ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ತೆರಿಗೆ ಆಯುಕ್ತರ ಕಾರಿಗೆ ದಂಡ

ದೋಷಪೂರಿತ ನೋಂದಣಿ ಫಲಕ; ಸಂಚಾರ ಪೊಲೀಸರ ಕಾರ್ಯಾಚರಣೆ
Last Updated 13 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೋಷಪೂರಿತ ನೋಂದಣಿ ಫಲಕವಿದ್ದ ಆದಾಯ ತೆರಿಗೆ ಆಯುಕ್ತರ ಕಾರಿಗೆ ಸಂಚಾರ ಪೊಲೀಸರು ಶುಕ್ರವಾರ ದಂಡ ವಿಧಿಸಿದ್ದಾರೆ.

ಉತ್ತರ ಉಪವಿಭಾಗದ ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರ, ಜಾಲಹಳ್ಳಿ, ಪೀಣ್ಯ ಹಾಗೂ ಆರ್‌.ಟಿ.ನಗರ ಠಾಣೆ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, 193 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪೀಣ್ಯ ಬಳಿ ಹೊರಟಿದ್ದ ಆಯುಕ್ತರ ಕಾರು ತಡೆದಿದ್ದ ಪೊಲೀಸರು, ತಪಾಸಣೆ ನಡೆಸಿದ್ದರು. ನೋಂದಣಿ ಫಲಕದಲ್ಲಿ ಸಂಖ್ಯೆ ಜತೆಗೆ ‘ಭಾರತ ಸರ್ಕಾರ ಸೇವೆ, ಕಮಿಷನರ್‌ – ಇನ್‌ಕಮ್‌ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌, ಬೆಂಗಳೂರು’ ಎಂದು ಬರೆಸಲಾಗಿತ್ತು. ಆ ಫಲಕದ ಛಾಯಾಚಿತ್ರ ತೆಗೆದುಕೊಂಡ ಪೊಲೀಸರು, ಕಾರಿನ ಚಾಲಕನ ಹೆಸರಿಗೆ ₹100 ದಂಡ ವಿಧಿಸಿದರು

ಬಳಿಕ ಪೊಲೀಸರೇ ಆ ಫಲಕವನ್ನು ತೆರವುಗೊಳಿಸಿ ಜಪ್ತಿ ಮಾಡಿದರು. ಹೊಸ ಫಲಕ ಹಾಕಿಕೊಳ್ಳುವಂತೆ ಚಾಲಕನಿಗೆ ಎಚ್ಚರಿಕೆ ನೀಡಿ ಕಳುಹಿಸಿದರು.

‘ಈ ಕಾರು ಖಾಸಗಿಯದ್ದು. ಗುತ್ತಿಗೆ ಆಧಾರದಲ್ಲಿ ಬಾಡಿಗೆ ಪಡೆದಿರುವ ಆಯುಕ್ತರು, ಕಚೇರಿ ಕೆಲಸಕ್ಕೆ ಬಳಕೆ ಮಾಡುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ಕಿತ್ತನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ವೈಷ್ಣವ ಆಚಾರ್ಯರ ಸಂಘ, ಚಿತ್ರದುರ್ಗ ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಾಹನಗಳಿಗೆ ಅಳವಡಿಸಿದ್ದ ದೋಷಪೂರಿತ ಫಲಕಗಳನ್ನೂ ಪೊಲೀಸರು ತೆರವು ಮಾಡಿದರು.

ಕಾರ್ಯಾಚರಣೆ ನಿರಂತರ: ‘ದೋಷಪೂರಿತ ಫಲಕ ಪತ್ತೆಗೆ ತಿಂಗಳಿನಿಂದ ಕಾರ್ಯಾಚರಣೆ ಆರಂಭಿಸಿದ್ದು, ಮುಂದುವರಿಯಲಿದೆ. ಕಾನೂನು ಎಲ್ಲರಿಗೂ ಒಂದೇ. ಯಾವುದೇ ದೋಷಪೂರಿತ ಫಲಕವಿದ್ದರೂ ತೆರವು ಮಾಡುತ್ತೇವೆ’ ಎಂದು ಉತ್ತರ ಉಪವಿಭಾಗದ (ಸಂಚಾರ) ಎಸಿಪಿ ಜಗದೀಶ್ ನಾಯಕ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT