ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2014ಕ್ಕೆ ನಿಂತುಹೋದ ವೈಚಾರಿಕತೆ: ಸತೀಶ್‌ ಜಾರಕಿಹೊಳಿ

‘ವಿಚಾರಕ್ರಾಂತಿ’ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿದ ಸಚಿವ ಸತೀಶ್‌ ಜಾರಕಿಹೊಳಿ
Published 28 ಫೆಬ್ರುವರಿ 2024, 16:34 IST
Last Updated 28 ಫೆಬ್ರುವರಿ 2024, 16:34 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರ್ಯ ದೊರೆತಾಗಿನಿಂದ ಭಾರತವು ಅಭಿವೃದ್ಧಿ ಪಥದಲ್ಲಿ ಸಾಗಿತ್ತು. ವೈಚಾರಿಕತೆಯೂ ಬೆಳೆಯುತ್ತಾ ಬಂದಿತ್ತು. 2014ಕ್ಕೆ ಅಭಿವೃದ್ಧಿಯೂ, ವೈಚಾರಿಕ ಚಿಂತನೆಗಳೂ ನಿಂತುಹೋದವು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ವಿಜ್ಞಾನ ದಿನಾಚರಣೆಯ ಅಂಗವಾಗಿ ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟ, ಮಾನವ ಬಂಧುತ್ವ ವೇದಿಕೆ, ನೇಗಿಲಯೋಗಿ ಟ್ರಸ್ಟ್‌, ಅಖಿಲ ಕರ್ನಾಟಕ ವಿಚಾರವಾದಿಗಳ ಟ್ರಸ್ಟ್‌ ಬುಧವಾರ ಹಮ್ಮಿಕೊಂಡಿದ್ದ ‘ವಿಚಾರಕ್ರಾಂತಿ’ ಒಂದು ದಿನದ ರಾಜ್ಯಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

1947ರಲ್ಲಿ ಮನುಷ್ಯನ ಆಯುಸ್ಸು ಸರಾಸರಿ 33 ವರ್ಷಗಳಾಗಿದ್ದವು. ಆನಂತರ ವಿಜ್ಞಾನ, ವೈದ್ಯಕೀಯ ಕ್ಷೇತ್ರ ಬೆಳೆದ ಕಾರಣ ಈಗ ಮನುಷ್ಯನ ಆಯುಸ್ಸು 66ಕ್ಕೇರಿದೆ. ವಿಜ್ಞಾನ ಇಲ್ಲದೇ ಬದುಕು ಇಲ್ಲ. ಈ ಸತ್ಯವನ್ನು ಯುವಪೀಳಿಗೆಗೆ ಹೇಳದೇಹೋದರೆ ಅಪಾಯ ಕಾದಿದೆ ಎಂದು ಎಚ್ಚರಿಸಿದರು.

‘ಎಲ್ಲರಲ್ಲಿಯೂ ವೈಚಾರಿಕತೆ ಮೂಡಿಸುವ, ಮೌಢ್ಯಮುಕ್ತರನ್ನಾಗಿ ಮಾಡುವ ಕಾರ್ಯದಲ್ಲಿ ನಮ್ಮ ಸಂಘಟನೆ ಕೆಲಸ ಮಾಡುತ್ತಿದೆ. 10–15 ವರ್ಷಗಳ ನಂತರ ಇದರ ಫಲ ಕಾಣಬಹುದು’ ಎಂದರು.

ಸಂಸ್ಕೃತಿ ಚಿಂತಕ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ‘ಪಾಶ್ಚಾತ್ಯರ ಭೌತಿಕವಾದ ಭಾರತಕ್ಕೆ ಬಂದ ಬಳಿಕ ವಿಚಾರವಾದ ಬೆಳೆಯಿತು ಎಂಬುದು ಸಾಮಾನ್ಯ ತಿಳಿವಳಿಕೆ. ಆದರೆ, ಚಾರ್ವಾಕ ಅವರ ಕಾಲದಿಂದಲೇ ಇಲ್ಲಿ ವಿಚಾರವಾದ ಬೆಳೆದಿತ್ತು. ಚಾರ್ವಾಕ ಅವರು ಜ್ಞಾನ ಮೀಮಾಂಸೆಯ ಪ್ರತಿಪಾದಕರಾಗಿದ್ದರು. ಅದಕ್ಕೆ ವಿರುದ್ಧವಾಗಿ ಪಾರಮಾರ್ಥಿಕ ಕಲ್ಪನೆಯನ್ನು ವೈದಿಕ ಪರಂಪರೆಯು ಬೆಳೆಸುತ್ತಾ ಬಂದಿದೆ. ಇಲ್ಲಿರುವುದು ಜೀವನವಲ್ಲ. ಬದುಕು ಮುಗಿದ ನಂತರದ ಸ್ವರ್ಗ, ನರಕ, ಪುನರ್ಜನ್ಮಗಳೇ ಪಾರಮಾರ್ಥಿಕದ ಗುರಿಗಳಾಗಿದ್ದವು’ ಎಂದು ತಿಳಿಸಿದರು.

ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ವಿಚಾರಕ್ರಾಂತಿ ಎನ್ನುವುದು ಏಕಮುಖಿ, ಏಕರೇಖೆಯಲ್ಲಿರುವುದಲ್ಲ. ಸಮಾಜವಾದ, ನಾಸ್ತಿಕವಾದ, ಸಮಾನತೆ, ಮೌಢ್ಯವಿರೋಧಿ ಹೋರಾಟ, ಜಾತಿವಿರೋಧಿ ಹೋರಾಟ, ವರ್ಗವಿರೋಧಿ ಹೋರಾಟಗಳೆಲ್ಲ ಆಯಾ ಸಂದರ್ಭಗಳಿಗೆ ಅನುಗುಣವಾಗಿ ಮುನ್ನೆಲೆಗೆ ಬಂದಿರಬಹುದು. ವಿಚಾರ ಕ್ರಾಂತಿ ಎನ್ನುವುದು ಇವುಗಳೆಲ್ಲ ಸೇರಿದ ಒಕ್ಕೂಟ’ ಎಂದು ಪ್ರತಿಪಾದಿಸಿದರು.

70–80ರ ದಶಕಗಳಲ್ಲಿ ಸಮಾನತೆಗಾಗಿ ಹೋರಾಟಗಳು ನಡೆಯುತ್ತಿದ್ದವು. ಈಗ ಸೌಹಾರ್ದಕ್ಕಾಗಿ ಹೋರಾಟ ಮಾಡಬೇಕಿದೆ. ಜಾತಿವಾದಿಗಳು, ಕೋಮುವಾದಿಗಳು ಪ್ರಬಲಗೊಂಡಿರುವುದೇ ಈ ಪಲ್ಲಟಕ್ಕೆ ಕಾರಣ ಎಂದು ಹೇಳಿದರು.

ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT