆ ಕಳುಹಿಸುತ್ತಿದ್ದರು. ಹೈದರಾಬಾದ್‍ನಲ್ಲಿ ಸೆಕೆಂಡ್ ಹ್ಯಾಂಡ್ ಮೊಬೈಲ್ ಮಾರಾಟ ಮಳಿಗೆ ಹೊಂದಿರುವ ಆರೋಪಿ ಅಮೀರ್ ಜಮೀರ್ ಖಾನ್, ಆರೋಪಿಗಳಿಂದ ಮೊಬೈಲ್ ಖರೀದಿಸಿ, ಹೆಚ್ಚಿನ ಬೆಲೆಗೆ ಮಾರುತ್ತಿದ್ದ. ಕೆಲವು ಮೊಬೈಲ್‍ಗಳನ್ನು ಹೊಸ ಮೊಬೈಲ್ ಮಾದರಿಯಲ್ಲಿ ಸಿದ್ಧಪಡಿಸಿ ಮಾರುತ್ತಿದ್ದ. ಹೈದರಾಬಾದ್‌ನ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಇದೇ ರೀತಿ ಕದ್ದ ಮೊಬೈಲ್‌ ಖರೀದಿಸಿ ಇತರ ರಾಜ್ಯಗಳಲ್ಲಿ ಮಾರಾಟಕ್ಕೆ ನೆರವಾಗುತ್ತಿದ್ದ ಆರೋ ಪಿಗಳ ಬಂಧನಕ್ಕೆ ಹುಡುಕಾಟ ಮುಂದು ವರಿದಿದೆ ಎಂದು ಪೊಲೀಸರು ತಿಳಿಸಿದರು.

ನಗರದಲ್ಲಿರುವ ಮೊಬೈಲ್ ಕಳ್ಳರ ಬಗ್ಗೆ ಕಿಜರ್ ಪಾಷಾ ಮತ್ತು ಅಸ್ಲಾಂ ‘ವ್ಯವಹಾರ’ ನಡೆಸುತ್ತಿದ್ದರು. ಕದ್ದ ಮೊಬೈಲ್‍ಗೆ ಕಮಿಷನ್ ಕೊಡುತ್ತಿದ್ದರು. ವಾಟ್ಸ್‌ ಆ್ಯಪ್‌ ಗ್ರೂಪ್ ಮಾಡಿಕೊಂಡಿದ್ದ ಆರೋಪಿಗಳು, ಯಾವ ಮಾದರಿಯ ಮೊಬೈಲ್‍ಗಳಿಗೆ ಬೇಡಿಕೆ ಇದೆ, ಕದ್ದ ಮೊಬೈಲ್‌ಗಳನ್ನು ಯಾರಿಗೆ ತಲುಪಿಸಬೇಕು ಎಂದು ಸಂದೇಶ ಕಳುಹಿಸಿದ್ದರು.

ಮೊಬೈಲ್ ಕಳವು ವೇಳೆ ಸಿಕ್ಕಿಬಿದ್ದರೆ, ಯಾವುದೇ ಕಾರಣಕ್ಕೂ ತಮ್ಮ ಹೆಸರು ಹೇಳದಂತೆ ಆರೋಪಿಗಳು ಬೆದರಿಕೆ ಹಾಕುತ್ತಿದ್ದರು ಎಂದೂ ವಿಚಾರಣೆಯಿಂದ ಗೊತ್ತಾಗಿದೆ.

₹15 ಲಕ್ಷದ ವ್ಯವಹಾರ!

ಆರೀಫ್ ಖಾನ್ ಮತ್ತು ಅಮೀರ್ ಜಮೀರ್ ಖಾನ್ ಮಧ್ಯೆ ಪ್ರತಿವಾರ ₹ 10 ಲಕ್ಷದಿಂದ 15 ಲಕ್ಷವರೆಗೆ ವ್ಯವಹಾರ ನಡೆಯುತ್ತಿತ್ತು. ಆರೋಪಿಗಳ ನಡುವೆ ಆನ್‍ಲೈನ್ ಹಾಗೂ ನಗದು ರೂಪದಲ್ಲಿ ಹಣ ವರ್ಗಾವಣೆ ನಡೆದಿದೆ. ಆರೋಪಿಗಳು ಕದ್ದ ಮೊಬೈಲ್‍ಗಳ ಐಎಂಇಐ ಸಂಖ್ಯೆ ಡಿಲೀಟ್ ಮಾಡಿ, ಹೊಸತಾಗಿ ಮುದ್ರಿಸಿ ಮಾರಾಟ ಮಾಡು ತ್ತಿದ್ದರು. ಆದರೆ, ಅದಕ್ಕೆ ಯಾವ ತಂತ್ರಜ್ಞಾನ ಬಳಸುತ್ತಿದ್ದರು ಎನ್ನುವುದು ಗೊತ್ತಾಗಿಲ್ಲ
ಎಂದೂ ಪೊಲೀಸರು ಹೇಳಿದರು.

‘ಕಳವು ಪತ್ತೆಗೆ ತಜ್ಞರ ತಂಡ ರಚನೆ’

‘ಮೊಬೈಲ್ ಕಳವು, ಬಳಿಕ ಆ ಮೊಬೈಲ್‌ಗಳಲ್ಲಿರುವ ಡೇಟಾ ಅಳಿಸಿ ಹಾಕುವುದು, ಐಎಂಇಐ ನಂಬರ್ ಡಿಲೀಟ್ ಮಾಡುವ ಕೃತ್ಯ ಹೆಚ್ಚುತ್ತಿದೆ. ಅಂಥ ಪ್ರಕರಣಗಳನ್ನು ಪತ್ತೆ ಹಚ್ಚಲು ಪರಿಣತರ ತಂಡ ರಚನೆ ಮಾಡಲಾಗುವುದು’ ಎಂದು ಪೊಲೀಸ್‌ ಕಮಿಷನರ್‌ ಭಾಸ್ಕರ್‍ ರಾವ್ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಮೊಬೈಲ್ ಬಳಕೆದಾರರು ಜಿಪಿಎಸ್ ಬಳಕೆ ಮಾಡಿದರೆ, ಕಳವಾದ ಮೊಬೈಲ್‍ಗಳನ್ನು ಪತ್ತೆ ಮಾಡಲು ಅನುಕೂಲವಾಗಲಿದೆ. ವ್ಯಕ್ತಿಯೊಬ್ಬ ತನ್ನ ದಾಖಲೆಗಳನ್ನು ನೀಡಿ ಎಷ್ಟು ಬೇಕಾದರೂ ಸಿಮ್‍ ಕಾರ್ಡ್‌ ಪಡೆಯಲು ಅವಕಾಶವಿದೆ. ಆದರೆ, ಈ ಅನುಕೂಲವನ್ನು ದುರ್ಬಳಕೆ ಮಾಡುತ್ತಿರುವ ಕೆಲವು ‌ದುಷ್ಕರ್ಮಿಗಳು, ಬೇರೆಯವರ ಹೆಸರಿನಲ್ಲಿ ಸಿಮ್‍ ಕಾರ್ಡ್ ಪಡೆದು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಸಿಸಿಬಿ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಅನಧಿಕೃತವಾಗಿ ಸಿಮ್‍ ಮಾರಾಟ ಮಾಡುವವರ ಮೇಲೆ ನಿಗಾ ವಹಿಸಲಾಗುವುದು. ಅಕ್ರಮ ಕಂಡುಬಂದರೆ ಅಂಥವರ ವಿರುದ್ಧ ಟೆಲಿಗ್ರಾಫ್‌ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದರು.

‘ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳೂ ನಗರದಲ್ಲಿ ಹೆಚ್ಚುತ್ತಿವೆ. ಈ ಸಂಬಂಧ ವಾಹನಗಳ ತಯಾರಿಕಾ ಕಂಪನಿಗಳಿಗೆ ಪತ್ರ ಬರೆದು, ತಯಾರಿ ಸಂದರ್ಭದಲ್ಲೇ ವಾಹನಕ್ಕೆ ಜಿಪಿಎಸ್ ಅಳವಡಿಸುವಂತೆ ಮನವಿ ಮಾಡಲಾಗುವುದು. ಆ ಜಿಪಿಎಸ್‌ ಅನ್ನು ವಾಹನ ಮಾಲೀಕನ ಮೊಬೈಲ್ ನಂಬರ್‍ ಜೊತೆ ಸಂಪರ್ಕ ಕಲ್ಪಿಸಿದರೆ ಕಳವು ಆಗಿರುವ ವಾಹನಗಳನ್ನು ಪತ್ತೆ ಮಾಡುವುದು ಸುಲಭ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT