ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಬಿಬಿಎಂಪಿ ‘ಋಣಭಾರ’ಕ್ಕೆ 15 ಸಾವಿರ ಆಸ್ತಿ

ತೆರಿಗೆ ಪಾವತಿಸದ ಆಸ್ತಿಗಳು ‘ಅಟ್ಯಾಚ್‌’; ದಾಖಲೆಗಳಲ್ಲಿ ಪಾಲಿಕೆ ಹೆಸರು
Published 22 ಮೇ 2024, 0:30 IST
Last Updated 22 ಮೇ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಸುಮಾರು ₹234 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 15 ಸಾವಿರ ಆಸ್ತಿಗಳ ದಾಖಲೆಗಳಲ್ಲಿ ಬಿಬಿಎಂಪಿ ಹೆಸರು ಸೇರಿಕೊಳ್ಳಲಿದ್ದು, ಮಾಲೀಕರು ಪಾಲಿಕೆಯ ‘ಋಣಭಾರ’ಕ್ಕೆ ಸೇರಿಕೊಳ್ಳಲಿದ್ದಾರೆ.

ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿಗಳ ಮಾಹಿತಿಯನ್ನು ಉಪ ನೋಂದಣಾಧಿಕಾರಿ ಕಚೇರಿಗಳಿಗೆ ಬಿಬಿಎಂಪಿ ಕಳುಹಿಸಿದ್ದು, ಆಸ್ತಿಗಳನ್ನು ‘ಅಟ್ಯಾಚ್‌’ (ಋಣಭಾರ) ಮಾಡಿಕೊಳ್ಳುವ ಪ್ರಕ್ರಿಯೆ ನಡೆಸುವಂತೆ ಪತ್ರ ಬರೆದು ಮನವಿ ಸಲ್ಲಿಸಿದೆ.

ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ಜಾರಿ ಮಾಡಿ ಬೀಗ ಹಾಕುವ ಪ್ರಕ್ರಿಯೆಯನ್ನೂ ಬಿಬಿಎಂಪಿ ನಡೆಸಿತ್ತು. ಇಷ್ಟಾದರೂ ಆಸ್ತಿ ತೆರಿಗೆ ಪಾವತಿಸಿಲ್ಲ. ಹೀಗಾಗಿ, ಅಂತಹ ಮಾಲೀಕರಿಗೆ ಕಾನೂನಿನಂತೆ ಫಾರ್ಮ್‌ 13 ಜಾರಿ ಮಾಡಿ, ಉಪ ನೋಂದಣಾಧಿಕಾರಿ ಕಚೇರಿಯ ದಾಖಲೆಗಳಲ್ಲಿ ಬಿಬಿಎಂಪಿ ಹೆಸರನ್ನು ಸೇರಿಸುವ ‘ಅಟ್ಯಾಚ್‌’ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ಅವರು ‘ಪ್ರಜಾವಾಣಿ’ಗೆ  ತಿಳಿಸಿದರು.

ತೆರಿಗೆ ಸಂಗ್ರಹ ಕುಸಿತ: ಕಳೆದ ಆರ್ಥಿಕ ವರ್ಷದಲ್ಲಿ ದಾಖಲೆಯ ಆಸ್ತಿ ತೆರಿಗೆ ಸಂಗ್ರಹಿಸಿದ್ದ ಬಿಬಿಎಂಪಿ, ಈ ವರ್ಷದ ಆರ್ಥಿಕ ವರ್ಷದಲ್ಲಿ ಎರಡು ತಿಂಗಳು ಮುಗಿಯುತ್ತಿದ್ದರೂ ಶೇ 17.90ರಷ್ಟು ಮಾತ್ರ ಸಾಧನೆ ಮಾಡಿದೆ. 

ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ, ಈ ವರ್ಷ ಆಸ್ತಿ ತೆರಿಗೆ ಪಾವತಿಗೆ ಬಡ್ಡಿರಹಿತ ಹಾಗೂ  ಶೇ 5ರಷ್ಟು ರಿಯಾಯಿತಿಯನ್ನು ಜುಲೈ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಮೇ 20ರವರೆಗೆ ₹932 ಕೋಟಿ ಮಾತ್ರ ಪಾವತಿಯಾಗಿದೆ. ಕಳೆದ ಆರ್ಥಿಕ ವರ್ಷದ ಮೇ 20ವರೆಗೆ ₹1,813 ಕೋಟಿ ಸಂಗ್ರಹವಾಗಿತ್ತು.

‘ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಎಲ್ಲ ಮಾಲೀಕರಿಗೆ ಬಿಬಿಎಂಪಿ ಕಂದಾಯ ವಿಭಾಗದಿಂದ ನೋಟಿಸ್‌ ಜಾರಿಯಾಗಿದೆ. ಎಸ್‌ಎಂಎಸ್‌, ಐವಿಆರ್‌ಎಸ್‌ ಕರೆಗಳ ಮೂಲಕವೂ ಆಸ್ತಿ ತೆರಿಗೆ ಪಾವತಿಸುವಂತೆ ಆಗಾಗ್ಗೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಇಷ್ಟಾದ ಮೇಲೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಮುನೀಶ್‌ ಮೌದ್ಗಿಲ್‌ ತಿಳಿಸಿದರು.

ನಿತ್ಯದ ಗುರಿ ₹13.59 ಕೋಟಿ ಆಸ್ತಿ ತೆರಿಗೆ ಸಂಗ್ರಹ ಕಡಿಮೆಯಾಗುತ್ತಿರುವುದರಿಂದ ಕಂದಾಯ ಸಿಬ್ಬಂದಿಗೆ ನಿತ್ಯದ ಗುರಿ ನಿಗದಿ ಮಾಡಲಾಗಿದೆ. ಎಂಟು ವಲಯಗಳಲ್ಲಿ ನಿತ್ಯವೂ ₹13.59 ಕೋಟಿ ಸಂಗ್ರಹ ಮಾಡಬೇಕೆಂದು ತಾಕೀತು ಮಾಡಲಾಗಿದೆ. ಕಳೆದ ಏಳು ದಿನಗಳಲ್ಲಿ ಎಂಟೂ ವಲಯಗಳಿಂದ ₹18.82 ಕೋಟಿ ಮಾತ್ರ ಆಸ್ತಿ ತೆರಿಗೆ ಸಂಗ್ರಹವಾಗಿರುವುದರಿಂದ ನಿತ್ಯದ ಗುರಿಯನ್ನು ಮೇ 21ರಿಂದ ನೀಡಲಾಗಿದೆ. ಈ ವರ್ಷದ ಆಸ್ತಿ ತೆರಿಗೆ ಸಂಗ್ರಹದ ಗುರಿಯಲ್ಲಿ ಇನ್ನೂ ₹4277 ಕೋಟಿ ಸಂಗ್ರಹವಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT