ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: 13 ದಿನಗಳಲ್ಲಿ 172 ಡೆಂಗಿ ಪ್ರಕರಣ ಪತ್ತೆ

ರೋಗ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮ: ಸುರಲ್ಕರ್ ವಿಕಾಸ್‌ ಕಿಶೋರ್
Published 16 ಮೇ 2024, 15:38 IST
Last Updated 16 ಮೇ 2024, 15:38 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಈ ತಿಂಗಳ 13 ದಿನಗಳಲ್ಲಿ 172 ಡೆಂಗಿ ಪ್ರಕರಣಗಳು ಪತ್ತೆಯಾಗಿದ್ದು, ಪೂರ್ವ ಹಾಗೂ ಮಹದೇಪುರ ವಲಯದಲ್ಲಿ ಅತಿಹೆಚ್ಚು ಜನರಲ್ಲಿ ರೋಗ ಕಂಡುಬಂದಿದೆ. 

ನಗರ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಡೆಂಗಿ ನಿಯಂತ್ರಣಕ್ಕೆ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದರು.

ರಾಷ್ಟ್ರೀಯ ಡೆಂಗಿ ದಿನಾಚರಣೆ ಅಂಗವಾಗಿ ಪೂರ್ವ ವಲಯದ ರಾಮಸ್ವಾಮಿ ಪಾಳ್ಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಳೆ ಬಂದಾಗ ನೀರು ಸಂಗ್ರಹವಾಗಿ ಸೊಳ್ಳೆಗಳ ಸಂತತಿ ಹೆಚ್ಚಾಗಲಿದ್ದು, ಅದನ್ನು ಫಾಗಿಂಗ್ ಮತ್ತು ಔಷಧಿ ಸಿಂಪಡಿಸುವ ಮೂಲಕ ತಡೆಯಬೇಕು. ಹೂವಿನ ಕುಂಡ, ಬಿಸಾಕಿದ ಟೈರ್, ನೀರು ಸಂಗ್ರಹಿಸುವ ತೊಟ್ಟಿ, ನೀರಿನ ಬಾಟಲ್ ಸೇರಿದಂತೆ ಇತರೆಡೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಈ ಸಂಬಂಧ ಅಂತಹ ಜಾಗದಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಡೆಂಗಿ ಪ್ರಕರಣಗಳನ್ನು ನಿಯಂತ್ರಿಸಲು ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಸೊಳ್ಳೆ ನಿಯಂತ್ರಣ ಕುರಿತು ಅರಿವು ಮೂಡಿಸುವ ಹಾಗೂ ಔಷಧಿ ಸಿಂಪಡಿಸುವ ಕೆಲಸ ಮಾಡಲಾಗುತ್ತಿದೆ. ಆಯಾ ವಲಯದ ವಾರ್ಡ್ ಮಟ್ಟದಲ್ಲಿ ಒಂದು ವಾರ್ಡ್‌ಗೆ 4 ಔಷಧಿ ಸಿಂಪಡಣೆ ಮಾಡುವ ತಂಡಗಳನ್ನು ನಿಯೋಜನೆ ಮಾಡಿದ್ದು, ತಾತ್ಕಾಲಿಕವಾಗಿ  ಹಾಗೂ ಶಾಶ್ವತವಾಗಿ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಫಾಗಿಂಗ್ ಮತ್ತು ಔಷಧಿ ಸಿಂಪಡಣೆ ಮಾಡಲಾಗುತ್ತದೆ ಎಂದು ಹೇಳಿದರು.

ಲಾರ್ವಾ ಸಮೀಕ್ಷೆ: ಈಡೀಸ್, ಈಜಿಪ್ಟೈ ಎಂಬ ಸೊಳ್ಳೆಗಳಿಂದ ಡೆಂಗಿ‌ ರೋಗ ಹರಡುತ್ತದೆ. ಪ್ರಾರಂಭಿಕ ಹಂತದಲ್ಲೇ ಸೊಳ್ಳೆ ನಿಯಂತ್ರಣ ಮಾಡಲು ಲಾರ್ವಾ ಉತ್ಪತ್ತಿಯಾಗುವ ತಾಣಗಳನ್ನು‌ ಗುರುತಿಸಿ ನಾಶಪಡಿಸಲಾಗುತ್ತದೆ.

ಕೊಳಚೆ ಹಾಗೂ ಇನ್ನಿತರೆ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ನಮ್ಮ ಕ್ಲಿನಿಕ್ ವೈದ್ಯರ ತಂಡ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ತಂಡಗಳನ್ನು ರಚಿಸಿಕೊಂಡು ಮನೆ-ಮನೆ ಭೇಟಿ ನೀಡಿ ಡೆಂಗಿ ಪ್ರಕರಣಗಳ ಪತ್ತೆ ಹಚ್ಚುವ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಜಾಗೃತಿ ಅಭಿಯಾನ: ನಗರದಲ್ಲಿ ಡೆಂಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ, ಆಯಾ ವಲಯಗಳ ವಾರ್ಡ್ ಮಟ್ಟದಲ್ಲಿ ಜಾಗೃತಿ ಜಾಥಾ ಹಾಗೂ ಪಾಲಿಕೆಯ ಕಸ ಸಂಗ್ರಹಿಸುವ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ಡೆಂಗಿ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿಸಲಾಗುತ್ತಿದೆ. ಜೊತೆಗೆ ಮನೆ ಮನೆಗೆ ಡೆಂಗಿ ನಿಯಂತ್ರಣದ ಕುರಿತು ಭಿತ್ತಿಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.

ಮುಖ್ಯ ಆರೋಗ್ಯಾಧಿಕಾರಿ ಡಾ. ಮದನಿ, ಪೂರ್ವ ವಲಯ ಆರೋಗ್ಯಾಧಿಕಾರಿ ಡಾ. ಭಾಗ್ಯಲಕ್ಷ್ಮಿ, ಡೆಂಗಿ ನೋಡಲ್ ಅಧಿಕಾರಿ ಸುಜಾತಾ, ಆರೋಗ್ಯ ವೈದ್ಯಾಧಿಕಾರಿ, ಕಾಲೇಜು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

ವಲಯ; ಡೆಂಗಿ ಪ್ರಕರಣ (1ಮೇ 1ರಿಂದ 13ರವರೆಗೆ) ಮಹದೇವಪುರ;44 ಪೂರ್ವ;41 ದಕ್ಷಿಣ;34 ಬೊಮ್ಮನಹಳ್ಳಿ;23 ಪಶ್ಚಿಮ;16 ಆರ್.ಆರ್. ನಗರ;8 ಯಲಹಂಕ;6 ಒಟ್ಟು; 172

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT