ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಾರಿ ಮುಷ್ಕರ ಸರಿಯಲ್ಲ’

Last Updated 21 ಡಿಸೆಂಬರ್ 2013, 19:43 IST
ಅಕ್ಷರ ಗಾತ್ರ

ಬೆಂಗಳೂರು: ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ ತೀರ್ಪುಗಳು ಮತ್ತು ಕೇಂದ್ರ ಸರ್ಕಾರದ ಸೂಚನೆ ಆಧರಿಸಿ, ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಅದನ್ನು ವಿರೋಧಿಸಿ ಲಾರಿ ಮಾಲೀಕರು ಮುಷ್ಕರ ಆರಂಭಿಸಿರು­ವುದು ಸರಿಯಲ್ಲ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ಶನಿವಾರ ಮಾಹಿತಿ ಹಕ್ಕು ಕಾಯ್ದೆ ಕುರಿತ ಕಾರ್ಯಾಗಾರ ಉದ್ಘಾಟನೆ ಬಳಿಕ ಪತ್ರಕರ್ತರ ಜೊತೆ ಅವರು ಮಾತನಾ­ಡಿದರು.
ಅಕ್ರಮವಾಗಿ ಮರಳು ತೆಗೆಯು­ವುದು, ಸಂಗ್ರಹಣೆ, ಸಾಗಣೆ, ಫಿಲ್ಟರ್‌ ಮರಳು ಉತ್ಪಾದನೆ ಮತ್ತು ಮರಳು ಸಾಗಣೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ನಿಯಮಗಳಿಗೆ ತಿದ್ದುಪಡಿ ತಂದಿದೆ. ಪರಿಸರವನ್ನು ರಕ್ಷಿಸುವ ಉದ್ದೇಶವೂ ಈ ತಿದ್ದುಪಡಿಯ ಹಿಂದಿದೆ. ಈ ಎಲ್ಲ ಅಂಶಗಳನ್ನೂ ಲಾರಿ ಮಾಲೀಕರು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಮರಳು ಸಾರ್ವಜನಿಕ ಸಂಪತ್ತು. ಈ ಕಾರಣಕ್ಕಾಗಿಯೇ ಸರ್ಕಾರದ ಇಲಾಖೆ ಮೂಲಕವೇ ಮರಳು ವಿಲೇವಾರಿ  ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ಪೊಲೀಸರು ಮತ್ತು ಇತರೆ ಇಲಾಖೆ­ಗಳ ಅಧಿಕಾರಿಗಳು ಕಿರುಕುಳ ನೀಡಲು ಹೊಸ ಮಸೂದೆ ಬಳಕೆಯಾಗಲಿದೆ ಎಂದು ಲಾರಿ ಮಾಲೀಕರು ತಗಾದೆ ಎತ್ತಿದ್ದಾರೆ. ಅವರಿಗೆ ಅಂತಹ ಸಂದೇಹ ಇದ್ದರೆ ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಲು ಅವಕಾಶವಿದೆ. ಏಕಾಏಕಿ ಮುಷ್ಕರ ಆರಂಭಿಸಿ, ಒತ್ತಡದ ಮೂಲಕ ಸರ್ಕಾರವನ್ನು ಮಣಿಸುವ ಪ್ರಯತ್ನಕ್ಕೆ ಕೈಹಾಕುವುದು ಉತ್ತಮ ಮಾರ್ಗವಲ್ಲ ಎಂದರು.

ಮುಂದುವರಿದ ಮುಷ್ಕರ
ನೂತನ ಮರಳು ಸಾಗಣೆ ನೀತಿ ವಿರೋಧಿಸಿ ಲಾರಿ ಮಾಲೀಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ನಿರ್ಮಾಣ ಚಟುವಟಿಕೆಗಳಿಗೆ ಮುಷ್ಕರದ ಬಿಸಿ ತಟ್ಟಲಾರಂಭಿಸಿದೆ.

‘ಮುಷ್ಕರಕ್ಕೂ ಮುನ್ನ ನಗರಕ್ಕೆ ಪ್ರತಿನಿತ್ಯ ಸುಮಾರು ಮೂರು ಸಾವಿರ ಲಾರಿ ಲೋಡ್ ಮರಳು ಬರುತ್ತಿತ್ತು. ಶುಕ್ರವಾರ ಮಧ್ಯರಾತ್ರಿಯಿಂದ ಮುಷ್ಕರ ಆರಂಭವಾದ ನಂತರ 400 ಲೋಡ್‌ ಮರಳು ಬಂದಿದೆ’ ಎಂದು ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್‌.ಷಣ್ಮುಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಮುಷ್ಕರದಿಂದಾಗಿ ನಗರದೆಲ್ಲೆಡೆ ಮರಳಿನ ಅಭಾವ ಸೃಷ್ಟಿಯಾಗಿದ್ದು, ಕಟ್ಟಡ ನಿರ್ಮಾಣ, ಮೆಟ್ರೊ ರೈಲು ಕಾಮಗಾರಿ ಮತ್ತಿತರ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಅಲ್ಲದೇ, ಮರಳು ದರದಲ್ಲೂ ಏರಿಕೆಯಾಗಿದೆ ಎಂದಿದ್ದಾರೆ.

ಬೇಡಿಕೆಗಳ ಸಂಬಂಧ ಸರ್ಕಾರದೊಂದಿಗೆ ಚರ್ಚೆ ನಡೆಸಲು ಸಿದ್ಧರಿದ್ದೇವೆ. ಆದರೆ, ಸರ್ಕಾರವೇ ಮಾತುಕತೆಗೆ ಕರೆದಿಲ್ಲ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT