ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24 ಆಸ್ತಿಗಳ ಗುರುತು: ‘ಶತ್ರು ಆಸ್ತಿ’ ಹರಾಜಿಗೆ ಸಿದ್ಧತೆ

ಗುತ್ತಿಗೆ ಪಡೆಯಲು ರಾಜ್ಯ ಸರ್ಕಾರ ಪ್ರಸ್ತಾವ
Published 27 ಜನವರಿ 2024, 23:32 IST
Last Updated 27 ಜನವರಿ 2024, 23:32 IST
ಅಕ್ಷರ ಗಾತ್ರ

ಬೆಂಗಳೂರು: ‘ಕಸ್ಟೋಡಿಯನ್‌ ಆಫ್‌ ಎನಿಮಿ ಪ್ರಾಪರ್ಟಿ ಫಾರ್ ಇಂಡಿಯಾ (ಸಿಇಪಿಐ)’ದ ವತಿಯಿಂದ ರಾಜ್ಯದಲ್ಲಿರುವ ‘ಶತ್ರುಗಳ ಆಸ್ತಿ’ ಎಂದು ಗುರುತಿಸಲಾದ 24 ಆಸ್ತಿಗಳ ಸಮೀಕ್ಷೆ ನಡೆಸಲಾಗಿದ್ದು, ಇವುಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಅವಕಾಶ ರಾಜ್ಯಕ್ಕೆ ಲಭ್ಯವಾಗಲಿದೆ.

ಪಾಕಿಸ್ತಾನ ಹಾಗೂ ಚೀನಾದ ನಾಗರಿಕತ್ವ ಪಡೆದುಕೊಂಡ ಜನರು ರಾಜ್ಯದಲ್ಲಿ ಆಸ್ತಿಗಳನ್ನು ಬಿಟ್ಟುಹೋಗಿದ್ದಾರೆ. ಈ ಆಸ್ತಿಗಳನ್ನು ರಾಜ್ಯ ಸರ್ಕಾರ ಸಾರ್ವಜನಿಕ ಬಳಕೆಗಾಗಿ ಗುತ್ತಿಗೆ ಆಧಾರದಲ್ಲಿ ತನ್ನ ಹಿಡಿತಕ್ಕೆ ಪಡೆಯುವ ಮೊದಲ ಅವಕಾಶ ಸಿಗಲಿದೆ.

‘ಸಿಇಪಿಐನ ಮುಂಬೈ ಪ್ರಾದೇಶಿಕ ಕಚೇರಿಯ ಪ್ರತಿನಿಧಿಗಳು ನಗರಕ್ಕೆ ಬಂದಿದ್ದರು. ‘ಶತ್ರು ಆಸ್ತಿ’ಗಳ ಸಮೀಕ್ಷೆಯನ್ನು ಅವರು ನಡೆಸಿದ್ದಾರೆ. ಈ ಆಸ್ತಿಗಳನ್ನು ದೀರ್ಘಕಾಲಕ್ಕೆ ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲು ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಲಿದೆ ಎಂದು ಮೌಖಿಕವಾಗಿ ಅವರಿಗೆ ತಿಳಿಸಲಾಗಿದೆ. ಸರ್ಕಾರ ಈ ಆಸ್ತಿಗಳನ್ನು ಗುತ್ತಿಗೆಗೆ ಪಡೆಯದಿದ್ದರೆ ಅವುಗಳನ್ನು ಹರಾಜು ಮಾಡುವ ಯೋಜನೆಯನ್ನು ಸಿಇಪಿಐ ಹೊಂದಿದೆ’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘24 ಶತ್ರುಗಳ ಆಸ್ತಿಗಳು’ ಬೆಂಗಳೂರು ನಗರ, ಕಲಬುರಗಿ, ವಿಜಯಪುರ ಮತ್ತು ಉಡುಪಿ ಜಿಲ್ಲೆಗಳಲ್ಲಿದ್ದು, ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ‘ನಾವು ಆಸ್ತಿಗಳನ್ನು ಪರಿಶೀಲನೆ ಮಾಡಿದ್ದು, ಪೆಟ್ರೋಲ್‌ ಬಂಕ್‌, ಹೋಟೆಲ್‌ ಸೇರಿದಂತೆ ಇತರೆ ವ್ಯವಹಾರಗಳನ್ನು ಈ ಆಸ್ತಿಗಳಲ್ಲಿ ನಡೆಸಲಾಗುತ್ತಿದೆ’ ಎಂದು ದಯಾನಂದ್‌ ಹೇಳಿದರು.

‘ಎನಿಮಿ ಪ್ರಾಪರ್ಟ್‌ ಕಾಯ್ದೆ 1968’ ಪ್ರಕಾರ ಸಿಇಪಿಐ ಈ ಆಸ್ತಿಗಳನ್ನು ‘ಶತ್ರುಗಳ ಆಸ್ತಿ’ ಎಂದು ಘೋಷಿಸಿದೆ. ದೇಶದಲ್ಲಿ ಇಂತಹ 9,406 ಆಸ್ತಿಗಳಿದ್ದು, ಕರ್ನಾಟಕದಲ್ಲಿ 24 ಆಸ್ತಿಗಳಿವೆ.

ಬೆಂಗಳೂರಿನಲ್ಲಿ ‘ಶತ್ರುಗಳ ಆಸ್ತಿ’ ಎಂದು ಗುರುತಿಸಲಾದ ಆರು ಆಸ್ತಿಗಳಿದ್ದು, 1.5 ಲಕ್ಷ ಚದರ ಅಡಿ ವಿಸ್ತೀರ್ಣದ ಈ ಭೂಮಿ ಸುಮಾರು ₹500 ಕೋಟಿ ಬೆಲೆಬಾಳುತ್ತದೆ. ಪ್ರತಿಷ್ಠಿತ ರಾಜಭವನ ರಸ್ತೆ, ವಿಠ್ಠಲಮಲ್ಯ ರಸ್ತೆ, ವಿಕ್ಟೋರಿಯ ರಸ್ತೆಗಳಲ್ಲಿ ಈ ಆಸ್ತಿಗಳಿವೆ. ನಾಲ್ವರು ವ್ಯಕ್ತಿಗಳು ಈ ಆಸ್ತಿಗಳ ಮಾಲೀಕತ್ವವನ್ನು ಹೊಂದಿದ್ದು, ಮೂವರು ಪಾಕಿಸ್ತಾನಕ್ಕೆ ಹೋಗಿದ್ದಾರೆ. ಮತ್ತೊಬ್ಬರು ಚೀನಾದ ನಾಗರಿಕತ್ವ ಪಡೆದುಕೊಂಡಿದ್ದಾರೆ.

ದಾಖಲೆಗಳ ಪ್ರಕಾರ, ರಾಜಭವನ ರಸ್ತೆಯಲ್ಲಿ 1.23 ಲಕ್ಷ ಚದರ ಅಡಿಯಷ್ಟಿರುವ ‘ಶತ್ರು ಆಸ್ತಿ’ ಒಬ್ಬ ವ್ಯಕ್ತಿಯದ್ದಾಗಿದೆ. ಉಳಿದ ಆಸ್ತಿಗಳು 950 ಚದರ ಅಡಿಯಿಂದ 7,897 ಚದರ ಅಡಿ ವಿಸ್ತೀರ್ಣದಲ್ಲಿವೆ.

ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿಯನ್ನು ಹೊರತಂದಿದ್ದು, ಜಿಲ್ಲಾಧಿಕಾರಿಗಳು ‘ಶತ್ರು ಆಸ್ತಿ’ ಒತ್ತುವರಿಯನ್ನು ತೆರವುಗೊಳಿಸುವ ಅಧಿಕಾರವನ್ನು ಹೊಂದಿದ್ದಾರೆ. ನಂತರ ಈ ಆಸ್ತಿಗಳನ್ನು ಹರಾಜು ಮಾಡಬಹುದು. ದೇಶದಲ್ಲಿರುವ ‘ಶತ್ರು ಆಸ್ತಿಗಳಲ್ಲಿನ’ ಒತ್ತುವರಿ ತೆರವುಗೊಳಿಸಿ, ಅವುಗಳನ್ನು ಮಾರಾಟ ಮಾಡುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಕಳೆದ ವರ್ಷ ಮಾರ್ಚ್‌ದಿಂದ ಆರಂಭಿಸಿದೆ.

ಬೆಂಗಳೂರಿನಲ್ಲಿರುವ ‘ಶತ್ರು ಆಸ್ತಿ’

  • ಜೊಸೆಫೈನ್‌ ರಾಜಮ್ಮ ಕ್ಸೇವಿಯರ್, ವಿಕ್ಟೋರಿಯ ರಸ್ತೆ (ಎರಡು ಆಸ್ತಿಗಳು)

  • ಸೈಯದ್‌ ಅಬ್ದುಲ್‌ ಶುಕ್ಕುರ್, 2ನೇ ಮುಖ್ಯರಸ್ತೆ, ಕಲಾಸಿಪಾಳ್ಯ

  • ಮರಿಯಮ್‌ ಮಿರ್ಜಾ ಖಲೀಲಿ, ರಾಜಭವನ ರಸ್ತೆ (ಎರಡು ಆಸ್ತಿಗಳು)

  • ಮೈಕೆಲ್‌ ಥಾಮ್‌, ವಿಠ್ಠಲ ಮಲ್ಯ ರಸ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT