ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊತ್ತಿ ಉರಿದ ತೈಲ ಹಡಗು

Last Updated 11 ಜನವರಿ 2018, 19:30 IST
ಅಕ್ಷರ ಗಾತ್ರ

ಬೀಜಿಂಗ್‌ (ಪಿಟಿಐ): ಪೂರ್ವ ಚೀನಾ ಸಮುದ್ರದಲ್ಲಿ ಅಪಘಾತಕ್ಕೀಡಾಗಿರುವ ಇರಾನ್‌ನ ತೈಲ ಸಾಗಣೆ ಹಡಗಿನ ಮುಂಭಾಗ ಸ್ಫೋಟಗೊಂಡಿದೆ. ಹಡಗಿನಲ್ಲಿದ್ದ ಇರಾನ್‌ ಮತ್ತು ಬಾಂಗ್ಲಾದೇಶ ಮೂಲದ 32 ನಾವಿಕರ ಪೈಕಿ ಒಬ್ಬನ ಮೃತದೇಹ ಪತ್ತೆಯಾಗಿದ್ದು ಉಳಿದವರಿಗಾಗಿ ಶೋಧ ನಡೆದಿದೆ.

ಹಡಗಿನಿಂದ ಸೋರಿಕೆಯಾಗುತ್ತಿರುವ ತೈಲದಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ.

ಇರಾನ್‌ನಿಂದ ದಕ್ಷಿಣ ಕೊರಿಯಾಕ್ಕೆ 1.36 ಲಕ್ಷ ಟನ್‌  ತೈಲ ಸಾಗಿಸುತ್ತಿದ್ದ ಹಡಗು ಮತ್ತು ಚೀನಾದ ಸರಕು ಸಾಗಣೆ ಹಡಗಿನ ನಡುವೆ ಶನಿವಾರ ಡಿಕ್ಕಿ ಸಂಭವಿಸಿತ್ತು.

‘ಬೆಂಕಿ ಆರಿಸಲು ತೆರಳಿದ್ದ ಹಡಗು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿ ಸುರಕ್ಷಿತ ಸ್ಥಳಕ್ಕೆ ಮರಳಿದೆ, ಈ ಕಾರ್ಯದಲ್ಲಿ ನಿರೀಕ್ಷಿತ ಪರಿಣಾಮ ಸಾಧ್ಯವಾಗಿಲ್ಲ’ ಎಂದು ಚೀನಾ ತಿಳಿಸಿದೆ.

‘ಚೀನಾದ ಹಡಗಿನಲ್ಲಿದ್ದ ಎಲ್ಲಾ 21 ನಾವಿಕರನ್ನು ರಕ್ಷಿಸಲಾಗಿದೆ. ಕಣ್ಮರೆಯಾಗಿರುವವರ ಶೋಧಕ್ಕಾಗಿ 12 ಹಡಗುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ’ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

‘ಬೆಂಕಿ ಹೊತ್ತಿಕೊಂಡ ತೈಲ ಸಾಗಣೆ ಹಡಗಿನಿಂದ ದಟ್ಟ ಹೊಗೆ ಏಳುತ್ತಿದೆ. ಹಡಗಿನಿಂದ ಹತ್ತು ಲಕ್ಷ ಬ್ಯಾರಲ್‌ ತೈಲವು ಸಮುದ್ರ ಸೇರುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು 1989ರಲ್ಲಿ ನಡೆದ ಎಕ್ಸನ್‌ ವೆಲ್ಡೆಜ್‌ ತೈಲ ಸಾಗಣೆ ಹಡಗಿನಿಂದ ಸಮುದ್ರಕ್ಕೆ ಸೋರಿಕೆಯಾದ ತೈಲಕ್ಕಿಂತ ಮೂರು ಪಟ್ಟು ಹೆಚ್ಚು ಎನ್ನುವುದು ಅಧಿಕಾರಿಗಳ ಕಳವಳಕ್ಕೆ ಕಾರಣವಾಗಿದೆ.

‘ಹಡಗಿನಲ್ಲಿ ಕಚ್ಚಾ ತೈಲದಿಂದ ಸಂಸ್ಕರಿಸಲಾದ ತೆಳು ತೈಲವನ್ನು ಸಾಗಿಸಲಾಗುತ್ತಿತ್ತು. ಇದು ಸಾಮಾನ್ಯ ಕಚ್ಚಾ ತೈಲಕ್ಕಿಂತ ವಿಷಕಾರಿ ಮತ್ತು ದಹನಕಾರಿಯಾಗಿದೆ’ ಎಂದು ಚೀನಾದ ಕ್ಸಿಯಾಮೆನ್‌ ವಿ.ವಿಯ ಎನರ್ಜಿ ಎಕನಾಮಿಕ್‌ ರಿಸರ್ಚ್‌ ಸೆಂಟರ್‌ನ ಲಿನ್‌ಬೊಕಿಯಾಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT