‘ಹಾಸಿಗೆ ಹಂಚಿಕೊಂಡರೆ ಬಡ್ತಿ ಸಿಗತ್ತೆ‘

7
ಪೀಣ್ಯ ಠಾಣೆಯಲ್ಲಿ ಎಫ್‌ಐಆರ್‌ ದಾಖಲು

‘ಹಾಸಿಗೆ ಹಂಚಿಕೊಂಡರೆ ಬಡ್ತಿ ಸಿಗತ್ತೆ‘

Published:
Updated:
‘ಹಾಸಿಗೆ ಹಂಚಿಕೊಂಡರೆ ಬಡ್ತಿ ಸಿಗತ್ತೆ‘

ಬೆಂಗಳೂರು: ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ನಗರದ ಕಂಪನಿಯೊಂದರ ಪ್ರಧಾನ ನಿರ್ದೇಶಕ ಗಿರೀಶ್ ಪಾಲಸ್ಕರ್ ಎಂಬುವರ ವಿರುದ್ಧ ಪೀಣ್ಯ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಅವರ ವಿರುದ್ಧ 32 ವರ್ಷದ ಮಹಿಳೆ ಜೂನ್ 15ರಂದು ದೂರು ನೀಡಿದ್ದಾರೆ. ಆರೋಪಿ ಗಿರೀಶ್ ಹಾಗೂ ಕೃತ್ಯಕ್ಕೆ ಸಹಕರಿಸಿದ ಆರೋಪದಡಿ ಸಹೋದ್ಯೋಗಿ ವೇಣುಗೋಪಾಲ್ ರಾವ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ವಿಚಾರಣೆಗೆ ಬರುವಂತೆ ಅವರಿಬ್ಬರಿಗೂ ನೋಟಿಸ್‌ ನೀಡಿದ್ದೇವೆ ಎಂದು ಪೊಲೀಸರು ತಿಳಿಸಿದರು.

ಮಹಿಳೆ ಹಲವು ವರ್ಷಗಳಿಂದ ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆರು ತಿಂಗಳ ಹಿಂದೆ ಅವರನ್ನು ಗಿರೀಶ್‌ ಕೈ ಕೆಳಗೆ ಕೆಲಸಕ್ಕೆ ನಿಯೋಜಿಸಲಾಗಿತ್ತು. ಆರಂಭದ ದಿನಗಳಿಂದಲೂ ಅವರು ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ದೂರು: ‘ಕಚೇರಿಯಲ್ಲಿ ಯಾರೂ ಇಲ್ಲದ ವೇಳೆ ಗಿರೀಶ್ ನನ್ನ ಮೈ–ಕೈ ಮುಟ್ಟಿ ಮಾತನಾಡಿಸುತ್ತಿದ್ದರು. ‘ನಾವಿಬ್ಬರೂ ಒಟ್ಟಿಗೇ ಸಮಯ ಕಳೆಯೋಣ. ರೆಸಾರ್ಟ್‌ಗೆ ಹೋಗೋಣ, ಕೊಠಡಿ ಕಾಯ್ದಿರಿಸುತ್ತೇನೆ. ನನ್ನ ಜತೆ ಹಾಸಿಗೆ ಹಂಚಿಕೊಂಡರೆ, ನಿನಗೆ ಬೇಗನೇ ಬಡ್ತಿ ಕೊಡಿಸುತ್ತೇನೆ. ವೇತನ ಹೆಚ್ಚಳ ಮಾಡಿಸುತ್ತೇನೆ’ ಎಂದು ಪೀಡಿಸುತ್ತಿದ್ದರು. ‌ಕಿರುಕುಳದಿಂದ ಬೇಸತ್ತು, ತಂಡದ ಮುಖ್ಯಸ್ಥ ವೇಣುಗೋಪಾಲ್‌ಗೆ ತಿಳಿಸಿದ್ದೆ’ ಎಂದು ಸಂತ್ರಸ್ತೆ ದೂರಿದ್ದಾರೆ.

‘ವೇಣುಗೋಪಾಲ್ ನನಗೆ ನೆರವಾಗುತ್ತಾರೆ ಎಂದು ಭಾವಿಸಿದ್ದೆ. ಆದರೆ, ‘ಗಿರೀಶ್‌ಗೆ ಸಹಕರಿಸು. ಇಂದಿನ ದಿನಗಳಲ್ಲಿ ಇವೆಲ್ಲ ಸಹಜ’ ಎಂದು ಹೇಳಿದರು. ಅದಾದ ಬಳಿಕ, ಗಿರೀಶ್ ವರ್ತನೆ ಮಿತಿಮೀರಿತ್ತು. ಹೀಗಾಗಿ, ಗಿರಿನಗರ ಠಾಣೆಗೆ ತೆರಳಿದ ದೂರು ಕೊಟ್ಟಿದ್ದೆ’ ಎಂದು ವಿವರಿಸಿದ್ದಾರೆ.

‘ಸಂತ್ರಸ್ತೆ ಕೆಲಸ ಮಾಡುತ್ತಿದ್ದ ಕಂಪನಿ ಪೀಣ್ಯ ಠಾಣೆ ವ್ಯಾಪ್ತಿಯಲ್ಲಿದ್ದ ಕಾರಣ, ಪ್ರಕರಣವನ್ನು ಆ ಠಾಣೆಗೆ ವರ್ಗಾಯಿಸಿದ್ದೇವೆ’ ಎಂದು ಗಿರಿನಗರ ಪೊಲೀಸರು ತಿಳಿಸಿದರು.

ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ

ಬೆಂಗಳೂರು:
ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸಗಿ, ಜೀವ ಬೆದರಿಕೆ ಹಾಕಿದ್ದ ಆರೋಪದಡಿ ಅಸ್ಸಾಂನ ಪಿಂಕುನಾಥ್‌ ಎಂಬುವರ ವಿರುದ್ಧ ಕೆಐಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಸ್ಸಾಂನ 24 ವರ್ಷದ ಮಹಿಳೆಯು ಆರೋಪಿ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಆತ ತಲೆಮರೆಸಿಕೊಂಡಿದ್ದಾನೆ.

‘ಒಂದೂವರೆ ವರ್ಷದ ಹಿಂದೆ ಮದುವೆ ಆಗಿದೆ. ನಾನು ಹಾಗೂ ಪತಿ, ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ದೇವನಹಳ್ಳಿಯಲ್ಲಿ ವಾಸವಿದ್ದೇವೆ. ಪತಿಯು ಭದ್ರತಾ ಕಂಪನಿಯೊಂದರಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸ್ನೇಹಿತ ಪಿಂಕುನಾಥ್‌, ನಾವಿರುವ ರಸ್ತೆಯಲ್ಲೇ ಮನೆ ಬಾಡಿಗೆ ಪಡೆದು ವಾಸವಿದ್ದ. ಪತಿಯ ಜತೆಯಲ್ಲಿ ಆತ ಆಗಾಗ ಮನೆಗೂ ಬಂದು ಹೋಗುತ್ತಿದ್ದ’ ಎಂದು ಸಂತ್ರಸ್ತೆಯು ದೂರಿನಲ್ಲಿ ಹೇಳಿದ್ದಾರೆ.

‘ಜೂನ್ 10ರ ರಾತ್ರಿ 8.30 ಗಂಟೆಗೆ ಪಿಂಕುನಾಥ್ ಮನೆಗೆ ಬಂದಿದ್ದ. ಕೆಲಸಕ್ಕೆ ಹೋಗಿದ್ದ ಪತಿ, ಇನ್ನೂ ಮನೆಗೆ ಬಂದಿರಲಿಲ್ಲ. ಒಳಗೆ ನುಗ್ಗಿದವನೇ ನನ್ನನ್ನು ಕೋಣೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ. ಅಲ್ಲದೆ, ಈ ವಿಷಯ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.’

‘ಜೂನ್ 11 ಹಾಗೂ 12ರಂದು ಸಹ ಮನೆಗೆ ನುಗ್ಗಿದ್ದ ಆತ, ಪುನಃ ಅತ್ಯಾಚಾರ ಎಸಗಿದ. ಇದರಿಂದ ನೊಂದು, ಪತಿಗೆ ವಿಷಯ ತಿಳಿಸಿದೆ. ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry