ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ 4ರಿಂದ ಮೆಟ್ರೊ ನೌಕರರ ಮುಷ್ಕರ

ಬಿಎಂಆರ್‌ಸಿಎಲ್‌ಗೆ ನೌಕರರ ಸಂಘದಿಂದ ನೋಟಿಸ್‌
Last Updated 18 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೂನ್‌ 4ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ನೌಕರರ ಸಂಘ ನಿರ್ಧರಿಸಿದೆ.

ಇದೇ ಮಾರ್ಚ್‌ 22ರಿಂದ ಮುಷ್ಕರಕ್ಕೆ ನಡೆಸುವುದಾಗಿ ಸಂಘವು ಬಿಎಂಆರ್‌ಸಿಎಲ್‌ಗೆ ನೋಟಿಸ್‌ ನೀಡಿತ್ತು. ಇದರ ಬೆನ್ನಲ್ಲೇ, ನಿಗಮವು ಎಸ್ಮಾ ಜಾರಿಗೊಳಿಸುವುದಕ್ಕೆ ನೀಡಿದ್ದ ತಡೆಯಾಜ್ಞೆ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ ಮೊರೆ ಹೋಗಿತ್ತು.  ಸಂಘದ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸುವ ಮೂಲಕ ಸಮಸ್ಯೆ ಇತ್ಯರ್ಥಪಡಿಸುವಂತೆ ಹೈಕೋರ್ಟ್‌ ನಿಗಮಕ್ಕೆ ಸಲಹೆ ನೀಡಿತ್ತು. ನಿಗಮವು ಮಾತುಕತೆಗೆ ಒಪ್ಪಿದ್ದರಿಂದ ಸಂಘವು ಮುಷ್ಕರವನ್ನು ಮುಂದೂಡಿತ್ತು.

‘ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮತ್ತು ನೌಕರರ ಸಂಘದ ಪದಾಧಿಕಾರಿಗಳ ಮಧ್ಯೆ ಮಾರ್ಚ್‌ 26ರಿಂದ ಏಪ್ರಿಲ್‌ 4ರ ವರೆಗೆ ಅನೇಕ ಸಭೆಗಳು ನಡೆದಿವೆ. ನೌಕರರ ಬೇಡಿಕೆಗಳನ್ನು ಆಲಿಸಿದ ಆಡಳಿತ ಮಂಡಳಿ ಅವುಗಳನ್ನು ಈಡೇರಿಸುವ ಬಗ್ಗೆ ಯಾವುದೇ ಖಚಿತ ಭರವಸೆಯನ್ನು ನೀಡಿಲ್ಲ. ಆದರೆ, ವೇತನ ಪರಿಷ್ಕರಣೆಯೂ ಸೇರಿದಂತೆ ವಿವಿಧ ಬೇಡಿಕೆಗಳನ್ನೂ ಇದುವರೆಗೂ ಈಡೇರಿಸಿಲ್ಲ’ ಎಂದು ಸಂಘದ ಉಪಾಧ್ಯಕ್ಷ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ತಿಳಿಸಿದರು.

‘ಬೇಡಿಕೆ ಈಡೇರಿಸುವ ಬಗ್ಗೆ ಆಡಳಿತ ಮಂಡಳಿ ನಿರ್ಲಕ್ಷ್ಯ ಮನೋಭಾವ ತಾಳಿದ್ದರಿಂದ ಏಪ್ರಿಲ್‌ 28ರಂದು ಮತ್ತೆ ಮುಷ್ಕರಕ್ಕೆ ಕರೆ ನೀಡಿದ್ದೆವು. ಆಗಲೂ ಆಡಳಿತ ಮಂಡಳಿ ಹೈಕೋರ್ಟ್‌ ಮೊರೆ ಹೋಗಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಮೇ 3ರೊಳಗೆ ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಆದೇಶ ಮಾಡಿತ್ತು. ಮೇ 3ರಂದು  ನಿಗಮವು ಸಭೆ ಕರೆದಿತ್ತು. ಅಲ್ಲಿ ಯಾವುದೇ ಚರ್ಚೆ ನಡೆಸೆಯೇ ಅಧಿಕಾರಿಗಳು, ಬೇಡಿಕೆಗಳನ್ನು ಈಡೇರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಮುಂದೆ ಯಾವುದೇ ಸಭೆ ನಡೆಸುವುದಿಲ್ಲ ಎನ್ನುವ ಸೂಚನೆಯನ್ನೂ ಪರೋಕ್ಷವಾಗಿ ರವಾನಿಸಿದ್ದಾರೆ’ ಎಂದರು.

ನೌಕರರ ಬೇಡಿಕೆಗಳ ಬಗ್ಗೆ ಚರ್ಚೆಯನ್ನೇ ನಡೆಸದೆ ನಿಗಮವು  ಹೈಕೋರ್ಟ್‌ ಆದೇಶವನ್ನು ಉಲ್ಲಂಘಿಸಿದೆ ಎಂದು ಅವರು ಆರೋಪಿಸಿದರು.

‘ನಿಗಮದ ಕಾರ್ಯಾಚರಣೆ ವಿಭಾಗದ ಕೆಲವು ಸಿಬ್ಬಂದಿ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಯಾವುದೇ ಬಡ್ತಿ ನೀಡಿಲ್ಲ. ಆದರೆ, ಬಿಎಂಆರ್‌ಸಿಎಲ್‌ ಕೇಂದ್ರ ಕಚೇರಿಯ ಸಿಬ್ಬಂದಿಗೆ ಯಾವುದೇ ತಕರಾರು ಮಾಡದೆಯೇ ಬಡ್ತಿ ನೀಡಲಾಗಿದೆ’ ಎಂದು ಅವರು ದೂರಿದರು.
*
ನಮ್ಮ ಮೆಟ್ರೊ ನಿಗಮದ ನೌಕರರ ವೇತನ ಪರಿಷ್ಕರಣೆ ಮಾಡಬೇಕು ಮತ್ತು  ನೌಕರರ ಸಂಘಕ್ಕೆ ಮಾನ್ಯತೆ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ. ಅದನ್ನು ಈಡೇರಿಸುವ ಬದಲು ಬಿಎಂಆರ್‌ಸಿಎಲ್‌ ಸಂಘರ್ಷಕ್ಕೆ ಮುಂದಾಗಿದೆ.
– ಸೂರ್ಯನಾರಾಯಣ ಮೂರ್ತಿ, ಬಿಎಂಆರ್‌ಸಿಎಲ್‌ ನೌಕರರ ಸಂಘದ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT