ಗಿರಡ್ಡಿ ಸಾಹಿತ್ಯ ಸಂಭ್ರಮದ ಹಂದರಗಂಬ: ಚಂಪಾ

7
‘ಈ ಹೊತ್ತಿಗೆ’ಯಿಂದ ನುಡಿನಮನ

ಗಿರಡ್ಡಿ ಸಾಹಿತ್ಯ ಸಂಭ್ರಮದ ಹಂದರಗಂಬ: ಚಂಪಾ

Published:
Updated:
ಗಿರಡ್ಡಿ ಸಾಹಿತ್ಯ ಸಂಭ್ರಮದ ಹಂದರಗಂಬ: ಚಂಪಾ

ಬೆಂಗಳೂರು: ಧಾರವಾಡ ಸಾಹಿತ್ಯ ಸಂಭ್ರಮದ ಹಂದರಗಂಬ ಡಾ.ಗಿರಡ್ಡಿ ಗೋವಿಂದರಾಜ ಅವರಾಗಿದ್ದರು ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಹೇಳಿದರು.

ಈ ಹೊತ್ತಿಗೆ ಸಾಹಿತಿ ಹಾಗೂ ಕಲಾವಿದರ ವೇದಿಕೆ ಆಶ್ರಯದಲ್ಲಿ ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಭಾನುವಾರ ನಡೆದ ‘ಗಿರಡ್ಡಿ ಮರೆಯಲಾರದ ಚೇತನ’ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗಿರಡ್ಡಿ ಅವರದ್ದು ತಟಸ್ಥ ಮನೋಭಾವ. ಯಾವುದೇ ಚಳವಳಿಗಳಲ್ಲಿ ಅವರು ಸಕ್ರಿಯರಾಗಿರಲಿಲ್ಲ. ಸಾಹಿತ್ಯ ಸಂಭ್ರಮ ಎಂಬುದು ಸಾಹಿತಿಗಳ ಸ್ನೇಹಕೂಟ ಆಗಿತ್ತು. ಈಗ ನಮ್ಮೆದುರಿಗೇ ಇದ್ದ ಮನುಷ್ಯನ ಬಿಂಬಗಳನ್ನು ಮೂಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

‘ಸಂಕ್ರಮಣ’ ಪತ್ರಿಕೆ ಆರಂಭವಾದಾಗ ಅವರು ಅನಿವಾರ್ಯವಾಗಿ ವಿಮರ್ಶಕರಾಗಬೇಕಾಯಿತು. ಮೊದಲ ಸಂಕ್ರಮಣ ಸಮ್ಮೇಳನ ಆದಾಗ ಅವರು ಬಹಳ ಪ್ರೀತಿಯಿಂದ ಕಂಡಿದ್ದರು. ಭಿನ್ನ ಆಚಾರ ವಿಚಾರ, ಒಲವು ಹೊಂದಿದ್ದವರನ್ನು ಸಮಾನವಾಗಿ ಕಾಣುವ ಮನೋಭಾವ ಅವರಿಗಿತ್ತು’ ಎಂದು ನೆನಪಿಸಿದರು.

ಡಾ.ಕೆ.ಸತ್ಯನಾರಾಯಣ ಮಾತನಾಡಿ, ‘ನಮ್ಮ ತತ್ವ ಸಿದ್ಧಾಂತಗಳು ಮೀರಿ ಬರಹಗಳು ಓದುಗರಿಗೆ ತಲುಪುತ್ತದೋ ಇಲ್ಲವೋ ಎಂಬುದು ಮುಖ್ಯ ಎಂದು ಗಿರಡ್ಡಿ ಹೇಳುತ್ತಿದ್ದರು. ಅವರು ತಾವು ಬೆಳೆದ, ರೂಪುಗೊಂಡ ಮಿತಿಯನ್ನು ದಾಟಿ ಓದುಗರನ್ನು ತಲುಪಿದರು’ ಎಂದರು.

ಪ್ರೊ.ಮಲ್ಲಿಕಾರ್ಜುನ ಹಿರೇಮಠ ಮಾತನಾಡಿ, ‘ಗಿರಡ್ಡಿ ಅವರು ಗುಂಪುಗಾರಿಕೆ ಮಾಡಲಿಲ್ಲ. ಜೈಪುರ ಸಾಹಿತ್ಯ ಸಮ್ಮೇಳನವನ್ನು ನೋಡಿಕೊಂಡು ಅದರ ಮಾದರಿಯಲ್ಲಿ ರೂಪಿಸಿದ ಸಾಹಿತ್ಯ ಸಂಭ್ರಮ ಇಡೀ ದೇಶದಲ್ಲಿ ವಿಶಿಷ್ಟವಾದದ್ದು. ಎಲ್ಲ ಸಾಹಿತಿಗಳನ್ನು ಒಂದೆಡೆ ಕೂರಿಸುವ ಕನಸು ಅವರಿಗಿತ್ತು. ಆ ಕಾರ್ಯಕ್ರಮ ಎಲ್ಲರಿಗೂ ಮುಕ್ತ ವೇದಿಕೆ ತೆರೆದಿಟ್ಟಿತು’ ಎಂದರು.

ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಮಾತನಾಡಿ, ‘ಕೇವಲ ಸಾಹಿತಿಗಳಲ್ಲದೇ ಬೇರೆ ಕ್ಷೇತ್ರದ ಜನರೂ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬಹುದು ಎಂಬುದನ್ನು ಗಿರಡ್ಡಿ ಅವರು ತೋರಿಸಿಕೊಟ್ಟರು’ ಎಂದರು.

ಲೇಖಕಿ ವಿಜಯಮ್ಮ ಮಾತನಾಡಿ, ‘ಗಿರಡ್ಡಿ ಅವರ ಕುಟುಂಬ ಪ್ರೀತಿ, ಮಾನವೀಯ ತುಡಿತ ದೊಡ್ಡದು. ಮೃದು ಮನಸ್ಸಿನವರಾಗಿದ್ದರು’ ಎಂದು ಸ್ಮರಿಸಿದರು. ಕವಿ ಜಯಂತ ಕಾಯ್ಕಿಣಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry