ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಮರಳು ಲಾರಿ ಮುಷ್ಕರ

ಮಾಲೀಕರ ಜೊತೆ ಮಾತುಕತೆಗೆ ಮುಂದಾಗದ ರಾಜ್ಯ ಸರ್ಕಾರ
Last Updated 15 ಜುಲೈ 2013, 19:47 IST
ಅಕ್ಷರ ಗಾತ್ರ

ಬೆಂಗಳೂರು: ಸಮಗ್ರ ಮರಳು ನೀತಿ ರೂಪಿಸುವುದು ಸೇರಿದಂತೆ ಲಾರಿ ಮಾಲೀಕರ ವಿವಿಧ ಬೇಡಿಕೆಗಳ ಈಡೇರಿಕೆಯ ಬಗ್ಗೆ ಪರಿಶೀಲನೆ ನಡೆಸಲು ಸರ್ಕಾರ ಕೋರಿದ್ದ ಕಾಲಾವಕಾಶ ಸೋಮವಾರಕ್ಕೆ ಕೊನೆಗೊಂಡಿದೆ.

`ಸರ್ಕಾರದೊಂದಿಗೆ ಶನಿವಾರ ಮಾತುಕತೆ ನಡೆಸಿದ ಸಂದರ್ಭದಲ್ಲಿ ಲಾರಿ ಮಾಲೀಕರ ಸಮಸ್ಯೆಗಳ ಬಗ್ಗೆ ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಸೋಮವಾರ ಸಂಜೆಯವರೆಗೂ ಸರ್ಕಾರದ ಕಡೆಯಿಂದ ಯಾರೂ ಮಾತುಕತೆಗೆ ಆಹ್ವಾನ ನೀಡಿಲ್ಲ. ಹೀಗಾಗಿ ಸಮಗ್ರ ಮರಳು ನೀತಿ ರೂಪಿಸುವವರೆಗೂ ಲಾರಿ ಮುಷ್ಕರವನ್ನು ಮುಂದುವರಿಸಲಾಗುವುದು' ಎಂದು ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ತಿಳಿಸಿದರು.

`ಸಮಗ್ರ ಮರಳು ನೀತಿ ರೂಪಿಸುವ ವಿಚಾರದ ಬಗ್ಗೆ ಸರ್ಕಾರದ ನಿಲುವು ಏನು ಎಂಬುದನ್ನು ತಿಳಿಸಿಲ್ಲ. ಲಾರಿ ಮಾಲೀಕರ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ರಾಜ್ಯದಲ್ಲಿ ಪ್ರತಿನಿತ್ಯ ಸುಮಾರು 13 ಸಾವಿರ ಲೋಡ್ ಮರಳಿಗೆ ಬೇಡಿಕೆ ಇದೆ. ಈ ಪ್ರಮಾಣದ ಮರಳು ಸಾಗಣೆಗೆ ಸರ್ಕಾರ ಅನುಮತಿ ನೀಡಬೇಕು. ಮರಳು ಸಾಗಣೆ ಲಾರಿಗಳಿಗೆ ಸರ್ಕಾರ ಪರ್ಮಿಟ್ ನೀಡದೇ ಇದ್ದಲ್ಲಿ ಮುಷ್ಕರವನ್ನು ಮುಂದುವರಿಸಲಾಗುವುದು' ಎಂದು ಅವರು ಹೇಳಿದರು.

`ಮರಳು ಲಾರಿಯ ಜತೆಗೆ ಜಲ್ಲಿ ಹಾಗೂ ಇಟ್ಟಿಗೆ ಸಾಗಣೆ ಲಾರಿಗಳ ಮಾಲೀಕರೂ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಶುಕ್ರವಾರ (ಜುಲೈ 19) ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಎಲ್ಲ ಲಾರಿ ಮಾಲೀಕರು ಸಭೆ ಸೇರಿ ಮುಂದಿನ ನಡೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದೇವೆ' ಎಂದು ಅವರು ತಿಳಿಸಿದರು.

`ಮರಳು ಲಾರಿಗಳ ಮುಷ್ಕರದಿಂದ ಕಟ್ಟಡ ನಿರ್ಮಾಣ ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ರಾಜ್ಯದ ಸುಮಾರು 6 ಲಕ್ಷ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಹೀಗಾಗಿ ಲಾರಿ ಮುಷ್ಕರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು' ಎಂದು ಸಂಘದ ಕಾರ್ಯದರ್ಶಿ ಬಿ.ವಿ.ನಾರಾಯಣಪ್ಪ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT